ಬಂಡೀಪುರದಲ್ಲಿ ಪ್ರವಾಸಿಗರ ಸೆಳೆಯುವ ‘ಸುಂದರಿ’ ಹುಲಿ

Spread the love

ಬಂಡೀಪುರದಲ್ಲಿ ಪ್ರವಾಸಿಗರ ಸೆಳೆಯುವ ‘ಸುಂದರಿ’ ಹುಲಿ

ಗುಂಡ್ಲುಪೇಟೆ: ಬಂಡೀಪುರದಲ್ಲಿ ಸಫಾರಿಗೆ ಹೋದವರಿಗೆ ತಾಯಿ ಹುಲಿ ತನ್ನ ಮರಿಯೊಂದಿಗೆ ಚಿನ್ನಾಟವಾಡುತ್ತಿದ್ದ ದೃಶ್ಯವೊಂದು ಸೆರೆ ಸಿಕ್ಕಿದ್ದು ಅದೀಗ ವೈರಲ್ ಆಗಿದೆ.

ಸಾಮಾನ್ಯವಾಗಿ ಬಂಡೀಪುರ ಸಫಾರಿಗೆ ತೆರಳುವವರು ಯಾವುದಾದರೂ ಪ್ರಾಣಿ ಸಿಗುತ್ತಾ ಎಂದು ಅರಣ್ಯದಲ್ಲಿ ಹುಡುಕಾಟ ನಡೆಸುತ್ತಲೇ ಇರುತ್ತಾರೆ. ಈ ವೇಳೆ ಹುಲಿ ಸಿಕ್ಕರೆ ಕುಣಿದು ಕುಪ್ಪಳಿಸುತ್ತಾರೆ. ಹೀಗಿರುವಾಗ ಪುಟ್ಟ ಹುಲಿ ಮರಿ ತನ್ನ ತಾಯಿಯೊಂದಿಗೆ ಚಿನ್ನಾಟವಾಡುವ ದೃಶ್ಯ ಕಂಡರೆ ಅದಕ್ಕಿಂತ ಖುಷಿ ಇನ್ನೇನಿದೆ?

ಹಾಗೆನೋಡಿದರೆ ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕಾಡಿನ ನಡುವೆ ಅಡ್ಡಾಡುವ ದೃಶ್ಯಗಳು ಸಫಾರಿಗೆ ತೆರಳಿದವರಿಗೆ ಸಿಗುತ್ತಲೇ ಇರುತ್ತವೆ. ಈ ನಡುವೆ ‘ಸುಂದರಿ’ ಎಂಬ ಹೆಣ್ಣು ಹುಲಿ ಎರಡು ಗಂಡು ಮರಿಗಳೊಂದಿಗೆ ಕಳೆದ ಒಂದೂವರೆ ವರ್ಷದಿಂದ ಕಾಣಿಸಿಕೊಳ್ಳುತ್ತಿರುದ್ದು ಪ್ರವಾಸಿಗರ ಆಕರ್ಷಣೆಯಾಗಿದೆ.

ಈ ಹಿಂದೆ ಬಂಡೀಪುರದ ರಾಯಭಾರಿ ಎಂದು ಕರೆಸಿಕೊಳ್ಳುತ್ತಿದ್ದ ‘ಪ್ರಿನ್ಸ್’ ಹುಲಿ ಸಫಾರಿಯ ಕೇಂದ್ರ ಬಿಂದುವಾಗಿತ್ತು. ಅದರ ಸಾವಿನ ನಂತರ ಸಫಾರಿಗೆ ತೆರಳುತ್ತಿದ್ದ ಪ್ರವಾಸಿಗರಿಗೆ ಹುಲಿಗಳ ದರ್ಶನ ವಿರಳವಾಗಿತ್ತು. ಕೆಕ್ಕನಹಳ್ಳಿ ಸಮೀಪ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಮತ್ತೊಂದು ಮಾಯಾರ್ ರಾಣಿ ಎಂಬ ಹುಲಿಯೂ ಮೊದಲಿಗೆ ಕಾಣಿಸುತ್ತಿದ್ದರೂ ಇತ್ತೀಚೆಗೆ ಕಾಣಿಸುತ್ತಿರಲಿಲ್ಲ. ಹೀಗಾಗಿ ಪ್ರವಾಸಿಗರು ನಿರಾಸರಾಗಿದ್ದರು.

ಇದೀಗ ಸುಂದರಿ ಎಂಬ ಹುಲಿ ಮರಿಗಳೊಂದಿಗೆ ಕಾಣಿಸಿಕೊಳ್ಳುತ್ತಿರುವುದು ಸಫಾರಿ ತೆರಳುವವರಿಗೆ ಖುಪಿ ನೀಡುತ್ತಿದ್ದು, ಪ್ರಮುಖ ಆಕರ್ಷಣೆಯಾಗಿದೆ. ಸಾಮಾನ್ಯವಾಗಿ ಬೇಟೆಯಾಡಲು ಕಲಿತ ಮರಿಗಳನ್ನು ತಾಯಿ ಹುಲಿ ಹೊರಕ್ಕೆ ಕಳುಹಿಸುತ್ತದೆ ಈ ಮರಿಗಳನ್ನು ಪ್ರವಾಸಿಗರು ಅಕ್ಕರೆಯಿಂದ ಬಂಡೀಪುರ ಬ್ರದರ್ಸ್ ಎಂದು ಕರೆಯುತ್ತಿದ್ದಾರೆ ಒಂದೇ ಕಡೆ ಎರಡು ಹುಲಿಗಳು ಕಾಣಿಸಿಕೊಳ್ಳುವುದು ಅಪರೂಪವಾಗಿದ್ದು, ಇವುಗಳನ್ನು ನೋಡಲೆಂದೇ ಪ್ರವಾಸಿಗರು ಇತ್ತ ಹೆಜ್ಜೆ ಹಾಕುತ್ತಿದ್ದಾರೆ.


Spread the love