ಬಂಡೀಪುರ ಕಾಡಂಚಿನಲ್ಲಿ ಕಾಡಾನೆಗಳ ಉಪಟಳ

Spread the love

ಬಂಡೀಪುರ ಕಾಡಂಚಿನಲ್ಲಿ ಕಾಡಾನೆಗಳ ಉಪಟಳ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದ ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಜನ ಕಾಡಾನೆಗಳ ಭಯದಲ್ಲಿ ಬದುಕುವಂತಾಗಿದೆ. ಅರಣ್ಯದಿಂದ ನಾಡಿನತ್ತ ಲಗ್ಗೆಯಿಡುತ್ತಿರುವ ಕಾಡಾನೆಗಳು ರೈತರ ಜಮೀನಿಗೆ ನುಗ್ಗಿ ಫಸಲನ್ನು ನಾಶಪಡಿಸುತ್ತಿವೆ.

ಈ ನಡುವೆ ಬಂಡೀಪುರ ಅರಣ್ಯದಿಂದ ನೇರವಾಗಿ ಬಂದ ಒಂಟಿ ಸಲಗವೊಂದು ಗುಂಡ್ಲುಪೇಟೆ ತಾಲೂಕಿನ ಎಲಚಟ್ಟಿ ಗ್ರಾಮದ ಮಾಯಪ್ಪ ಎಂಬುವರ ಮನೆ ಮೇಲೆ ದಾಳಿ ಮಾಡಿ ಕಬ್ಬಿಣದ ಗೇಟ್ ಮತ್ತು ಗೋಡೆಗೆ ಹಾನಿಮಾಡಿದೆ.

ಈ ಒಂಟಿ ಸಲಗದ ಉಪಟಳದಿಂದ ಬೆಚ್ಚಿರುವ ಗ್ರಾಮಸ್ಥರು ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಜಮೀನಿನಲ್ಲಿ ಕೆಲಸವಿದ್ದರೂ ಮನೆಯಿಂದ ತೆರಳಲು ಭಯ ಪಡುವಂತಾಗಿದೆ.

ಈ ಸಮಯದಲ್ಲಿ ಬೆಳೆಗಳು ಬೆಳೆದು ನಿಂತಿದ್ದು ಅವುಗಳನ್ನು ವನ್ಯಪ್ರಾಣಿಗಳಿಂದ ರಕ್ಷಿಸಲು ರೈತರು ರಾತ್ರಿ ವೇಳೆ ಹೊಲದಲ್ಲಿ ಕಾವಲು ಕಾಯಬೇಕಾಗುತ್ತದೆ. ಆದರೆ ಪುಂಡಾನೆಯ ಉಪಟಳದಿಂದ ಭಯಗೊಂಡಿರುವ ರೈತರು ಜಮೀನಿಗೆ ಹೋಗಿ ಕೃಷಿ ಚಟುವಟಿಕೆ ಮಾಡಲು ಭಯಪಡುತ್ತಿದ್ದಾರೆ. ಕೆಲವರಂತು ಹಗಲು ಹೊತ್ತಿನಲ್ಲಿ ಕೃಷಿ ಕೆಲಸ ಮಾಡಲು ಭಯಪಡುತ್ತಿದ್ದಾರೆ.

ಇನ್ನು ಬಂಡೀಪುರ ಅಭಯಾರಣ್ಯ ಕುಂದಕೆರೆ ವಲಯ ವ್ಯಾಪ್ತಿಯ ಕಾಡಂಚಿನ ಗ್ರಾಮದಲ್ಲಿ ನಿರಂತರವಾಗಿ ದಾಳಿ ಮಾಡುತ್ತಿದ್ದರೂ ಅರಣ್ಯಾಧಿಕಾರಿ ಕಾಟಾಚಾರಕ್ಕೆ ಬಂದು ಮಹಜರು ನಡೆಸದೆ ರೂಪಾಯಿ ಲೆಕ್ಕದಲ್ಲಿ ಪರಿಹಾರ ನೀಡುತ್ತಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರಣ್ಯದಿಂದ ನಾಡಿಗೆ ಕಾಡಾನೆಗಳು ಬಾರದಂತೆ ಅರಣ್ಯದಂಚಿನಲ್ಲಿ ಸೋಲಾರ್‌ ತಂತಿ ಬೇಲಿ, ಕಂದಕ ನಿರ್ಮಾಣ ಮಾಡಿದ್ದರೂ ಅವುಗಳ ನಿರ್ವಹಣೆ ಸಮರ್ಪಕವಾಗಿ ಆಗದಿರುವ ಕಾರಣದಿಂದ ಕಾಡಾನೆ ಹಾವಳಿ ನಿರಂತರವಾಗಿದ್ದು, ಕಷ್ಟಪಟ್ಟು ಬೆಳೆದ ಕಾಡಾನೆಗಳ ಪಾಲಾಗುವುದರೊಂದಿಗೆ ರೈತರು ಸಾಲಗಾರರಾಗುತ್ತಿದ್ದಾರೆ.

ಹೀಗಾಗಿ ಕಾಡಾನೆಗಳ ಹಾವಳಿ ಶಾಶ್ವತ ಪರಿಹಾರಕ್ಕಾಗಿ ರೈಲ್ವೆ ಕಂಬಿ ಅಳವಡಿಸಿ ಕಾಡಿನಿಂದ ನಾಡಿಗೆ ಲಗ್ಗೆಯಿಡುತ್ತಿರುವ ಕಾಡು ಪ್ರಾಣಿಗಳ ನಿಯಂತ್ರಣ ಮಾಡಬೇಕು ಎಂದು ಕಾಡಂಚಿನ ಗ್ರಾಮಗಳ ರೈತರು ಆಗ್ರಹಿಸಿದ್ದಾರೆ.


Spread the love