ಬಜ್ಪೆ | ತಂಡದಿಂದ ವ್ಯಕ್ತಿಗೆ ಚೂರಿ ಇರಿತ ಪ್ರಕರಣ; ನಾಲ್ವರ ಬಂಧನ
ಮಂಗಳೂರು: ಇಲ್ಲಿನ ಎಡಪದವು ಎಂಬಲ್ಲಿ ಅಖಿಲೇಶ್ ಎಂಬವರ ಮೇಲೆ ಚೂರಿ ಇರಿದ ಪ್ರಕರಣ ಸಂಬಂಧ ಪೊಲೀಸರು ಎಲ್ಲಾ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಬಂದರು ನಿವಾಸಿ ಸಿನಾನ್, ವೇಣೂರು ನಿವಾಸಿ ಇರ್ಷಾದ್, ವಾಮಂಜೂರು ನಿವಾಸಿ ಸುಹೈಲ್ ಅಕ್ರಮ್ ಮತ್ತು ವಾಮಂಜೂರು ಪಿಲಿಕುಳ ನಿವಾಸಿ ನಿಸಾನ್ ಬಂಧಿತರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಬಂಧಿತರ ಪೈಕಿ ಮಂಗಳೂರು ಬಂದರು ನಿವಾಸಿ ಸಿನಾನ್ ನನ್ನು ಸಾರ್ವಜನಿಕರು ಸ್ಥಳದಲ್ಲೇ ಪೊಲೀಸರಿಗೆ ಒಪ್ಪಿಸಿದ್ದರು. ಉಳಿದಂತೆ ವೇಣೂರು ನಿವಾಸಿ ಇರ್ಷಾದ್ ನನ್ನು ಬಜ್ಪೆ ಪೊಲೀಸರು ಬಂಧಿಸಿದ್ದರು. ಜೊತೆಗೆ ವಾಮಂಜೂರು ನಿವಾಸಿ ಸುಹೈಲ್ ಅಕ್ರಮ್ ಮತ್ತು ವಾಮಂಜೂರು ಪಿಲಿಕುಳ ನಿವಾಸಿ ನಿಸಾನ್ ನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ 4 ಗಂಟೆಯ ಒಳಗಾಗಿ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರ ಪೈಕಿ ಅಕ್ರಮ್ ಮತ್ತು ನಿಸಾನ್ ವಿರುದ್ಧ ಗಾಂಜಾ ಸಂಬಂಧಿಸಿದ ಪ್ರಕರಣಗಳು ಇರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕೊಲೆ ಯತ್ನ ಪ್ರಕರಣದ ಜೊತೆಗೆ ಎನ್ ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಆರೋಪಿ ಸಿನಾನ್ ವಿರುದ್ಧ ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಲ್ಲಿ ಕಳವು, ಗಾಂಜಾ ಸಾಗಾಟ, ಮಾರಾಟ ಹಾಗೂ ಕೊಲೆಯತ್ನ ಸೇರಿದಂತೆ 7 ಪ್ರಕರಣಗಳು ದಾಖಲಾಗಿವೆ. ಇರ್ಷಾದ್, ಅಕ್ರಮ್ ಮತ್ತು ನಿಸಾನ್ ವಿರುದ್ಧವೂ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳವು , ಗಾಂಜಾ ಸಾಗಾಟ ಮತ್ತು ಮಾರಾಟಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.
ಎಡಪದವು ಪೂಪಾಡಿಕಲ್ಲು ನಿವಾಸಿ ಅಖಿಲೇಶ್ ಅವರು ಪೂಪಾಡಿ ಕಲ್ಲುವಿನಿಂದ ಮಂಗಳೂರು ಕಡೆ ತೆರಳುತ್ತಿದ್ದ ಸಂದರ್ಭ ಒಂದೇ ದ್ವಿಚಕ್ರವಾಹನದಲ್ಲಿ ನಾಲ್ಕು ಮಂದಿ ಚೂರಿ ಹಿಡಿದು ಸಂಚರಿಸುತ್ತಿರುವುದನ್ನು ಗಮನಿಸಿ ಅದನ್ನು ತನ್ನ ಮೊಬೈಲ್ ನಲ್ಲಿ ವೀಡಿಯೊ ಚಿತ್ರೀಕರಿಸಲು ಮುಂದಾಗಿದ್ದಾರೆ. ಇದನ್ನು ಕಂಡ ಆರೋಪಿಗಳು ಕೊಲೆಗೈಯ್ಯುವ ಉದ್ದೇಶದಿಂದ ಚೂರಿಯಿಂದ ದಾಳಿ ಮಾಡಿದ್ದಾರೆ ಎಂದು ಅಖಿಲೇಶ್ ಅವರು ಬಜ್ಪೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.
