
ಬಾಳಿಗಾ ಸಾವಿಗೆ ನ್ಯಾಯ ನೀಡಲಾಗದ ಪರಿಣಾಮವನ್ನು ವೇದವ್ಯಾಸ ಕಾಮತ್ ಎದುರಿಸಲಿದ್ದಾರೆ- ಸಂತೋಷ್ ಬಜಾಲ್
ವೆಂಕಟರಮಣ ದೇವರ ಭಕ್ತ, ಜಿಎಸ್ ಬಿ ಸಮುದಾಯದ ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಸಾವಿಗೆ ನ್ಯಾಯ ಒದಗಿಸಲಾಗದ ಪರಿಣಾಮವನ್ನು ಈ ಬಾರಿಯ ಚುನಾವಣೆಯಲ್ಲಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತರು ಎದುರಿಸಲಿದ್ದಾರೆ ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ರವರು ಬೆಂಗರೆಯಲ್ಲಿ ಡಿವೈಎಫ್ಐ ನೇತೃತ್ವದಲ್ಲಿ ನಡೆದ ಯುವಜನ ಸಮಾವೇಶವನ್ನು ಉದ್ಘಾಟಿಸುತ್ತಾ, ಈ ಮಾತುಗಳನ್ನು ಹೇಳಿದರು.
ಗ್ರಾಮ ಪಂಚಾಯಿತಿಯಿಂದ ಕೇಂದ್ರ ಸರಕಾರದವರೆಗೂ ನಮ್ಮನ್ನಾಳುವ ಬಿಜೆಪಿ ಸರಕಾರ ಯುವಜನರ ಯಾವೊಂದು ಆಶೋತ್ತರಗಳನ್ನು ಈಡೇರಿಸಲಿಲ್ಲ. ವರುಷಕ್ಕೆರಡು ಕೋಟಿ ಉದ್ಯೋಗವನ್ನು ಸೃಷ್ಟಿಸುವ ಬದಲು ಇರುವ ಉದ್ಯೋಗಗಳನ್ನು ಕಳೆದುಕೊಳ್ಳುವಂತಾಗಿದೆ. ಉದ್ಯೋಗ ಇಲ್ಲದೆ ಕಂಗಾಲಾಗಿರುವ ಯುವಜನತೆ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅಕ್ರಮ ದಂಧೆಗಳನ್ನು ನಡೆಸುವ ಕ್ರಿಮಿನಲ್ ಗಳಾಗಿ ಪರಿವರ್ತನೆಗೊಂಡಿದ್ದಾರೆ. ನಗರ ದಕ್ಷಿ ಣದ ಶಾಸಕ ವೇದವ್ಯಾಸ ಕಾಮತರ ಹಿಂಬಾಲಕರೆಲ್ಲರು ಜೂಜು ಕೇಂದ್ರಗಳನ್ನು, ಜುಗಾರಿ ಅಡ್ಡೆಗಳನ್ನು, ಅಕ್ರಮ ಮರಳುಗಾರಿಕೆಗಳನ್ನು , ಬೆಟ್ಟಿಂಗ್ ದಂಧೆ ನಡೆಸುವಂತಹ ತಲೆಹಿಡುಕರೆಂದು ಗಮನಿಸಬಹುದು. ದುಡಿದು ತಿನ್ನುವ ಬಡವರ ಗಳಿಕೆಯನ್ನು ನುಂಗುವ ಗ್ಯಾಂಬ್ಲರ್ ಗಳನ್ನು , ಉದ್ಯೋಗವಿಲ್ಲದೆ ಬೆಳೆದು ನಿಂತಿರುವ ಮನೆಯ ಯುವಕರನ್ನು ಹಾಳು ಮಾಡುವ ಇಂತಹ ಕ್ರಿಮಿನಲ್ ಗಳನ್ನು ಮಟ್ಟಹಾಕಬೇಕಾದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ DYFI ಜಿಲ್ಲಾಧ್ಯಕ್ಷರಾದ ಬಿ ಕೆ ಇಮ್ತಿಯಾಜ್,ಮಾಜಿ ರಾಜ್ಯಾಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್,DYFI ನಾಯಕರಾದ ನವೀನ್ ಕೊಂಚಾಡಿ,ತಾಯ್ಯುಬ್ ಬೆಂಗ್ರೆ,ಹನೀಫ್,ನೌಶಾದ್ ರವರು ಉಪಸ್ಥಿತರಿದ್ದರು.