
ಬಂಧನ ಭೀತಿಯಿಂದ ಮುಸ್ಲಿಂ ಮನೆಯಲ್ಲಿ ಆಶ್ರಯ ಪಡೆದಿದ್ದ ಚೈತ್ರಾ ಕುಂದಾಪುರ!
ಉಡುಪಿ: ಬಿಜೆಪಿ ಎಂಎಲ್ಎ ಟಿಕೆಟ್ ಗಾಗಿ ಬೈಂದೂರು ಮೂಲದ ಉದ್ಯಮಿಯೋರ್ವರಿಂದ ಏಳು ಕೋಟಿ ಡೀಲ್ ಮಾಡಿರುವ ಆರೋಪದಡಿ ಹಿಂದೂಪರ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಉಡುಪಿಯಲ್ಲಿ ಬಂಧಿಸಿದ್ದಾರೆ.
ಇದೀಗ ಸಿಸಿಬಿಯಿಂದ ಚೈತ್ರಾ ಕುಂದಾಪುರ ಬಂಧನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಸದಾ ಮುಸ್ಲಿಮರ ಮೇಲೆ ದ್ವೇಷ ಕಾರುವ ಭಾಷಣ ಮಾಡಿ ಹಿಂದೂ ಯುವಕರನ್ನು ಉದ್ರೇಕಿಸುವ ಚೈತ್ರಾ ಕುಂದಾಪುರ ಆಶ್ರಯ ಪಡೆದಿದ್ದು ಮುಸ್ಲಿಂ ಭಾಂದವರ ಮನೆಯಲ್ಲಿ ಎನ್ನುವ ಮಾಹಿತಿ ಸ್ಪೋಟಗೊಂಡಿದೆ.
ಭಾಷಣಗಾರ್ತಿಯಾಗಿರುವ ಚೈತ್ರಾ ಕುಂದಾಪುರ ಉತ್ತರ ಕನ್ನಡ ಭಾಗಗಳಲ್ಲಿ ಹಿಂದೂ ಸಂಘಟನೆಗಳ ಪ್ರತಿಭಟನಾ ಸಭೆಯಲ್ಲಿ ಪ್ರಮುಖ ಭಾಷಣಗಾರ್ತಿಯಾಗಿ ಹೋಗುತ್ತಿದ್ದರು. ಸದಾ ಮುಸ್ಲಿಂ ಸಮುದಾಯದ ಬಗ್ಗೆ ತಮ್ಮ ಭಾಷಣಗಳಲ್ಲಿ ಕೆಟ್ಟದಾಗಿ ದ್ವೇಷ ಕಾರುತ್ತಿದ್ದ ಚೈತ್ರಾ ಕುಂದಾಪುರ ಅವರು ಮುಗ್ದ ಜನರಲ್ಲಿ ದ್ವೇಷದ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದರು. ವಿಪರ್ಯಾಸವೆಂದರೆ ತನ್ನ ಮೇಲೆ ಪ್ರಕರಣ ದಾಖಲಾಗಿದೆ ಎಂದು ಗೊತ್ತಾದ ಕೂಡಲೇ ತನ್ನ ಆತ್ಮೀಯ ಮುಸ್ಲಿಂ ಸಮುದಾಯದ ಗೆಳತಿಯ ಮನೆಯಲ್ಲಿ ರಕ್ಷಣೆ ಪಡೆದಿರುವ ಮಾಹಿತಿ ಈಗ ತನಿಖೆಯಿಂದ ತಿಳಿದು ಬಂದಿದೆ.
ಗೋವಿಂದ ಬಾಬು ಪೂಜಾರಿ ಎಂಬುವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಒಟ್ಟು 4 ಕೋಟಿ ರೂಪಾಯಿ ಹಣ ಪಡೆದಿದ್ದರು ಎನ್ನುವ ಆರೋಪವಿದೆ. ಗೋವಿಂದಬಾಬು ಪೂಜಾರಿ ಅವರಿಗೆ ಟಿಕೆಟ್ ಸಿಗದ ಕಾರಣ ಕೊಟ್ಟ ಹಣವನ್ನು ವಾಪಸ್ಸು ಕೇಳಿದ್ದಾರೆ. ಆದರೆ ಚೈತ್ರಾ ಕುಂದಾಪುರ ಹಣ ನೀಡದೇ ವಂಚಿಸಿದ್ದಾರೆ ಎಂದು ಗೋವಿಂದ ಬಾಬು ಪೂಜಾರಿ ಅವರು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಚೈತ್ರಾಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಸಿಸಿಬಿ ಪೊಲೀಸರು ಏನೇ ಕೇಳಿದ್ರೂ ಕಾಂಗ್ರೆಸ್ ಕಡೆ ಬೊಟ್ಟು ಮಾಡುತ್ತಿರುವ ಚೈತ್ರಾ, ನಾನೇನು ತಪ್ಪು ಮಾಡಿಲ್ಲ, ಎಲ್ಲಾ ತಪ್ಪು ಎಫ್ ಐ ಆರ್ ಆಗಿದೆ ಎಂದು ಚೈತ್ರಾ ಹೇಳುತ್ತಿದ್ದು, ಕಾಂಗ್ರೆಸ್ ಹಿಂದೂ ಹೋರಾಟಗಾರರನ್ನು ಟಾರ್ಗೆಟ್ ಮಾಡುತ್ತಿದೆ. ಕಾಂಗ್ರೆಸ್ ನಿಂದಲೇ ಬೇಕು ಅಂತ ಎಫ್ ಐ ಆರ್ ಆಗಿದೆ. ಎಫ್ ಐ ಆರ್ ಮಾಡಿಸಿ ಅರೆಸ್ಟ್ ಮಾಡಿಸಿದ್ದಾರೆ ಎಂದು ಚೈತ್ರಾ ಹೇಳುತ್ತಿದ್ದಾಳೆ. ಈ ಎಲ್ಲಾ ವಿಚಾರ ಸಿಸಿಬಿ ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ಬಯಲಾಗಿದೆ.
ಆತ್ಮಹತ್ಯೆಗೆ ನಾಟಕವಾಡಿದಳೇ ಚೈತ್ರಾ ಕುಂದಾಪುರ!
ಉಡುಪಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ವಶಕ್ಕೆ ಪಡೆದ ವೇಳೆ ಚೈತ್ರಾ ಕುಂದಾಪುರ ಆತ್ಮಹತ್ಯೆ ನಾಟಕವಾಡಿದ್ದಾಳೆ ಎನ್ನಲಾಗಿದೆ. ತನ್ನ ಕೈಯಲ್ಲಿದ್ದ ಉಂಗುರವನ್ನು ನುಂಗಲು ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ. ಸದ್ಯ ಸಿಸಿಬಿ ಪೊಲೀಸರು ಆಕೆಯನ್ನು ಮುಂದಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.