ಬಂಡೀಪುರದಲ್ಲಿ ‘ಧ್ವನಿ ಪತ್ತೇದಾರಿ ಯಂತ್ರ’ ಬಳಕೆಗೆ ಚಿಂತನೆ

??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Spread the love

ಬಂಡೀಪುರದಲ್ಲಿ ‘ಧ್ವನಿ ಪತ್ತೇದಾರಿ ಯಂತ್ರ’ ಬಳಕೆಗೆ ಚಿಂತನೆ

ಚಾಮರಾಜನಗರ: ಬಂಡೀಪುರ, ಬಿಳಿಗಿರಿರಂಗನಬೆಟ್ಟ, ಮಲೆಮಹದೇಶ್ವರ ಬೆಟ್ಟ ಸೇರಿದಂತೆ ಸಮೃದ್ಧ ಅರಣ್ಯ ಪ್ರದೇಶ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಬೇಟೆಗಾರರು ಮತ್ತು ಕಾಡುಕಳ್ಳರು ಇರುವುದು ಗುಟ್ಟಾಗಿ ಉಳಿದಿಲ್ಲ. ಆಗೊಮ್ಮೆ ಈಗೊಮ್ಮೆ ಸಿಕ್ಕಿ ಬೀಳುತ್ತಿದ್ದರೂ ಇವರು ಅರಣ್ಯಕ್ಕೆ ಕಂಟಕವಾಗಿರುವುದಂತು ನಿಜ.

ಮುಂದೆ ಬರಲಿರುವ ದಿನಗಳು ಬೇಸಿಗೆಯ ಕಾಲವಾಗಿರುವುದರಿಂದ ಕಾಡ್ಗಿಚ್ಚಿನ ಭಯವೂ ಕಾಡಲಾರಂಭಿಸಿದೆ. ಹೀಗಿರುವಾಗ ಅರಣ್ಯದೊಳಗೆ ಅಕ್ರಮ ಪ್ರವೇಶ ಮಾಡುವ ಕೆಲವರಿಂದ ಕಾಡ್ಗಿಚ್ಚಿನ ಭಯವೂ ಇಲ್ಲದಿಲ್ಲ. ಬೇಸಿಗೆ ಬರುತ್ತಿದ್ದಂತೆಯೇ ಕಾಡುಕಳ್ಳರು, ಬೇಟೆಗಾರರು ಹುಟ್ಟಿಕೊಳ್ಳುತ್ತಿದ್ದು ಅವರನ್ನು ಸದೆಬಡಿದು ಅರಣ್ಯ ರಕ್ಷಣೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮೇಲಿನಿಂದ ಮೇಲೆ ಹೊಸ ತಂತ್ರ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಲೇ ಬರುತ್ತಿದ್ದಾರೆ.

ಇದೀಗ ಕಳ್ಳಬೇಟೆಗಾರರನ್ನು ಪತ್ತೆ ಹಚ್ಚಲು ಹೊಸ ತಂತ್ರಜ್ಞಾನದತ್ತ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಸಿಎಫ್ ಡಾ.ರಮೇಶ್ ಕುಮಾರ್ ಮುಂದಾಗಿದ್ದು, ಕಳ್ಳಬೇಟೆಗಾರರ ಹಾವಳಿಯನ್ನು ತಡೆಯಲು ಧ್ವನಿ ಪತ್ತೇದಾರಿ ಯಂತ್ರವನ್ನು ಬಳಕೆ ಮಾಡುವ ಬಗ್ಗೆ ಚಿಂತನೆ ಮಾಡಿದ್ದಾರೆ. ಈ ಯಂತ್ರ ಧ್ವನಿಯನ್ನು ಸಂಗ್ರಹಿಸಿ ರವಾನಿಸುವುದರಿಂದ ಅರಣ್ಯದೊಳಗೆ ಪ್ರವೇಶಿಸುವ ಕಾಡುಗಳ್ಳರ ಸುಳಿವು ಪಡೆಯಲು ಸುಲಭವಾಗಲಿದೆಯಂತೆ.

