ಬಂಧಿತ ಹೋರಾಟಗಾರರನ್ನು ಕೂಡಲೇ ಬಿಡುಗಡೆಗೊಳಿಸಬೇಕು: ಡಿವೈಎಫ್ಐ ಆಗ್ರಹ

Spread the love

ಬಂಧಿತ ಹೋರಾಟಗಾರರನ್ನು ಕೂಡಲೇ ಬಿಡುಗಡೆಗೊಳಿಸಬೇಕು: ಡಿವೈಎಫ್ಐ ಆಗ್ರಹ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅನಧಿಕೃತ ಟೋಲ್ ಗೇಟ್ ತೆರವುಗೊಳಿಸಲು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ತುಳುನಾಡಿನ ಜನತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ವೇಳೆ ಬಿಜೆಪಿ ಸರಕಾರ ಪೋಲಿಸರ ಮೂಲಕ ಟೋಲ್ ವಿರೋಧಿ ಸಮಿತಿ ಸಂಚಾಲಕರು ಹಾಗೂ ಡಿವೈಎಫ್ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಸೇರಿದಂತೆ 250ಕ್ಕೂ ಹೆಚ್ಚು ಜನ ಹೋರಾಟಗಾರರನ್ನು ಬಂಧಿಸಿರುವುದನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (ಡಿವೈಎಫ್ಐ) ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ತಕ್ಷಣ ಬಿಜೆಪಿ ಸರಕಾರ ಕೂಡಲೇ ಟೋಲ್ ಗೇಟ್ ತೆರವುಗೊಳಿಸಬೇಕು ಹಾಗೂ ಬಂಧಿತ ಹೋರಾಟಗಾರರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ ಆಗ್ರಹಿಸಿದ್ದಾರೆ‌.

ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಪಕ್ಷದ ಶಾಸಕ, ಸಂಸದ ಹಾಗೂ ಸಚಿವರು ಅನಧಿಕೃತ ಟೋಲ್ ಗೇಟ್ ತೆರವುಗೊಳಿಸುವ ಬದಲಿಗೆ ತುಳುನಾಡಿನ ಜನರ ಮೇಲೆ ದ್ವೇಷ ಸಾಧಿಸುತ್ತಿರುವುದು ಅಕ್ಷಮ್ಯ ಹಾಗೂ ಆಯ್ಕೆ ಮಾಡಿದ ಜನರಿಗೆ ಎಸಗುತ್ತಿರುವ ಮಹಾದ್ರೋಹವಾಗಿದೆ.

ಕೇಂದ್ರ ಸರಕಾರದ ಸಾರಿಗೆ ಸಚಿವ ನಿತಿನ್ ಗಡ್ಕರಿಯೇ ಸ್ವತಃ ಅನಧಿಕೃತ ಟೋಲ್ ಗೇಟ್ ತೆರವುಗೊಳಿಸುವುದಾಗಿ ಹೇಳಿ, ನಾಲ್ಕು ತಿಂಗಳು ಕಳೆದಿದೆ. ಟೋಲ್ ತೆರವುಗೊಳಿಸದೆ ಜನರನ್ನು ಲೂಟಿ ಮಾಡಲು ಮುಂದಾಗುತ್ತಿರುವುದನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆಗೆ ಮುಂದಾದ ಹೋರಾಟ ಸಮಿತಿಯ ಮುಖಂಡರಿಗೆ ಸರಕಾರ ಮುಚ್ಚಳಿಕೆ ಬರೆದುಕೊಡುವುದು, ಬಾಂಡ್, ಶ್ಯೂರಿಟಿ ಕೊಡಬೇಕು ಎಂದು ಬೆದರಿಸುವ ಜೊತೆಗೆ ಪೂಡಾರಿಗಳ ರೀತಿ ಏಕವಚನ ಬಳಸಿ ಹೋರಾಟ ಹತ್ತಿಕ್ಕಲು ಹೊರಟು ವಿಫಲವಾಗಿದೆ.

ಈ ಮೂಲಕ ಜನರ ಪ್ರತಿರೋಧವನ್ನು ಹತ್ತಿಕ್ಕಲು ಹೋಗಿ ಸ್ವತಃ ಬಿಜೆಪಿ ಸರಕಾರ ಜನರೆದುರು ಬೆತ್ತಲಾಗಿದೆ. ಹೋರಾಟಗಾರರನ್ನು ಬಂಧಿಸಿದರೆ, ಬೆದರಿಕೆ ತಂತ್ರ ಅನುಸಿರಿದರೆ ಹೋರಾಟ ಹತ್ತಿಕ್ಕಬಹುದು ಎಂದು ಬಿಜೆಪಿ ಸರಕಾರ ಎಣಿಕೆಯಾದರೆ ಅದು ಅದರ ಭ್ರಮೆ ಮಾತ್ರ. ಈ ಟೋಲ್ ಗೇಟ್ ತೆರವುಗೊಳ್ಳುವವರೆಗೆ ತುಳುನಾಡ ಜನತೆ ಐಕ್ಯತೆಯಿಂದ ಹೋರಾಟ ಮುಂದುವರೆಸುತ್ತದೆ. ಕೂಡಲೇ ಈ ಸಮಸ್ಯೆ ಬಗೆಹರಿಸದಿದ್ದರೆ ರಾಜ್ಯವ್ಯಾಪಿ ಹೋರಾಟಕ್ಕೆ ಜನತೆ ಮುಂದಾಗಬೇಕುತ್ತದೆ ಎಂದು ಡಿವೈಎಫ್ಐ ರಾಜ್ಯ ಸರಕಾರಕ್ಕೆ ಎಚ್ಚರಿಸುತ್ತದೆ.

ಈ ಹೋರಾಟವನ್ನು ಮುರಿಯಲು, ಜನರ ಹಿತಾಸಕ್ತಿಯ ಬದಲು ಖಾಸಗಿ ನವಯುಗ ಕಂಪೆನಿಯ ಹಿತಾಸಕ್ತಿ ಕಾಪಾಡುತ್ತಿರುವ ಬಿಜೆಪಿ ಸರಕಾರದ ನೀತಿಯನ್ನು ಖಂಡಿಸಿ, ಅನಧಿಕೃತ ಟೋಲ್ ತೆರವುಗೊಳಸಲು, ಬಂಧಿತರನ್ನು ಕೂಡಲೇ ಬಿಡುಗಡೆಗೊಳಿಸಲು ರಾಜ್ಯದ ಜನತೆ ಪ್ರತಿರೋಧಕ್ಕೆ ಮುಂದಾಗಬೇಕು ಎಂದು ಡಿವೈಎಫ್ಐ ರಾಜ್ಯ ಸಮಿತಿಯು ಕರೆ ನೀಡಿದೆ.


Spread the love