ಬನ್ನೂರು ರಾಜುರವರ ಕೃತಿಗೆ ರಾಜ್ಯ ಕಸಾಪ ದತ್ತಿ ಪ್ರಶಸ್ತಿ

Spread the love

ಬನ್ನೂರು ರಾಜುರವರ ಕೃತಿಗೆ ರಾಜ್ಯ ಕಸಾಪ ದತ್ತಿ ಪ್ರಶಸ್ತಿ

ಬೆಂಗಳೂರು: ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಕೊಡ ಮಾಡುವ ಪ್ರಸ್ತುತ ಸಾಲಿನ ‘ಶ್ರೀ ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್ ದತ್ತಿ ಪ್ರಶಸ್ತಿ’ ಯು ಸಾಹಿತಿ ಹಾಗೂ ಪತ್ರಕರ್ತ ಬನ್ನೂರು ಕೆ.ರಾಜು ಅವರ ‘ಬೆವರಿನ ಬೆಲೆ’ ಮಕ್ಕಳ ಕಥಾ ಸಂಕಲನಕ್ಕೆ ಲಭಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ತಿಳಿಸಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಇದೇ 2023 ಮಾರ್ಚ್ 12ರಂದು ಭಾನುವಾರ ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿನ ಶ್ರೀಕೃಷ್ಣರಾಜ ಪರಿಷತ್ ಮಂದಿರದಲ್ಲಿ ನಡೆಯಲಿದೆ. ‘ಬೆವರಿನ ಬೆಲೆ’ ಮಕ್ಕಳ ಕಥಾ ಸಂಕಲನವು ಮಕ್ಕಳು ಮಾತ್ರವಲ್ಲದೆ ಹಿರಿಯರೂ ಸೇರಿದಂತೆ ಪ್ರತಿಯೊಬ್ಬರ ಅರಿವಿನ ಪರಿಧಿ ಯನ್ನು ವಿಸ್ತಾರ ಗೊಳಿಸುವ ವಿಶಿಷ್ಟ ಕೃತಿಯಾಗಿದ್ದು ಭಾಷೆಯಿಂದ ಹಿಡಿದು ಕಥಾವಸ್ತುವಿನ ಆಯ್ಕೆಯ ತನಕ ಬಹು ವೈವಿಧ್ಯಮಯವಾಗಿದ್ದು ಮಹತ್ವದ ಕೃತಿ ಎನಿಸಿದೆ.

ಬನ್ನೂರು ರಾಜು ಅವರು ಕಥೆ, ಕಾದಂಬರಿ, ಕಾವ್ಯ, ನಾಟಕ, ವಚನ, ವಿಮರ್ಶೆ, ಪ್ರಬಂಧ, ನುಡಿ ಚಿತ್ರ, ಅಂಕಣ ಬರಹ, ಮುಕ್ತಕ ಸಾಹಿತ್ಯ, ಸಂಪಾದನೆ, ಸಂಶೋಧನೆ ಸೇರಿದಂತೆ ಬಹುತೇಕ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಕೃಷಿ ಮಾಡಿದ್ದು ನೂರಕ್ಕೂ ಹೆಚ್ಚು ಕೃತಿಗಳನ್ನು ನಾಡಿಗೆ ನೀಡಿದ್ದಾರೆ.ಜೊತೆಗೆ ಆರು ಸಾವಿರಕ್ಕೂ ಹೆಚ್ಚು ಬಿಡಿ ಲೇಖನಗಳನ್ನು ಬರೆದಿದ್ದಾರೆ.

ಇವರ ಸಾಹಿತ್ಯ ಮತ್ತು ಸಾಮಾಜಿಕ ಸೇವೆಗೆ ಅಮೆರಿಕನ್ ಬಯಾಗ್ರಫಿಕಲ್ ಇನ್ಸ್ಟಿಟ್ಯೂಟ್ (ಎಬಿಐ – ಯು ಎಸ್ಎ) ನ 1999 ನೇ ಸಾಲಿನ ಮ್ಯಾನ್ ಆಫ್ ದಿ ಇಯರ್ ಅಂತಾ ರಾಷ್ಟ್ರೀಯ ಪ್ರಶಸ್ತಿ, 1992 ರಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಪ್ರಶಸ್ತಿ, 1994 ರಲ್ಲಿ ಕರ್ನಾಟಕ ಸರ್ಕಾರದ ಬಹುಭಾಷಾ ದಸರಾ ಕವಿ ಸಮ್ಮೇಳನದ ಆಹ್ವಾನಿತ ಕವಿಯ ವಿಶೇಷ ಪುರಸ್ಕಾರ ಸೇರಿದಂತೆ ಡಾ.ಕೆ.ಶಿವರಾಮ ಕಾರಂತ ಪ್ರಶಸ್ತಿ, ವಿಶ್ವ ಮಾನವ ಕುವೆಂಪು ಸಾಹಿತ್ಯ ಪ್ರಶಸ್ತಿ, ಗಾಂಧಿವಾದಿ ನಂಜುಂಡಯ್ಯ ಪ್ರಶಸ್ತಿ, ಶ್ರೀ ಬಸವೇಶ್ವರ ಸದ್ಭಾವನಾ ಪ್ರಶಸ್ತಿ, ಮುಳ್ಳೂರು ನಾಗರಾಜು ಕಾವ್ಯ ಪ್ರಶಸ್ತಿ, ಎಚ್ಚೆಸ್ಕೆ ಸಾಹಿತ್ಯ ಪ್ರಶಸ್ತಿ, ಮೈಸೂರು ಜಿಲ್ಲಾಡಳಿತದ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಇವರಿಗೆ ಅನೇಕ ಪ್ರತಿಷ್ಠಿತ ಪ್ರಶಸ್ತಿ-ಪುರಸ್ಕಾರ, ಸನ್ಮಾನ-ಗೌರವಗಳು ಸಂದಿವೆ.


Spread the love