ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಸಿಎಂ ಚಾಲನೆ

Spread the love

ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಸಿಎಂ ಚಾಲನೆ

ಮೈಸೂರು: ಕಲಾಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತದ ಭೂಪಟದ ಕಲಾಕೃತಿಯೊಳಗಿನಿಂದ ಕಲೆ- ಸಂಸ್ಕೃತಿಯನ್ನು ಹೊತ್ತು ಬಂದ ಚಿಣ್ಣರಿಂದ ಗುಲಾಬಿ ಹೂಗಳನ್ನು ಸ್ವೀಕರಿಸಿ ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು.

ಈ ವೇಳೆ ಮಾತನಾಡಿದ ಅವರು, ರಂಗಾಯಣ ಆಧುನಿಕತೆಯನ್ನು ತೋರಿಸುತ್ತಲೇ ಭಾರತೀಯತೆಯ ಆತ್ಮ ಪ್ರದರ್ಶಿಸಬೇಕು. ಮಾನವೀಯತೆ ಗುಣಗಳ ಮೇಲೆ ಪ್ರಯೋಗಗಳಾಗಬೇಕು. ಸಮಾಜದ ಅಂಕು- ಡೊಂಕುಗಳನ್ನು ತಿದ್ದುವ ನಾಟಕಗಳು ಬೇಕು ಎಂದು ತಿಳಿಸಿದರು.

ಸಮಾಜದಲ್ಲಿ ಹಲವು ವಿಚಾರಗಳಲ್ಲಿ ದಂದ್ವ- ಗೊಂದಲಗಳಿರುತ್ತವೆ. ನಾಟಕಗಳ ಮೂಲಕ ಜನರಲ್ಲಿ ಸ್ಪಚ್ಛತೆ ಮೂಡಿಸುವ ಕೆಲಸವನ್ನು ರಂಗಾಯಣ ಮಾಡಬೇಕು. ವಿಶ್ವವಿದ್ಯಾಲಯಗಳಲ್ಲಿ ವೈಚಾರಿಕ ಸಂಘರ್ಷಗಳು ನಡೆಯುತ್ತಿದ್ದವು. ರಂಗಾಯಣದಲ್ಲೂ ವೈಚಾರಿಕ ಸಂವಾದಕ್ಕೆ ಅವಕಾಶ ನೀಡುವ ನಾಟಕಗಳು ಬಂದಿವೆ. ಎಲ್ಲರನ್ನು ಒಳಗೊಳ್ಳುವ ರಂಗಾಯಣ ಸಮಾಜದ ಮುಖ್ಯ ವಾಹಿನಿಯಾಗಬೇಕು. ಸಂಘರ್ಷಗಳಿಂದ ಪಾಠ ಕಲಿತು ಹೊಸ ಪೀಳಿಗೆಗೆ ಸತ್ಯ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು ಎಂದರು.

ಶಬ್ದ, ಭಾಷೆಯಿಂದ ತಿಳಿಸಲು ಆಗುವುದಿಲ್ಲವೋ ರಂಗದ ಮೂಲಕ ಸುಲಭವಾಗಿ, ಸಹಜವಾಗಿ ತಲುಪಿಸಬಹುದು. ಕಲಾವಿದರು ತಮ್ಮ ಅಭಿನಯ ಸೂಕ್ಷ್ಮತೆಯಿಂದ ಸಮಾಜಕ್ಕೆ ವಿಚಾರಗಳನ್ನು ಹಾಗೂ ನೆಲದ ಸಂಸ್ಕೃತಿಯನ್ನು ವರ್ಗಾಯಿಸಬೇಕು ಎಂದು ತಿಳಿಸಿದರು.

ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಮಾತನಾಡಿ, ರಂಗಾಯಣದ ಹಿಂದೆ ಎಡಪಂಥೀಯರ ಅಧಿಪತ್ಯವಿತ್ತು. ಬಹುರೂಪಿ ಉತ್ಸವವನ್ನು ನಗರ ನಕ್ಸಲರೇ ಉದ್ಘಾಟಿಸಿದ್ದರು. ನಾನು ನಿರ್ದೇಶಕನಾಗಿ ಬಂದು ರಾಷ್ಟ್ರೀಯತೆ ಆಧಾರದ ಮೇಲೆ ರಂಗಾಯಣ ಕಟ್ಟಿದ್ದೇನೆ ಎಂದರು.

ಎಡಚರು ನನ್ನನ್ನು ಬಗ್ಗಿಸಲು ನೋಡಿದರು. ತೊಂದರೆ ಕೊಟ್ಟಿದ್ದರು. ಕಿರುಕುಳ ನೀಡಿದ್ದರು. ಪ್ರತಿಭಟನೆಗಳನ್ನು ಮಾಡಿದರು. ಅಂಥ ಮಜಾವಾದಿಗಳ ತೆಕ್ಕೆಗೆ ರಂಗಾಯಣ ಮತ್ತೆ ಹೋಗಬಾರದು ಎಂದು ಹೇಳಿದರು.

ರಂಗಾಯಣಕ್ಕೆ ಸ್ಥಳದ ಕೊರತೆಯಿದ್ದು, ಹೊಸ ಭೂಮಿ ನೀಡಬೇಕು. ಟಿಪ್ಪು ನಿಜಕನಸುಗಳು ನಾಟಕ ರಾಜ್ಯದಾದ್ಯಂತ ಪ್ರದರ್ಶಿಸಲು ರಂಗಸಂಚಾರಕ್ಕೆ ಅನುದಾನ ನೀಡಬೇಕು ಎಂದು ಕೋರಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಚಲನಚಿತ್ರ ನಟ ರಮೇಶ್ ಅರವಿಂದ್, ಸಂಸದ ಪ್ರತಾಪ ಸಿಂಹ, ಶಾಸಕ ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್.ಪೂರ್ಣಿಮಾ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ರಂಗಾಯನ ಉಪ ನಿರ್ದೇಶ ನಿರ್ಮಲಾ ಮಠಪತಿ ಇದ್ದರು.


Spread the love