ಬಂಡೀಪುರದಲ್ಲಿ ಸೃಷ್ಟಿಯಾಗಿದೆ ನಿಸರ್ಗದ ಸ್ವರ್ಗ

Spread the love

ಬಂಡೀಪುರದಲ್ಲಿ ಸೃಷ್ಟಿಯಾಗಿದೆ ನಿಸರ್ಗದ ಸ್ವರ್ಗ

ಚಾಮರಾಜನಗರ: ಕಣ್ಣು ಹಾಯಿಸಿದುದ್ದಕ್ಕೂ ಹಸಿರು ತುಂಬಿದ ನಿಸರ್ಗ.. ಅಲ್ಲಲ್ಲಿ ಹಾದು ಹೋಗುವ ಕಾಡಾನೆಗಳು.. ಘರ್ಜಿಸುವ ಹುಲಿಗಳು.. ಗುಂಪುಗುಂಪಾಗಿ ಗಾಬರಿಯಿಂದ ನೆಗೆದು ಓಡುವ ಜಿಂಕೆ, ಸಾರಂಗಗಳು.. ಹಕ್ಕಿಗಳ ಕಲರವ.. ಇಂತಹ ತಾಣದಲ್ಲಿ ಒಂದಷ್ಟು ಹೊತ್ತು ಕಳೆಯಬೇಕೆಂದು ಬಯಸುವವರು ಬಂಡೀಪುರದ ಹಾದಿ ಹಿಡಿಯುವುದು ಒಳ್ಳೆಯದು.

ಕಳೆದ ಕೆಲವು ವರ್ಷಗಳಿಂದ ಉತ್ತಮ ಮಳೆಯಾಗುತ್ತಿದೆ ಅದರಲ್ಲೂ ಈ ಬಾರಿ ಮುಂಗಾರು ಮತ್ತು ಹಿಂಗಾರು ಎರಡು ಮಳೆಯೂ ಸುರಿದ ಕಾರಣ ಇಡೀ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದ್ದು, ಎಲ್ಲಿ ನೋಡಿದರಲ್ಲಿ ಹಸಿರು ಚೆಲ್ಲಿದ ಅನುಭವವಾಗುತ್ತಿದೆ. ಅದರಲ್ಲೂ ಕಾಡಿನ ನಡುವಿನ ವಾತಾವರಣವಂತು ಪುಳಕಗೊಳಿಸುತ್ತದೆ.

ಅದರಲ್ಲೂ ಬಂಡೀಪುರದ ನಡುವೆಯಿರುವ ನೀರಿನ ಸೆಲೆಗಳಾದ ಕೆರೆಕಟ್ಟೆಗಳು ತುಂಬಿವೆ. ಹುಲ್ಲು, ಕುರುಚಲು ಕಾಡು, ಗಿಡ ಮರಗಳು ಎಲ್ಲವೂ ಹಸಿರಾಗಿ ನಿಸರ್ಗದ ಚೆಲುವೇ ನಾಟ್ಯವಾಡಿದಂತೆ ಭಾಸವಾಗುತ್ತಿದೆ.

ಹೀಗಾಗಿ ರಜಾ ದಿನಗಳಲ್ಲಿ ಪ್ರಕೃತಿಯ ವಿಹಂಗಮ ನೋಟವನ್ನು ಸವಿಯುವ ಸಲುವಾಗಿಯೇ ಪ್ರವಾಸಿಗರು ದಂಡು ದಂಡಾಗಿ ಬಂಡೀಪುರದತ್ತ ದೌಡಾಯಿಸುತ್ತಿರುವುದು ಕಂಡು ಬರುತ್ತಿದೆ.

ಬಂಡೀಪುರ ಹುಲಿಗಳ ಆವಾಸ ಸ್ಥಾನ. ಇವುಗಳನ್ನು ಹೊರತು ಪಡಿಸಿದರೆ ಕಾಡಾನೆ, ಕಾಡುಕೋಣ, ಜಿಂಕೆ, ಸಾರಂಗಗಳು, ಕರಡಿ ಸೇರಿದಂತೆ ಹಲವು ಪ್ರಾಣಿಗಳು, ಪಕ್ಷಿಗಳು ಇಲ್ಲಿ ಕಾಣಲು ಸಿಗುತ್ತವೆ. ಅಷ್ಟೇ ಅಲ್ಲದೆ ಅವು ಸ್ವಚ್ಛಂದವಾಗಿ ಓಡಾಡುತ್ತಾ ನೋಡುಗರನ್ನು ರೋಮಾಂಚನಗೊಳಿಸುತ್ತವೆ. ಸಾಮಾನ್ಯವಾಗಿ ಮಳೆಗಾಲದ ನಂತರ ಇಲ್ಲಿ ಹಲವು ಬಗೆಯ ಪ್ರಾಣಿಗಳು ಕಾಣಸಿಗುತ್ತವೆ. ಸಸ್ಯಹಾರಿಗಳಿಂದ ಹಿಡಿದು ಮಾಂಸ ಹಾರಿ ಪ್ರಾಣಿಗಳ ತನಕ ಎಲ್ಲ ರೀತಿಯ ಪ್ರಾಣಿ ಪಕ್ಷಿಗಳು ತಮ್ಮದೇ ಲೋಕದಲ್ಲಿ ವಿಹರಿಸುತ್ತಿರುತ್ತವೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವು ದೇಶದ ಪ್ರತಿಷ್ಠಿತ ತಾಣಗಳಲ್ಲೊಂದಾಗಿದ್ದು, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಈ ಮೂರು ರಾಜ್ಯಗಳಿಗೆ ಹೊಂದಿಕೊಂಡಂತಿದ್ದು, ಹುಲಿ ಸಂರಕ್ಷಿತ ಅಭಯಾರಣ್ಯವಾಗಿರುವುದರಿಂದ ಹುಲಿಗಳನ್ನು ನೋಡಲೆಂದೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಹಾಗೆ ಬರುವ ಪ್ರವಾಸಿಗರು ಸಫಾರಿಯಲ್ಲಿ ತೆರಳಿ ಹುಲಿಗಳನ್ನು ಹತ್ತಿರದಿಂದ ನೋಡಿ ಖುಷಿಪಡುತ್ತಾರೆ.

ಬಂಡೀಪುರವು ರಾಜ್ಯದ ಸಂಪರ್ಕ ಸೇತುವಾಗಿದ್ದು, ದಕ್ಷಿಣಕ್ಕೆ ತಮಿಳುನಾಡು ಮತ್ತು ಪಶ್ಚಿಮಕ್ಕೆ ಕೇರಳದ ಅರಣ್ಯಪ್ರದೇಶಗಳೊಂದಿಗೆ ವಿಲೀನಗೊಂಡಿದೆ.

ಬಂಡೀಪುರದ ಸುಂದರ ದೃಶ್ಯಗಳನ್ನು ನೋಡಿದವರು ಮತ್ತು ಅರಣ್ಯದಲ್ಲಿ ರಸಮಯ ಕ್ಷಣಗಳನ್ನು ಕಳೆದವರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿರುವುದರಿಂದಾಗಿ ಜನ ಆಕರ್ಷಣೆಗೊಂಡು ಇತ್ತ ಬರುತ್ತಿದ್ದಾರೆ. ಇವರ ಪೈಕಿ ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿರುವುದು ಖುಷಿಕೊಡುವ ವಿಚಾರವಾಗಿದೆ.


Spread the love