ಬಸ್ರೂರು ಮೂಡ್ಕೇರಿ  ಪಂಜುರ್ಲಿ ಗರಡಿಗೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌ ಭೇಟಿ

Spread the love

ಬಸ್ರೂರು ಮೂಡ್ಕೇರಿ  ಪಂಜುರ್ಲಿ ಗರಡಿಗೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌ ಭೇಟಿ

ಕುಂದಾಪುರ: ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಬಹುಸಂಖ್ಯೆಯಲ್ಲಿ ಇರುವ ಬಿಲ್ಲವ ಸಮಾಜದ ಅನೇಕರು ಮೂರ್ತೇದಾರಿಕೆ ಹಾಗೂ ಗರಡಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಕೋವಿಡ್-19 ರ ಸಂಕಷ್ಟ ಕಾಲದಲ್ಲಿ ಸಮಾಜದ ಇತರ ಕಸುಬುದಾರರಿಗೆ ನೀಡಿರುವಂತೆ ನಮ್ಮ ಸಮಾಜಕ್ಕೂ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಲು ಒತ್ತಾಯಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಮೂಲಕ ಮನವಿ ಸಲ್ಲಿಸಲಾಗಿದೆ.

ಇಲ್ಲಿಗೆ ಸಮೀಪದ ಬಸ್ರೂರಿನ ಮೂಡ್ಕೇರಿಯ ಪಂಜುರ್ಲಿ ಗರಡಿಗೆ ಮಂಗಳವಾರ ಸಂಜೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ತಾಲ್ಲೂಕು ಬಿಲ್ಲವ ಸೇವಾ ಸಮಾಜದ ಪ್ರಧಾನ ಕಾರ್ಯದರ್ಶಿ ಗಣೇಶ್‌ ವಿಠ್ಠಲವಾಡಿ ಅವರು ಕುಂದಾಪುರ ತಾಲ್ಲೂಕು ಬಿಲ್ಲವ ಸೇವಾ ಸಮಾಜದ ಅಧ್ಯಕ್ಷರಾದ ಅಶೋಕ ಬೀಜಾಡಿ ಅವರ ಮನವಿ ಮೇರೆಗೆ ಕರಾವಳಿ ಜಿಲ್ಲೆಯ ಮೀನುಗಾರರ ಸಮಸ್ಯೆಯನ್ನು ಆಲಿಸಿದ್ದೀರಿ. ಕರಾವಳಿ ಜಿಲ್ಲೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಇರುವ ಬಿಲ್ಲವ-ಈಡೀಗ ಸಮಾಜದವರ ಸಮಸ್ಯೆಗಳ ಕುರಿತು ಗಮನ ಹರಿಸುವಂತೆ ಮನವಿ ಮಾಡಿಕೊಂಡರು.

ಹಿಂದೆ ಎಸ್‌.ಆರ್‌. ಬಂಗಾರಪ್ಪನವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ, ಅಬಕಾರಿ ಇಲಾಖೆಯ ಅಧೀನಕ್ಕೆ ಒಳಪಟ್ಟಿದ್ದ ಶೇಂದಿ ಇಳಿಸುವಿಕೆ ಹಾಗೂ ಮಾರಾಟವನ್ನು ಸ್ವತಂತ್ರಗೊಳಿಸಿ ಐತಿಹಾಸಿಕ ಆದೇಶ ನೀಡಿ ಮೂರ್ತೇದಾರರ ಹಿತ ಕಾಪಾಡಿದ್ದರು. ಶೇಂದಿ ಇಳಿಸುವಾಗ ಮರದಿಂದ ಬಿದ್ದು ಮೃತಪಟ್ಟ ಮೂರ್ತೇದಾರರ ಕುಟುಂಬಕ್ಕೆ ಪರಿಹಾರವಾಗಿ 2 ಲಕ್ಷ ರೂ. ನೀಡಬೇಕು ಎನ್ನುವ ಭರವಸೆ ಈವರೆಗೂ ಈಡೇರಿಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಅಂದಾಜು 280 ಕ್ಕೂ ಹೆಚ್ಚು ಕೋಟಿ ಚನ್ನಯ್ಯ ಗರಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರು ಹಾಗೂ ಅವರ ಕುಟುಂಬಿಕರಿಗೆ ಈವರೆಗೂ ಸರ್ಕಾರದಿಂದ ಯಾವುದೇ ಸಹಾಯಧನ ದೊರಕಿಲ್ಲ ಎಂದು ಹೇಳಿದ ಬಿಲ್ಲವ ಸಂಘಟನೆಯ ಪ್ರಮುಖರು, ಬಿಲ್ಲವ ಸಮಾಜದ ಪರವಾಗಿ ಸರ್ಕಾರದ ಗಮನ ಸೆಳೆದು ಪರಿಹಾರ ನೀಡಲು ಶೀಘ್ರ ಆದೇಶ ಹೊರಡಿಸಲು ಸಹಕರಿಸುವಂತೆ ಮನವಿ ಮಾಡಿದರು.

ಬಸ್ರೂರು ಮೂಡ್ಕೇರಿ ಪಂಜುರ್ಲಿ ಗರಡಿಗೆ ಮೊದಲ ಬಾರಿ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರನ್ನು ಗರಡಿಯ ವ್ಯವಸ್ಥಾಪಕ ಬಿ.ಗೋಪಾಲ ಪೂಜಾರಿ, ತಾಲ್ಲೂಕು ಬಿಲ್ಲವ ಸಮಾಜದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ, ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಶ್ರೀಕಾಂತ ಕಡ್ಗಿಮನೆ, ಭಾಸ್ಕರ್ ಬಿಲ್ಲವ ವಿಠ್ಠಲವಾಡಿ, ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮಾಣಿಗೋಪಾಲ ಗೌರವಿಸಿದರು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಬೈಂದೂರು ಮಾಜಿ ಶಾಸಕ ಕೆ. ಗೋಪಾಲ‌ ಪೂಜಾರಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ ಕೊಡವೂರು, ಯುವ ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಮಹಮ್ಮದ್ ಹ್ಯಾರಿಸ್ ನಲಪಾಡ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೌರಿ ದೇವಾಡಿಗ, ದೇವಾನಂದ ಶೆಟ್ಟಿ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಮಲ್ಯಾಡಿ ಶಿವರಾಮ್ ಶೆಟ್ಟಿ, ಪಿ.ವಿ.ಮೋಹನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಎಸ್.ರಾಜು ಪೂಜಾರಿ, ಮದನಕುಮಾರ ಉಪ್ಪುಂದ, ಕೆ.ವಿಕಾಸ ಹೆಗ್ಡೆ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ದೇವಕಿ ಪಿ ಸಣ್ಣಯ್ಯ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಜಿಲ್ಲಾ ಎನ್‌ಎಸ್‌ಯುಐ ಅಧ್ಯಕ್ಷ ಸೌರಭ ಬಲ್ಲಾಳ್, ಜಿಲ್ಲಾ ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷ ರೋಶನ್ ಶೆಟ್ಟಿ, ಜಾನಕಿ ಬಿಲ್ಲವ, ಸುರೇಶ್ ಚಾತ್ರಬೆಟ್ಟು, ಬಸ್ರೂರು ಬಿಲ್ಲವ ಸಮಾಜದ ಜಯಸೂರ್ಯ ಪೂಜಾರಿ ಇದ್ದರು.

https://www.facebook.com/MangaloreanNews/videos/505149317242651


Spread the love