ಬಸ್ ಹತ್ತುವ ವೇಳೆ ಆಯತಪ್ಪಿ ಬಿದ್ದು ಮಹಿಳೆ ಸಾವು

Spread the love

ಬಸ್ ಹತ್ತುವ ವೇಳೆ ಆಯತಪ್ಪಿ ಬಿದ್ದು ಮಹಿಳೆ ಸಾವು

ಕೆ.ಆರ್.ಪೇಟೆ: ತಾಲ್ಲೂಕಿನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿದ್ದ ಕುಂಭಮೇಳದಲ್ಲಿ ಭಾಗವಹಿಸಿ ತಮ್ಮ ಊರಿಗೆ ಹಿಂತಿರುಗಲು ಉಚಿತ ಬಸ್ ನ್ನು ಹತ್ತುವ ವೇಳೆ ಆಯತಪ್ಪಿ ನೆಲಕ್ಕೆ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.

ಅಕ್ಕಿಹೆಬ್ಬಾಳು ಗ್ರಾಮದ ಸಾಕ್ಷಿಬೀಡು ರಸ್ತೆಯ ನಿವಾಸಿ ಸುಶೀಲಮ್ಮ (55) ಮೃತಪಟ್ಟ ಮಹಿಳೆ. ಇವರು, ಬಸ್ ಹತ್ತುವ ವೇಳೆ ಆಯತಪ್ಪಿ ಬಿದ್ದಿದ್ದು, ಈ ಸಂದರ್ಭ ಅವರ ಮೈಮೇಲೆ ಬಸ್ಸಿನ ಚಕ್ರ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಕೂಲಿ‌ಮಾಡಿ ಜೀವನ ನಡೆಸುತ್ತಿದ್ದ ಸುಶೀಲಮ್ಮ ಭಾನುವಾರ ಬೆಳಿಗ್ಗೆ 8ಗಂಟೆಗೆ ಮನೆಯಿಂದ ಕುಂಭಮೇಳಕ್ಕೆ ಹೋಗಿ ಪುಣ್ಯ ಸ್ನಾನ ಮಾಡಿ ದೇವರ ದರ್ಶನ ಪಡೆದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಷಣವನ್ನೂ ವೀಕ್ಷಣೆ ಮಾಡಿ ವಾಪಸ್ ಹಿಂತಿರುಗುವ ವೇಳೆ ಶ್ರೀ ಕ್ಷೇತ್ರದಿಂದ ಸೋಮನಹಳ್ಳಿ ವರೆಗೆ ಓಡಾಡುತ್ತಿದ್ದ ಉಚಿತ ಬಸ್ಸಿಗೆ ಹತ್ತುವ ವೇಳೆ ಆಯತಪ್ಪಿ ಬಸ್ಸಿನಿಂದ ಕೆಳಗೆ ಬಿದ್ದು ಈ ದುರ್ಘಟನೆ ಸಂಭವಿಸಿದೆ.

ಮೃತರ ನಿಧನಕ್ಕೆ ಸಚಿವರಾದ ನಾರಾಯಣಗೌಡ, ಕೆ.ಗೋಪಾಲಯ್ಯ, ಬಿ.ಸಿ.ನಾಗೇಶ್, ಜಿಲ್ಲಾಧಿಕಾರಿ ಎಸ್.ಅಶ್ವಥಿ, ಎ.ಸಿ.ಶಿವಾನಂದಮೂರ್ತಿ, ತಹಸೀಲ್ದಾರ್ ರೂಪಾ ಮತ್ತಿತರರು ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.


Spread the love