ಬಸ್ಸುಗಳಲ್ಲಿ ಪ್ರಯಾಣಿಕರ ಬಗ್ಗೆ ನಿರ್ಲಕ್ಷ್ಯತನ ತೋರುವ ಚಾಲಕ, ನಿರ್ವಾಹಕರ ವಿರುದ್ದ ಕಠಿಣ ಕ್ರಮ – ಎಸ್ಪಿ ಅಕ್ಷಯ್ ಮಚ್ಚೀಂದ್ರ ಎಚ್ಚರಿಕೆ

Spread the love

ಬಸ್ಸುಗಳಲ್ಲಿ ಪ್ರಯಾಣಿಕರ ಬಗ್ಗೆ ನಿರ್ಲಕ್ಷ್ಯತನ ತೋರುವ ಚಾಲಕ, ನಿರ್ವಾಹಕರ ವಿರುದ್ದ ಕಠಿಣ ಕ್ರಮ – ಎಸ್ಪಿ ಅಕ್ಷಯ್ ಮಚ್ಚೀಂದ್ರ ಎಚ್ಚರಿಕೆ

ಉಡುಪಿ: ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ 4 ರಂದು ಹಿರ್ಗಾನ ನಿವಾಸಿ ಕೃಷ್ಣ ನಾಯ್ಕ (70) ಎಂಬವರು ಕಾರ್ಕಳ ದಿಂದ ಹೆಬ್ರಿಗೆ ಹೋಗುವ ರೇಷ್ಮಾ ಬಸ್ಟ್ ಸಂಖ್ಯೆ ಕೆಎ20ಡಿ5749ಕ್ಕೆ ಮೂರುರು ಬಳಿ ಏರಲು ಪ್ರಯತ್ನಿಸಿದಾಗ ನಿರ್ವಾಹಕ ಜಯಪ್ರಕಾಶ್ ಶೆಟ್ಟಿ(60), ತಂದೆ: ಯಲ್ಲಪ್ಪ ಶೆಟ್ಟಿ, ಬೆಟ್ಟಿನ ಮನೆ, ಬಾಳೆಬೈಲು, ಪೆರ್ಡೂರು, ಉಡುಪಿ ಇವರ ನಿರ್ಲಕ್ಷತನದಿಂದ ಬಸ್ಸನ್ನು ಏರುವ ಮೊದಲೇ ಬಸ್ ಚಲನೆಗೆ ಸೂಚನೆ ನೀಡಿದ್ದರಿಂದ ಮೃತ ಕೃಷ್ಣ ನಾಯ್ಕ ಬಸ್ಸಿನಿಂದ ಬಿದ್ದು ಮೃತಪಟ್ಟಿರುವುದಾಗಿದೆ. ಈ ಘಟನೆಗೆ ಬಸ್ಸಿನ ನಿರ್ವಾಹಕನ ನಿರ್ಲಕ್ಷತನವೇ ಕಾರಣವಾಗಿದ್ದು, ಬಸ್ಸಿನ ನಿರ್ವಾಹಕರ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಲಾಗಿರುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ಅವರು ತಿಳಿಸಿದ್ದಾರೆ.

ಅಂತೆಯೇ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2022 ರ ಜನವರಿ 26 ರಂದು ಹೆಬ್ರಿ ನಿವಾಸಿ ಚಂದ್ರಶೇಖರ ನಾಯ್ಕ (65) ಎಂಬವರು ಕೊಂಚಾಡಿ ಹಳೆನೀರು ಬೆಟ್ಟು ಎಂಬಲ್ಲಿ ಶ್ರೀ ದುರ್ಗಾಂಬಾ ಕೆಎ20ಡಿ 4249ನೇ ಬಸ್ಸಿಗೆ ಪಾರ್ಸೆಲ್ ನೀಡಿ ಬಸ್ಸಿನಿಂದ ಇಳಿಯುವಾಗ ಬಸ್ಸಿನ ನಿರ್ವಾಹಕ ಮಂಜುನಾಥ(31), ತಂದೆ: ದಿ. ವೀರಪ್ಪ ಗೌಡ, ಕೆಳನಾಲೂರು ಮನೆ, ಆಗುಂಬೆ, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಇವರು ನಿರ್ಲಕ್ಷತನದಿಂದ ಬಸ್ಸನ್ನು ಇಳಿಯುವ ಮೊದಲೇ ಬಸ್ ಚಲನೆಗೆ ಸೂಚನೆ ನೀಡಿದ್ದರಿಂದ ಮೃತ ಚಂದ್ರಶೇಖರ ನಾಯ್ಕ ಬಸ್ಸಿನಿಂದ ಬಿದ್ದು, ಬಸ್ಸಿನ ಹಿಂದಿನ ಚಕ್ರಕ್ಕೆ ಸಿಲುಕಿ ತೀವ್ರ ಗಾಯಗೊಂಡು ಮೃತಪಟ್ಟಿರುವುದಾಗಿದೆ. ಈ ಘಟನೆಗೆ ಬಸ್ಸಿನ ನಿರ್ವಾಹಕ ಹಾಗೂ ಚಾಲಕನ ನಿರ್ಲಕ್ಷತನವೇ ಕಾರಣವಾಗಿದ್ದು, ಬಸ್ಸಿನ ನಿರ್ವಾಹಕ ಹಾಗೂ ಬಸ್ಸಿನ ಚಾಲಕ ವಿಶ್ವನಾಥ ಶೆಟ್ಟಿ(53), ತಂದೆ : ನಾರಾಯಣ, ಬೆಳ್ವೆ ಅಂಚೆ, ಕುಂದಾಪುರ ತಾಲೂಕು ಇವರುಗಳ ಮೇಲೆ ಪ್ರಕರಣ ದಾಖಲಿಸಿ, ಬಂದಿಸಲಾಗಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕ ಬಸ್‌ಗಳಲ್ಲಿ ಬಸ್ಸಿನ ನಿರ್ವಾಹಕ ಹಾಗೂ ಬಸ್ಸಿನ ಚಾಲಕರ ನಿರ್ಲಕ್ಷತನದಿಂದ ಪ್ರಯಾಣಿಕರು ಇಳಿಯುವ ಮತ್ತು ಏರುವ ಮೊದಲೇ ಬಸ್ಸನ್ನು ಚಲಾಯಿಸುವುದು ಹಾಗೂ ಅತೀಯಾದ ಪ್ರಯಾಣಿಕರನ್ನು ತುಂಬಿಸಿಕೊಂಡು, ಫುಟ್‌ಬೋರ್ಡ್ ಮೇಲೆ ನೇತಾಡಿಕೊಂಡು ಪ್ರಯಾಣಿಕರನ್ನು ಸಾಗಿಸುತ್ತಿರುವುದು, ಅಪಘಾತ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿರುತ್ತದೆ. ಈ ಘಟನೆಗಳಿಗೆ ನೇರವಾಗಿ ಕಾರಣವಾಗುವ ಬಸ್ಸಿನ ಚಾಲಕ ಹಾಗೂ ನಿರ್ವಾಹಕರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಎಚ್ಚರಿಸಿದ್ದಾರೆ.


Spread the love