ಬಾಣಂತಿ, ಅವಳಿ ಶಿಶು ಸಾವು ಪ್ರಕರಣ: ಸಚಿವ ಡಾ. ಕೆ ಸುಧಾಕರ್ ರಾಜೀನಾಮೆ ನೀಡಲಿ – ವೆರೋನಿಕಾ ಕರ್ನೆಲಿಯೊ

Spread the love

ಬಾಣಂತಿ, ಅವಳಿ ಶಿಶು ಸಾವು ಪ್ರಕರಣ: ಸಚಿವ ಡಾ. ಕೆ ಸುಧಾಕರ್ ರಾಜೀನಾಮೆ ನೀಡಲಿ – ವೆರೋನಿಕಾ ಕರ್ನೆಲಿಯೊ

ಉಡುಪಿ: ತುಮಕೂರು ಜಿಲ್ಲಾಸ್ಪತ್ರೆ ವ್ಯೆದ್ಯರು ಮತ್ತು ಸಿಬಂದಿಗಳ ನಿರ್ಲಕ್ಷ್ಯದಿಂದ ಬಾಣಂತಿ ಹಾಗೂ ಆಕೆಯ ಇಬ್ಬರು ನವಜಾತ ಶಿಶುಗಳ ಸಾವಿಗೆ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವ ಡಾ. ಸುಧಾಕರ್ ಅವರು ರಾಜೀನಾಮೆ ನೀಡುವಂತೆ ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಆಗ್ರಹಿಸಿದ್ದಾರೆ.

ಅನಾಥ ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ಆಸ್ಪತ್ರೆಯ ಬಾಗಿಲಿಗೆ ಬಂದು ಬೇಡಿಕೊಂಡರೂ ಕೂಡ ತಾಯಿ ಕಾರ್ಡ್ ಇಲ್ಲವೆಂಬ ಕಾರಣಕ್ಕೆ ಚಿಕಿತ್ಸೆಗೆ ದಾಖಲಿಸಿಕೊಳ್ಳದೆ ವಾಪಾಸು ಕಳುಹಿಸಿದ್ದು, ಆಕೆ ಮನೆಯಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡುವಾಗ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವುದು ಆರೋಗ್ಯ ಸಚಿವ ಡಾ ಸುಧಾಕರ್ ಅವರ ಆಡಳಿತದ ಇಲಾಖೆ ಎಷ್ಟೊಂದು ಹದಗೆಟ್ಟಿದೆ ಎನ್ನುವುದಕ್ಕೆ ದುರಂತ ಸಾಕ್ಷಿಯಾಗಿದೆ. ಈ ಘಟನೆಗೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮತ್ತು ಸರಕಾರ ನೇರ ಹೊಣೆಯಾಗಿದೆ. ಸ್ವತಃ ವೈದ್ಯರೆಂದು ಹೇಳಿಕೊಳ್ಳುವ ಆರೋಗ್ಯ ಸಚಿವರ ಇಲಾಖೆ ಮಾನವೀಯತೆ ಇಲ್ಲದೆ ವರ್ತಿಸಿರುವುದು ಖಂಡನೀಯ. ಮಾನವೀಯತೆ ಮರೆತ ಆಸ್ಪತ್ರೆಯ ಸಿಬಂದಿಗಳನ್ನು ಕೂಡಲೇ ಆಮಾನತು ಮಾಡಿದ್ದು ಅಂತಹವರ ವಿರುದ್ದ ಪ್ರಕರಣ ದಾಖಲಿಸಬೇಕು. ಇದರೊಂದಿಗೆ ಈ ಸರಕಾರಿ ಕೊಲೆಗೆ ಕಾರಣವಾದ ಆರೋಗ್ಯ ಇಲಾಖೆಯ ಸಚಿವ ಡಾ ಸುಧಾಕರ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು

ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ಚುನಾವಣೆಗಳಿಗೆ ಸೀಮಿತವಾಗಿದ್ದು, ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಕೊರೋನಾ ಕಾಲಲ್ಲಿ ಆರೋಗ್ಯ ಇಲಾಖೆಯ ಬೇಜವಾಬ್ದಾರಿ ನಡವಳಿಕೆಯಿಂದ ನೂರಾರು ಅಮಾಯಕ ಜೀವಗಳು ಕಳೆದುಕೊಂಡಿದ್ದು ಆರೋಗ್ಯ ಸಚಿವ ಡಾ ಸುಧಾಕರ್ ಅವರು ಆರೋಗ್ಯ ಸಚಿವರಾಗಿ ಮುಂದುವರಿದರೆ ಸರಣಿ ವೈದ್ಯಕೀಯ ಹತ್ಯೆಗಳು ಮುಂದುವರೆಯಲಿದೆ. ಇದನ್ನು ತಪ್ಪಿಸಬೇಕಾದರೆ ಕೂಡಲೇ ಸಚಿವರು ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.


Spread the love