ಬಂಟ್ವಾಳದಲ್ಲಿ ಗಾಂಜಾ ಸಾಗಾಟ ಶಂಕಿತ ವಾಹನ ತಡೆಗೆ ಯತ್ನ; ಚಾಲಕ ಪರಾರಿ
ಬಂಟ್ವಾಳ : ಬಂಟ್ವಾಳ ಅಬಕಾರಿ ನಿರೀಕ್ಷಕ ಲಕ್ಷ್ಮಣ್ ಮತ್ತು ತಂಡದವರು ಅಕ್ರಮ ಗಾಂಜಾ ಸಾಗಾಟದ ಶಂಕೆಯ ಮೇರೆಗೆ ವಾಹನ ತಪಾಸಣೆ ನಡೆಸಿದ ವೇಳೆ, ಶಂಕಿತ ಪಿಕ್ಅಪ್ ವಾಹನದ ಚಾಲಕ ಪೊಲೀಸರು ನಿಲ್ಲಿಸುವ ಸೂಚನೆ ನೀಡಿದರೂ ಅತಿವೇಗದಲ್ಲಿ ಓಡಿಸಿಕೊಂಡು ಹೋಗಿ ಪರಾರಿಯಾದ ಘಟನೆ ಗುರುವಾರ ಸಂಜೆ ನಡೆದಿದೆ.
ದಕ್ಷಿಣ ಕನ್ನಡ ಅಬಕಾರಿ ಉಪ ಆಯುಕ್ತರ ನಿರ್ದೇಶನದಂತೆ, ಕೆಎ-70-6904 ನಂಬರಿನ ಬೊಲೇರೋ ಪಿಕ್ಅಪ್ ವಾಹನದಲ್ಲಿ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಅಬಕಾರಿ ನಿರೀಕ್ಷಕ ಲಕ್ಷ್ಮಣ್ ಅವರು ಸಿಬ್ಬಂದಿಗಳೊಂದಿಗೆ ಪಾಣೆಮಂಗಳೂರು ಹಳೆಯ ಸೇತುವೆ ಬಳಿ ವಾಹನ ತಡೆ ಕಾರ್ಯಾಚರಣೆಗೆ ಬಲೆಯೊಡ್ಡಿದ್ದರು.
ಆದರೆ, ಮಂಗಳೂರಿನ ದಿಕ್ಕಿನಿಂದ ಬಂದ ಶಂಕಿತ ವಾಹನವನ್ನು ತಡೆಯಲು ಸೂಚನೆ ನೀಡುತ್ತಿದ್ದಂತೆಯೇ, ಚಾಲಕನು ಇಲಾಖಾ ವಾಹನವನ್ನು ಕಂಡು ಆತಂಕಗೊಂಡು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಸೇತುವೆ ದಾಟಿ ನಂದಾವರ ರೈಲ್ವೇ ಟ್ರ್ಯಾಕ್ ಬಳಿಯ ಖಾಲಿ ಜಾಗದಲ್ಲಿ ವಾಹನ ನಿಲ್ಲಿಸಿ ಸ್ಥಳದಿಂದ ಪರಾರಿಯಾದನು ಎಂದು ತಿಳಿದುಬಂದಿದೆ.
ಈ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ. 110/2025ರಂತೆ ಭಾರತೀಯ ದಂಡ ಸಂಹಿತೆಯ ಕಲಂ 281, 132, 109ರಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.