
ಬದುಕನ್ನು ಬದಲಾಯಿಸುವ ‘ಆಳ್ವಾಸ್ ಪುನರ್ಜನ್ಮ’ ಕುಟುಂಬ ಸಮ್ಮಿಲನ ಕಾರ್ಯಕ್ರಮ
ಮೂಡುಬಿದಿರೆ: ಮದ್ಯ ವ್ಯಸನಕ್ಕೆ ಒಳಗಾಗಿ ಇನ್ನು ಬದುಕೇ ಮುಗೀತು ಎನ್ನುವವರಿಗೆ ‘ಪುನರ್ಜನ್ಮ’ ಹೊಸ ಬದುಕು ಕಟ್ಟಿಕೊಡಲು ಹಾಗು ಸಮಾಜದ ಮುಖ್ಯ ವಾಹಿನಿಗೆ ತಲುಪಲು ಸಹಾಯ ಹಸ್ತ ನೀಡುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್ ಹೇಳಿದರು.
ಮಿಜಾರಿನ ಆಳ್ವಾಸ್ ಹೊಮಿಯೋಪತಿ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಆಳ್ವಾಸ್ ಪುನರ್ಜನ್ಮದ 3ನೇ ವರ್ಷದ ವಾರ್ಷಿಕೋತ್ಸವ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು ‘ಹುಟ್ಟುತ್ತಾ ಯಾರು ಕೆಟ್ಟವರಾಗಿರುವುದಿಲ್ಲ ಆದರೆ ಬೆಳೆಯುತ್ತಾ ನಮಗೆ ಲಭಿಸುವ ಪರಿಸರದ ವಾತಾವರಣ ಹಾಗು ಸಹವಾಸ ನಮ್ಮನ್ನು ಬದಲಾಯಿಸುತ್ತದೆ . ಮನುಷ್ಯನ ಜೀವನದಲ್ಲಿ ತಪ್ಪು ಸಹಜ, ಆದರೆ ಅದೇ ತಪ್ಪನ್ನು ಮುಂದುವರೆಸುವುದು ತಪ್ಪು. ತಪ್ಪುಗಳನ್ನು ತಿದ್ದಿಕೊಂಡು ಜೀವನದಲ್ಲಿ ಸರಿ ದಾರಿಯತ್ತ ಮುನ್ನಡೆಯಬೇಕು. ನಮ್ಮ ನಡೆ-ನುಡಿ, ಆಚಾರ-ವಿಚಾರಗಳಿಂದ ಬದುಕನ್ನು ಬದಲಾಯಿಸಲು ಸಾಧ್ಯ. ಬದುಕು ಅಮೂಲ್ಯವಾದದ್ದು ಅದನ್ನು ಪರಿಶುದ್ಧವಾಗಿಟ್ಟುಕೊಳ್ಳಬೇಕು. ವ್ಯಸನಿಗಳು ಯಾರು ಕೆಟ್ಟವರಲ್ಲ ಎಲ್ಲವೂ ‘ಪರಿಸ್ಥಿತಿ’ ಅಂತಹ ಪರಿಸ್ಥಿತಿಯ ಸಮಯದಲ್ಲಿ ಮನಸ್ಸನ್ನು ವಿಚಲಿತವಾಗಿಡದೆ ನಮ್ಮನು ನಾವು ನಿಯಂತ್ರಿಸಿಕೊಂಡು ಮುನ್ನಡೆಯಬೇಕು. ಇದರ ಜೊತೆಗೆ ಕೆಟ್ಟ ಹವ್ಯಾಸವನ್ನು ಬದಲಾಯಿಸಿದರೆ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಹೆಲ್ತ್ ಸೆಂಟರ್ ನಿರ್ದೇಶಕ ಡಾ.ವಿನಯ್ ಆಳ್ವ ಮಾತನಾಡಿ ಅಮಲು ಪದಾರ್ಥ ಮನುಷ್ಯ ಆರೊಗ್ಯಕ್ಕೆ ಅಪಾಯಕಾರಿ, ಮನುಷ್ಯ ಇದರಿಂದ ದೂರವಿರಬೇಕು, ನಮಗಿರುವುದು ಒಂದೇ ಜೀವನ ಅದನ್ನು ಸರಿಯಾಗಿ ನಿರ್ವಹಿಸಬೇಕು ನಮ್ಮ ಬದುಕನ್ನು ನಾವೇ ಸರಿಮಾಡಿಕೊಳ್ಳಬೇಕು. ಮನುಷ್ಯನಲ್ಲಿ ಅಸಾಧ್ಯ ಎನ್ನುವುದು ಯಾವುದು ಇಲ್ಲ ಮನಸ್ಸಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ‘ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆ’ ಟ್ರಸ್ಟ್‍ನ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಇಂದಿನ ಜನಾಂಗವು ಅಧಿಕ ಪ್ರಮಾಣದಲ್ಲಿ ವ್ಯಸನಿಗಳಾಗಿದ್ದಾರೆ, ಈ ದುಶ್ಚಟದಿಂದ ಅದೆμÉ್ಟೂೀ ಕುಟುಂಬ ನರಳುತ್ತಿದೆ, ಯುವಕರು ಮದ್ಯಪಾನಕ್ಕೆ ಹಾಗು ಅಮಲು ಪದಾರ್ಥಗಳಿಗೆ ಒಳಗಾಗುತ್ತಿದ್ದಾರೆ. ಬದುಕಿಗೆ ಬದಲಾವಣೆ ಅವಶ್ಯಕ ಬದುಕು ಬದಲಾಗಬೇಕಾದರೆ ಛಲ, ಆತ್ಮವಿಶ್ವಾಸವನ್ನು ಬಲಪಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲಗಳ ವ್ಯಕ್ತಿಯಾಗಿ ಭಾಗವಹಿಸಿದ ಇನ್ನೊರ್ವ ಅತಿಥಿ ಉಡುಪಿಯ ಡಾ.ಪಿ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ. ಪಿ.ವಿ ಭಂಡಾರಿ ಮಾತನಾಡಿ ‘ವ್ಯಸನ ಎಂಬುದು ವ್ಯಕ್ತಿಯನ್ನು ಹಾಳು ಮಾಡುವುದರ ಜೊತೆಗೆ ಕುಟುಂಬದ ನೆಮ್ಮದಿಯನ್ನು ಕೆಡವುತ್ತದೆ. ಕುಡಿತ ಎಂಬುವುದು ಒಂದು ರೀತಿಯ ಮನೋರೋಗ ಅದಕ್ಕೆ ಸೂಕ್ತ ಚಿಕಿತ್ಸೆ ಅಗತ್ಯ ಎಂದರು .
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಸ್ವಾಗತಿಸಿದರು, ವಿದ್ಯಾರ್ಥಿನಿ ಪವಿತ್ರ ಕುಂದಾಪುರ ನಿರೂಪಿಸಿ ಆಳ್ವಾಸ್ ಪುನರ್ಜನ್ಮ ದ ಆಪ್ತ ಸಮಾಲೋಚಕ ಲೋಹಿತ್. ಕೆ ವಂದಿಸಿದರು.
ಆಳ್ವಾಸ್ ಪದವಿ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕಿ ಡಾ. ಮಧುಮಾಲ ಉಪಸ್ಥಿತರಿದ್ದರು, ಹಾಗು ಕಾಲೇಜಿನ ಭೋಧಕ ಹಾಗು ಭೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.