
ಬಂಡೀಪುರ ಹೆದ್ದಾರಿಯಲ್ಲಿ ವಾಹನ ಡಿಕ್ಕಿ: ಜಿಂಕೆ ಸಾವು
ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ವಾಹನ ಚಾಲನೆ ಮಾಡುವವರು ಜಾಗರೂಕರಾಗಿ ಚಾಲನೆ ಮಾಡಬೇಕೆಂಬ ಸೂಚನೆಯಿದ್ದರೂ ಕೆಲವರು ಅದಕ್ಕೆ ಸೊಪ್ಪು ಹಾಕದೆ ವಾಹನ ಚಾಲನೆ ಮಾಡುವುದರಿಂದಾಗಿ ಹೆದ್ದಾರಿಗೆ ಅಡ್ಡಲಾಗಿ ದಾಟುವ ವನ್ಯ ಪ್ರಾಣಿಗಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಿವೆ.
ಬಂಡೀಪುರ ಹುಲಿಯೋಜನೆ, ಗುಂಡ್ಲುಪೇಟೆ ಉಪ ವಿಭಾಗ, ಮದ್ದೂರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಿಂದಾಗ್ಗೆ ವಾಹನಗಳಿಗೆ ಸಿಲುಕಿ ಪ್ರಾಣಿಗಳು ಸಾಯುತ್ತಿರುವ ಪ್ರಕರಣ ನಡೆಯುತ್ತಿವೆ. ಈ ಬಗ್ಗೆ ಬಹಳಷ್ಟು ಕ್ರಮಗಳನ್ನು ಅರಣ್ಯ ಇಲಾಖೆ ವಹಿಸಿದ್ದರೂ ಪ್ರಾಣಿಗಳ ಸಾವು ಕಡಿಮೆಯಾಗಿಲ್ಲ. ಇದೀಗ ಮದ್ದೂರು ವನ್ಯಜೀವಿ ವಲಯದ ಹೆದ್ದಾರಿಯ 76 ರ ದಾರಿಪುರದ ಹುಲ್ಲುಗಾವಲು ಬಳಿ ಅಪಘಾತ ನಡೆದಿದ್ದು, ಈ ಅಪಘಾತದಲ್ಲಿ ಜಿಂಕೆಯೊಂದು ಸಾವನ್ನಪ್ಪಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಎಸ್ ಸಬೀರ್ ಎಂಬುವವರು ಕೇರಳದ ಕಡೆಗೆ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಟೊಯೋಟಾ ಇನೋವಾ (AP- 09 CJ-0670) ವಾಹನವು ಆರು ತಿಂಗಳ ಪ್ರಾಯದ ಹೆಣ್ಣು ಜಿಂಕೆಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಈ ಸಂಬಂಧ ಮದ್ದೂರು ವಲಯ ಕಚೇರಿಯಲ್ಲಿ ವನ್ಯಜೀವಿ ಅರಣ್ಯ ಮೊಕದ್ದಮೆ ದಾಖಲಾಗಿದೆ. ಅಲ್ಲದೆ, ವಾಹನದ ಚಾಲಕ ಎಸ್ ಸಬೀರ್ ನ್ನು ಬಂಧಿಸಿ ವಿಚಾರಣೆಯನ್ನು ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.