ಹಾಗೆನೋಡಿದರೆ ಬಂಡೀಪುರ ಅರಣ್ಯದಲ್ಲಿ ಕಾಡುಕಳ್ಳರ ಮೇಲೆ ಹಿಂದಿನಿಂದಲೂ ನಿಗಾವಹಿಸುತ್ತಾ ಬರಲಾಗುತ್ತಿದೆ. ಆದರೂ ಅಲ್ಲೊಂದು ಇಲ್ಲೊಂದು ಕಳ್ಳತನ, ಬೇಟೆ ಹೀಗೆ ಪ್ರಕರಣಗಳು ಪತ್ತೆಯಾಗುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ಆರೋಪಿಗಳನ್ನು ಬಂಧಿಸಿ ಅವರಿಂದ ಹುಲಿಉಗುರು ಮತ್ತು ಹಲ್ಲುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದೆಲ್ಲವನ್ನು ಗಮನಿಸಿದರೆ ಅರಣ್ಯದೊಳಗೆ ನುಗ್ಗಿ ಕಾಡು ಪ್ರಾಣಿಗಳನ್ನು ಬೇಟೆಯಾಡುವ ಮತ್ತು ಹುಲಿ ಉಗುರು ಇನ್ನಿತರ ಪ್ರಾಣಿಗಳ ಅರಣ್ಯ ಸಂಪತ್ತನ್ನು ಲೂಟಿ ಮಾಡುವವರಿಗೇನು ಕೊರತೆಯಿಲ್ಲ.

ಕಾಡುಪ್ರಾಣಿಗಳನ್ನು ಬೇಟೆಯಾಡುವವರನ್ನು ಮತ್ತು ಕಾಡುಕಳ್ಳರನ್ನು ಮಟ್ಟ ಹಾಕುವ ಕಾರ್ಯವನ್ನು ಪೊಲೀಸ್ ಇಲಾಖೆ, ಅರಣ್ಯ, ನಕ್ಸಲ್ ನಿಗ್ರಹ ದಳ ಮಾಡುತ್ತಾ ಬಂದಿದ್ದರೂ ಸಂಪೂರ್ಣವಾಗಿ ಮಟ್ಟಹಾಕುವುದಕ್ಕೆ ಸಾಧ್ಯವಾಗಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದರೂ ಅವರ ಕಣ್ತಪ್ಪಿಸಿ ಕಳ್ಳಮಾರ್ಗಗಳಿಂದ ಅರಣ್ಯ ಪ್ರವೇಶಿಸಿ ಆರೋಪಿಗಳು ಕೃತ್ಯ ಎಸಗುತ್ತಿದ್ದಾರೆ. ಅದರಲ್ಲೂ ಕಾಡಂಚಿನ ಗ್ರಾಮಗಳಲ್ಲಿ ಬೇಟೆಗಾರರ ಹಾವಳಿ ಹೆಚ್ಚುತ್ತಿದ್ದು, ಜಿಲ್ಲೆಯ ಅರಣ್ಯಗಳು ತಮಿಳುನಾಡು ಮತ್ತು ಕೇರಳದೊಂದಿಗೆ ಹಂಚಿಕೊಂಡಿರುವುದರಿಂದ ಸ್ಥಳೀಯರಿಗಿಂತ ಹೆಚ್ಚಾಗಿ ಹೊರಗಿನಿಂದ ಇತ್ತ ಬಂದು ಕೃತ್ಯ ಎಸಗುವ ಬೇಟೆಗಾರರ ಸಂಖ್ಯೆ ಹೆಚ್ಚಾಗಿದೆ.

