
ಬಜರಂಗದಳಕ್ಕೂ ಆಂಜನೇಯನಿಗೂ ವ್ಯತ್ಯಾಸವಿದೆ:ಡಿಕೆಶಿ
ಮೈಸೂರು: ಬಜರಂಗದಳಕ್ಕೂ ಆಂಜನೇಯನಿಗೂ ವ್ಯತ್ಯಾಸವಿದ್ದು, ಬಜರಂಗದಳ ಒಂದು ರಾಜಕೀಯ ಪಕ್ಷದ ಭಾಗವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಚಾಮುಂಡಿಬೆಟ್ಟಕ್ಕೆ ಆಗಮಿಸಿ ಚಾಮುಂಡೇಶ್ವರಿಗೆ ವಿಶೇಷಪೂಜೆ, ಈಡುಗಾಯಿ ಒಡೆದು ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಹುಟ್ಟುವ ಎಲ್ಲವೂ ಬಸವ ಆಗುವುದಕ್ಕೆ ಸಾಧ್ಯವಿಲ್ಲ. ಹನುಮಂತನ ಹೆಸರಿಟ್ಟುಕೊಂಡವರೆಲ್ಲಾ ಹನುಮಂತ ಆಗಲು ಸಾಧ್ಯವೇ ಎಂದರು.
ಕಾಂಗ್ರೆಸ್ ಪ್ರಣಾಳಿಕೆ ನೋಡಿ ಬಿಜೆಪಿಗರಿಗೆ ಗಾಬರಿಯಾಗಿದೆ. ಬಜರಂಗದಳದವರು ನೈತಿಕ ಪೊಲೀಸ್ ಗಿರಿ ಮಾಡುತ್ತಿದ್ದಾರೆ. ಬಜರಂಗ ಬಲಿಯ ನಿಜವಾದ ಭಕ್ತರು ನಾವು. ಬಜರಂಗಿಯ ಕುಂಕುಮ ನನ್ನ ಹಣೆಯಲ್ಲಿ ಇದೆ. ಈ ನಾಡಿನಲ್ಲಿ ಆಂಜನೇಯ ಹುಟ್ಟಿದ್ದಕ್ಕೆ ಸಾಕ್ಷಿ ಇದೆ. ಇತಿಹಾಸ ಸೃಷ್ಟಿಸಿದ ಆಂಜನೇಯ ದೇವಾಲಯ ಅಭಿವೃದ್ಧಿಗೆ ಕಾಂಗ್ರೆಸ್ ವಿಶೇಷ ಒತ್ತು ನೀಡಲಿದೆ. ಯುವಕರಿಗೆ ಆಂಜನೇಯನ ವಿಚಾರಗಳನ್ನು ಬೆಳೆಸಲು ವಿಶೇಷ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳಿದರು.
ಬಿಜೆಪಿಯವರು ಒಂದಾದರೂ ಆಂಜನೇಯನ ದೇವಾಲಯವನ್ನು ಕಟ್ಟಿದ್ದಾರಾ? ಯಾರಿಗೆ ಏನೂ ಸಹಾಯ ಮಾಡಿದ್ದೇವೆ. ಕೆಲಸ ಮಾಡಿದ್ದೇವೆ ಎಂದು ಪ್ರಧಾನಿಗಳು ಭಾಷಣದಲ್ಲಿ ಹೇಳುತ್ತಿಲ್ಲ. ದೇವರ ಹೆಸರಿನಲ್ಲಿ ಪ್ರಧಾನಿ ಹಾಗೂ ಬಿಜೆಪಿ ರಾಜಕೀಯ ನಡೆಸಲು ಯತ್ನಿಸುತ್ತಿದೆ. ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.