ಬಂಡೀಪುರ ವ್ಯಾಪ್ತಿಯಲ್ಲಿ ಕಾಡ್ಗಿಚ್ಚಿನ ಆತಂಕ

Spread the love

ಬಂಡೀಪುರ ವ್ಯಾಪ್ತಿಯಲ್ಲಿ ಕಾಡ್ಗಿಚ್ಚಿನ ಆತಂಕ

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯ ಹಾಗೂ ಬಂಡೀಪುರ ವಲಯಗಳಲ್ಲಿ   ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ನೂರಾರು ಎಕರೆ ಕುರುಚಲು ಕಾಡು ಭಸ್ಮವಾಗಿದೆ. ಕಳೆದ ಎರಡು ವರ್ಷಗಳ ಕಾಲ ಕಾಡ್ಗಿಚ್ಚಿನಿಂದ ಅರಣ್ಯವನ್ನು ಕಾಪಾಡಿಕೊಂಡು ಬರಲಾಗಿತ್ತು.

ಆದರೆ ಈ ಬಾರಿ ಬೇಸಿಗೆಯ ಆರಂಭದಲ್ಲಿಯೇ ಕಾಡ್ಗಿಚ್ಚು ಕಾಣಿಸಿಕೊಂಡಿರುವುದು ಆತಂಕ ತಂದಿದೆ. ಎರಡು ದಿನಗಳ  ಹಿಂದೆ ಮಗುವಿನಹಳ್ಳಿ ಗುಡ್ಡ ಹಾಗೂ ಕಾರೆಮಾಳದ ಬಳಿ ಕಾಣಿಸಿಕೊಂಡ ಬೆಂಕಿ ಬಂಡೀಪುರದ ಕರಡಿ ಗುಡ್ಡ, ಮಗುವಿನಹಳ್ಳಿ ಗುಡ್ಡ, ಬೂದಿ ಕಟ್ಟೆ, ಕುರುಬನಕಟ್ಟೆ ಸೇರಿದಂತೆ ಅನೇಕ ಭಾಗದಲ್ಲಿ ವ್ಯಾಪಿಸಿತ್ತು. ಈ ವೇಳೆ ಗಾಳಿಯ ವೇಗ ಹೆಚ್ಚಿದ್ದರಿಂದ ಬೆಂಕಿ ಇತರ ಕಡೆಗಳಲ್ಲಿ ವೇಗವಾಗಿ ಹರಡಿತ್ತು.

ಈ ಸಂದರ್ಭ  ಸಿಬ್ಬಂದಿ ಬಳಿ ಬೆಂಕಿ ನಂದಿಸುವ ಆಧುನಿಕ ಉಪಕರಣಗಳು ಇಲ್ಲದೇ ಇದ್ದುದರಿಂದ ಹಸಿ ಸೊಪ್ಪು ಬಳಸಿ ಕಾರ್ಯಾಚರಣೆ ನಡೆಸಿದರು. ಸಂಜೆಯ ಹೊತ್ತಿಗೆ ಎಲ್ಲ ವಲಯದ ಸಿಬ್ಬಂದಿಯನ್ನು ಕರೆಸಿಕೊಂಡ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ  ಎದುರು ಬೆಂಕಿ ಹಾಕುವ (ಕೌಂಟರ್ ಫೈರ್) ಮೂಲಕ ಬೆಂಕಿಯನ್ನು ಹತೋಟಿಗೆ ತಂದರು. ಅಷ್ಟರಲ್ಲಿ ನೂರಾರು ಎಕರೆ ಕಾಡು ಸುಟ್ಟು ಹೋಗಿತ್ತು.

ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು  ಬಂಡೀಪುರದ ಗೌರಿಕಲ್ಲು ಗುಡ್ಡದ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ಎಲ್ಲ ಸಿಬ್ಬಂದಿ  ಬಳಸಿಕೊಂಡು ಕಾರ್ಯಾಚರಣೆ ನಡೆಸಿದ್ದು,  ಬೆಂಕಿಯನ್ನು ಯಶಸ್ವಿಯಾಗಿ ನಂದಿಸಲಾಗಿದೆ. ಇದು ನೆಲಬೆಂಕಿಯಾಗಿದ್ದು, ಮರಗಳಿಗೆ ಪ್ರಾಣಿಗಳಿಗೆ ಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ.


Spread the love

Leave a Reply

Please enter your comment!
Please enter your name here