ಈ ಹಿಂದೆ ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯಿಂದಾಗಿ ವಿಶೇಷ ಕಾರ್ಯಾಚರಣೆ ಪಡೆಯ ಸಿಬ್ಬಂದಿಯನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಇದರಿಂದ ಕಾಡಂಚಿನ ಗ್ರಾಮಗಳಲ್ಲಿ ಮಾನವ ವನ್ಯಜೀವಿ ಸಂಘರ್ಷ, ವನ್ಯಜೀವಿಗಳ ಕಳ್ಳಬೇಟೆಗೆ ಉರುಳು ಅಳವಡಿಸುವುದು, ಮರಗಳ್ಳತನ ಸೇರಿದಂತೆ ಅರಣ್ಯ ಕಾಯ್ದೆ ಉಲ್ಲಂಘನೆಯ ಪ್ರಕರಣಗಳು ಎಗ್ಗಿಲ್ಲದೆ ಸಾಗಿದ್ದವು. ಅದನ್ನು ತಡೆಗಟ್ಟಲು ಅರಣ್ಯ ವಿಶೇಷ ಕಾರ್ಯಾಚರಣೆ ಪಡೆಗೆ ಅಗತ್ಯವಾದ ಸೌಲಭ್ಯಗಳನ್ನು ನೀಡಿ ಸಂಪೂರ್ಣ ಸಜ್ಜುಗೊಳಿಸುವ ಕಾರ್ಯ ಮಾಡಲಾಗಿದೆ. ಈಗಾಗಲೇ ಕಾಡಂಚಿನ ಗ್ರಾಮಗಳಲ್ಲಿ ಕಾಲ್ನಡಿಗೆ ಮೂಲಕ ಸಾಗಿ ವನ್ಯಜೀವಿ ಬೇಟೆಗೆ ಅಳವಡಿಸಿರುವ ಉರುಳು ಪತ್ತೆ ಹಚ್ಚುವ ಕೆಲಸವನ್ನು ಮಾಡಲಾಗಿದೆ. ಜತೆಗೆ ಮಾನವ ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಬಹಳಷ್ಟು ಬೇಟೆಗಾರರು ಯಾವುದೇ ಬಂದೂಕು ಬಳಸದೆ ಕಾಡಂಚಿನ ಗ್ರಾಮಗಳ ಜಮೀನುಗಳಲ್ಲಿ ಉರುಳು ಹಾಕುವ ಮೂಲಕ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದು, ಅದನ್ನು ಪತ್ತೆ ಹಚ್ಚಲಾಗುತ್ತದೆ. ಆದರೂ ಕಳ್ಳಬೇಟೆಗಾರರನ್ನು ಪತ್ತೆ ಹಚ್ಚುವುದು ಕಷ್ಟವಾಗಿ ಪರಿಣಮಿಸುತ್ತಿದೆ. ಹೀಗಾಗಿ ಅರಣ್ಯದಲ್ಲಿ ಧ್ವನಿ ಪತ್ತೇದಾರಿ ಯಂತ್ರ ಅಳವಡಿಸುವುದರಿಂದ ಕಳ್ಳಬೇಟೆಗಾರರ ಜಾಡನ್ನು ಪತ್ತೆಹಚ್ಚಲು ಈ ಯಂತ್ರ ಸಹಕಾರಿಯಾಗುವ ಸಾಧ್ಯತೆಯಿದೆ. ಈ ಯಂತ್ರದ ಕಾರ್ಯಕ್ಷಮತೆ ಉತ್ತಮವಾಗಿದೆ ಎಂಬ ಉದ್ದೇಶದಿಂದ ಯಂತ್ರದ ಬಳಕೆಗೆ ಚಿಂತನೆ ಮಾಡಲಾಗಿದ್ದು, ಶೀಘ್ರದಲ್ಲೇ ಇದನ್ನು ಕಾರ್ಯಗತಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ. ಧ್ವನಿ ಪತ್ತೇದಾರಿ ಯಂತ್ರ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.


Spread the love