Home Mangalorean News Kannada News ಬಾಲಮಂದಿರ ಖುದ್ದು ಪರಿಶೀಲನೆ: ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್

ಬಾಲಮಂದಿರ ಖುದ್ದು ಪರಿಶೀಲನೆ: ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್

Spread the love

ಬಾಲಮಂದಿರ ಖುದ್ದು ಪರಿಶೀಲನೆ: ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್

ಮಂಗಳೂರು: ನಗರದಲ್ಲಿರುವ ಬಾಲಮಂದಿರಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ರಕ್ಷಣೆ ಮತ್ತು ಪೋಷಣೆಯ ಅಗತ್ಯವಿರುವ ಪಕ್ಕದ ಜಿಲ್ಲೆಗಳ ಮಕ್ಕಳನ್ನೂ ಜಿಲ್ಲೆಯ ಬಾಲಕರ ಬಾಲಮಂದಿರಕ್ಕೆ ಸೇರ್ಪಡೆಗೊಳಿಸುತ್ತಿದ್ದು, ಇದರಿಂದ ಬಾಲಮಂದಿರದಲ್ಲಿ ಸಾಮಥ್ರ್ಯ ಮೀರಿ ಮಕ್ಕಳು ವಾಸ್ತವ್ಯದಲ್ಲಿ ಇದ್ದಾರೆ ಎಂದು ಮಕ್ಕಳ ಸಮಿತಿ ಸದಸ್ಯರು ಸಭೆಯಲ್ಲಿ ಜಿಲ್ಲಾಧಿಕಾರಿಗಳ ಗಮನಸೆಳೆದರು. ಇದಕ್ಕೆ ಸ್ಪಂದಿಸಿದ ಅವರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ಶೀಘ್ರವೇ ಬಾಲಮಂದಿರಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು.

ಮಕ್ಕಳ ರಕ್ಷಣಾ ಕೇಂದ್ರಗಳಿಗೆ ಈಗಾಗಲೇ ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿದಂತೆ ಅಗತ್ಯ ಪೀಠೋಪಕರಣಗಳನ್ನು ಒದಗಿಸಲಾಗಿದ್ದು, ವ್ಯವಸ್ಥೆಗೆ ಸಂಬಂಧಿಸಿದಂತೆ ದಾಖಲೀಕರಣ ಪ್ರಕ್ರಿಯೆಗಳನ್ನು ಖಾತರಿಪಡಿಸಿಕೊಳ್ಳಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಕಾಣೆಯಾದ ಮಕ್ಕಳ ಬಗ್ಗೆ ಮಾಹಿತಿಯನ್ನು ರಾಷ್ಟ್ರಮಟ್ಟದಲ್ಲಿ ಪ್ರಚುರ ಪಡಿಸಲು ವೆಬ್ ಪೋರ್ಟಲ್‍ನಲ್ಲಿ ಅಪಲೋಡ್ ಮಾಡಲು ಸೂಚಿಸಿದ ಜಿಲ್ಲಾಧಿಕಾರಿಗಳು, ಪ್ರಮಾಣಿತ ಕಾರ್ಯವಿಧಾನಗಳ ಮೂಲಕ ಮಕ್ಕಳ ರಕ್ಷಣೆಗೆ ರಕ್ಷಣಾ ಘಟಕ ಮುಂದಾಗಬೇಕೆಂದು ಹೇಳಿದರು.

ಪೋಕ್ಸೋ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯದಾನ ವಿಳಂಬಗೊಳ್ಳದಂತೆ ವಿಶೇಷ ನ್ಯಾಯಾಲಯದ ಮೂಲಕ ವಿಚಾರಣೆ ನಡೆಸಿ ನ್ಯಾಯ ಒದಗಿಸುವ ಸಂಬಂಧ ಜಿಲ್ಲಾ ಸತ್ರ ನ್ಯಾಯಾಧೀಶರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ ಜಿಲ್ಲಾಧಿಕಾರಿಗಳು, ಹುಬ್ಬಳ್ಳಿ-ಧಾರವಾಡಗಳ ಮಾದರಿ ಶಾಲಾ ಮಕ್ಕಳಿಗೆ ‘ಗುಡ್ ಟಚ್, ಬ್ಯಾಡ್ ಟಚ್’ ಬಗ್ಗೆ ಅರಿವು ಕಾರ್ಯಕ್ರಮ ಆಯೋಜಿಸಲು ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.

2012 ಡಿಸೆಂಬರ್ ಡಿಸೆಂಬರ್ 2017ರವರೆಗೆ ಒಟ್ಟು 429 ಪೋಕ್ಸೋ ಪ್ರಕರಣಗಳು ಬಾಕಿಯಿದ್ದು, 2018ಜನವರಿಯಿಂದ ಸೆಪ್ಟೆಂಬರ್ 2018ರವರೆಗೆ 69 ಪ್ರಕರಣಗಳು ಬಾಕಿ ಇವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಬಾಲನ್ಯಾಯ ಮಂಡಳಿಯಲ್ಲಿ ದಾಖಲಾಗಿರುವ ದೂರುಗಳನ್ನು ಪರಿಶೀಲಿಸಿ ಭೌಗೋಳಿಕ ಮತ್ತು ಸಾಮಾಜಿಕ ಮತ್ತು ಆರ್ಥಿಕ ವಿಶ್ಲೇಷಣಾ ವರದಿಯೊಂದನ್ನು ತಯಾರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬಾಲನ್ಯಾಯ ಮಂಡಳಿಯಲ್ಲಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಪೊಲೀಸ್ ಇಲಾಖೆ ಪೂರಕವಾಗಿ ನೆರವಾಗಲು ಜಿಲ್ಲಾಧಿಕಾರಿ ಸೂಚಿಸಿದರು.

ರಾಜ್ಯ ಮಕ್ಕಳ ರಕ್ಷಣಾ ನೀತಿ ಸಮಿತಿ ರಚನೆ ಸಂಬಂಧ ಸಭೆ ನಡೆಸದ ಮಂಗಳೂರು ಮತ್ತು ಸುಳ್ಯದ ಅಧಿಕಾರಿಗಳಿಗೆ ಷೋಕಾಸ್ ನೋಟೀಸ್ ನೀಡಲು ಸೂಚಿಸಿದರು.

ಮಕ್ಕಳ ಗ್ರಾಮಸಭೆ, ಹಬ್ಬದ ವೇಳೆ ನಗರದಲ್ಲಿ ಮಕ್ಕಳೊಂದಿಗೆ ಭಿಕ್ಷಾಟನೆ ಸಮಸ್ಯೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.

ನಗರದಲ್ಲಿ ಓಪನ್ ಶೆಲ್ಟರ್ ಆರಂಭಿಸಲು ಆಸಕ್ತ ಎನ್ ಜಿ ಒಗಳಿಂದ ಅರ್ಜಿ ಆಹ್ವಾನಿಸಲು ಸೂಚನೆ ನೀಡಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಸೆಲ್ವಮಣಿ ಆರ್ ಪಾಲ್ಗೊಂಡರು. ಮಕ್ಕಳ ರಕ್ಷಣಾ ಅಧಿಕಾರಿ ಉಸ್ಮಾನ್ ಮತ್ತು ಚೈಲ್ಡ್ ಲೈನ್ ಪ್ರತಿನಿಧಿಗಳು, ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಎನ್ ಜಿಒ ಮುಖ್ಯಸ್ಥರಾದ ರೆನ್ನಿ ಡಿ ಸೋಜ ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version