
ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಸೀಲ್ ಡೌನ್ ಗೆ ಆಗ್ರಹ
ಮೈಸೂರು: ಕೊರೊನಾ ಎರಡನೇ ಅಲೆಯು ಗ್ರಾಮೀಣ ಜನರ ನಿದ್ದೆಗೆಡಿಸಿದೆ. ಒಂದೆಡೆ ಜೀವನ ಮಾಡುವುದು ಹೇಗೆಂಬ ಚಿಂತೆಯಾದರೆ ಮತ್ತೊಂದೆಡೆ ಸೋಂಕಿನ ಭಯ ಇದೆರಡರ ನಡುವೆ ಸಿಲುಕಿ ನರಳುವಂತಾಗಿದೆ. ಈ ನಡುವೆ ಒಂದಷ್ಟು ಮಂದಿ ಸರ್ಕಾರ ಜಾರಿ ಮಾಡಿರುವ ಕೋವಿಡ್ ನಿಯಮವನ್ನೇ ಗಾಳಿಗೆ ತೂರುತ್ತಿರುವುದು ಸೋಂಕು ಗ್ರಾಮೀಣ ಜನರಿಗೆ ತಗಲಲು ಕಾರಣ ಎಂಬ ಆರೋಪವೂ ಕೇಳಿ ಬರುತ್ತಿದೆ.
ಇದೆಲ್ಲದರ ನಡುವೆ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡಲು ನಂಜನಗೂಡು ತಾಲ್ಲೂಕಿನ ಅಳಗಂಚಿಯಲ್ಲಿರುವ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಕಾರಣ ಎಂದು ಕೆಲವರು ಬೆಟ್ಟು ಮಾಡಿ ತೋರಿಸುತ್ತಿದ್ದು ಅದನ್ನು ಸೀಲ್ ಡೌನ್ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ.
ಇಷ್ಟಕ್ಕೂ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯನ್ನು ಏಕೆ ಸೀಲ್ ಡೌನ್ ಮಾಡಬೇಕು ಎಂಬ ಪ್ರಶ್ನೆಗೆ ಕಾರ್ಖಾನೆಯಲ್ಲಿ 50ರಿಂದ 60 ಕಾರ್ಮಿಕರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಇವರೆಲ್ಲರೂ ಗ್ರಾಮಾಂತರದಿಂದ ಬರುತ್ತಿದ್ದು ಕೆಲಸ ಮಾಡಿಕೊಂಡು ಮನೆಗೆ ಬಂದ ನಂತರ ಗ್ರಾಮಗಳಲ್ಲಿ ಸೋಂಕನ್ನು ಹರಡುತ್ತಾರೆ ಎಂಬ ಉತ್ತರವನ್ನು ನೀಡುತ್ತಾರೆ.
ಈ ಸಂಬಂಧ ಖುದ್ದು ಮಲ್ಲು ಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರೋಹಿಣಿ ಅವರು ಸುದ್ದಿಗೋಷ್ಠಿ ನಡೆಸಿ ಒಂದಷ್ಟು ತಹಸೀಲ್ದಾರ್ ವಿರುದ್ಧ ಹರಿಹಾಯ್ದಿದ್ದಾರೆ. ಈಗಾಗಲೇ ಕಾರ್ಖಾನೆಯನ್ನು ಸಿಲ್ ಡೌನ್ ಮಾಡಲು ಕಾರ್ಖಾನೆಗೆ ಪತ್ರ ಬರೆದಿದ್ದಲ್ಲದೆ, ತಾಲ್ಲೂಕು ದಂಡಾಧಿಕಾರಿ ಮೋಹನ್ ಕುಮಾರಿ ಅವರ ಗಮನಕ್ಕೂ ತಂದಿದ್ದೇವೆ. ಆದರೂ ಕೂಡ ಕಾರ್ಖಾನೆ ಯಾವುದೇ ಕ್ರಮ ಕೈಗೊಂಡಿಲ್ಲ. ಸರಕಾರದ ನಿಯಮವನ್ನು ಪಾಲಿಸದೆ ಕಾರ್ಖಾನೆಯನ್ನು ನಡೆಸಲಾಗುತ್ತಿದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡುತ್ತಿದೆ. ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ದಂಡಾಧಿಕಾರಿ ಮೇಲೆಯೇ ಅನುಮಾನ ಮೂಡುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಈ ಬಗ್ಗೆ ಶಾಸಕ ಹರ್ಷವರ್ಧನ್ ಅವರ ಗಮನಕ್ಕೂ ತರಲಾಗಿದ್ದು, ಖುದ್ದು ಶಾಸಕರೇ ಕಾರ್ಖಾನೆ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸಿದ್ದರೂ ದಂಡಾಧಿಕಾರಿ ಯಾವುದೇ ಕ್ರಮ ಗೊಂಡಿಲ್ಲ. ಒಂದು ವೇಳೆ ಕಾರ್ಖಾನೆಯಿಂದ ಗ್ರಾಮಗಳಿಗೆ ಹೆಚ್ಚಿನ ಸೋಂಕು ಹರಡಿ ಏನಾದರೂ ಸಮಸ್ಯೆ ಎದುರಾದರೆ ಅದರ ಹೊಣೆಯನ್ನು ದಂಡಾಧಿಕಾರಿ ಮೋಹನ್ ಕುಮಾರಿ ಹಾಗೂ ಕಾರ್ಖಾನೆ ಮಾಲೀಕರು ಹೊರಬೇಕಾಗುತ್ತದೆ ಎಂದಿರುವ ಅವರು, ಇನ್ನಾದರೂ ಈ ಸಂಬಂಧ ಸಮಗ್ರ ಪರಿಶೀಲಿಸಿ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕಾರ್ಖಾನೆಯ ಎದುರು ಸದಸ್ಯರೊಂದಿಗೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.