ಬಂಟ್ವಾಳ: ಸುಳ್ಳು ದೂರು ಮತ್ತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ – ಇಬ್ಬರ ವಿರುದ್ಧ ಪೊಲೀಸ್ ಪ್ರಕರಣ
ಬಂಟ್ವಾಳ: ಬಂಟ್ವಾಳ ತಾಲೂಕು ಸಜೀಪ ಮುನ್ನೂರು ಗ್ರಾಮದ ನಂದಾವರ ನಿವಾಸಿ ಉಮ್ಮರ್ ಫಾರೂಕ್ (48), 2025ರ ಜೂನ್ 13ರಂದು ನೀಡಿದ ದೂರಿನಂತೆ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ. 68/2025ರಲ್ಲಿ BNS ಕಲಂ 109, 324(4), 3(5) ರಂತೆ ಪ್ರಕರಣ ದಾಖಲಿಸಲಾಗಿತ್ತು.
ಆದರೆ, ತನಿಖೆಯ ಬಳಿಕ ದೂರು ಸುಳ್ಳು ಎಂದು ತೋರಿ, ಪೊಲೀಸರು ಮಾನ್ಯ ನ್ಯಾಯಾಲಯಕ್ಕೆ ‘ಬಿ ಅಂತಿಮ ವರದಿ’ ಸಲ್ಲಿಸಿದರು. ಬಳಿಕ ಸುಳ್ಳು ದೂರು ನೀಡಿದ ಉಮ್ಮರ್ ಫಾರೂಕ್ ವಿರುದ್ಧ ಅ.ಕ್ರ. 128/2025ರಲ್ಲಿ BNS ಕಲಂ 192, 353(1)(B), 230(1), 248(A)ರಂತೆ ಹೊಸ ಪ್ರಕರಣ ದಾಖಲಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರಸ್ತುತ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಇದರ ನಡುವೆಯೇ, ಅಶ್ರಫ್ ತಲಪಾಡಿ ಎಂಬಾತ ತನ್ನ ಫೇಸ್ಬುಕ್ ಖಾತೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಹರಡಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಅಷ್ಟೇ ಅಲ್ಲದೆ, ರಿಯಾಜ್ ಕಡಂಬು ಎಂಬಾತನು, ತನಿಖೆಯಲ್ಲಿದ್ದ ಪ್ರಕರಣಕ್ಕೆ ಸಂಬಂಧಿಸಿದ ನೋಟಿಸ್ ವಿಚಾರದಲ್ಲಿ ಸತ್ಯಾಸತ್ಯತೆ ಪರಿಶೀಲಿಸದೆ, ಅಪೂರ್ಣ ಮಾಹಿತಿಯೊಂದಿಗೆ ಸಂಬಂಧವಿಲ್ಲದ ಘಟನೆಗಳನ್ನು ಹೋಲಿಕೆ ಮಾಡಿಕೊಂಡು, ಧರ್ಮದ ಆಧಾರದ ಮೇಲೆ ಸಂಬಂಧ ಕಲ್ಪಿಸಿ, ತನ್ನ ಫೇಸ್ಬುಕ್ ಖಾತೆಯಲ್ಲಿ 2025ರ ಆಗಸ್ಟ್ 30ರಂದು ಸುಳ್ಳು ಸುದ್ದಿ ಹರಿಬಿಟ್ಟಿದ್ದಾನೆ.
ಇದರಿಂದ ಸಾರ್ವಜನಿಕರಲ್ಲಿ ಜಾತಿ–ಧರ್ಮದ ಆಧಾರದ ಮೇಲೆ ವೈರತ್ವ, ದ್ವೇಷ ಮತ್ತು ವೈಮನಸ್ಸು ಪ್ರೇರೇಪಿಸುವ ಪ್ರಯತ್ನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 134/2025ರಲ್ಲಿ BNS ಕಲಂ 353(2), 2023ರಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.