ಬಿಆರ್ ಹಿಲ್ಸ್ ನಲ್ಲಿ ಬಹುವರ್ಣೀಯ ಹೊಸ ಕೀಟ ಪತ್ತೆ

Spread the love

ಬಿಆರ್ ಹಿಲ್ಸ್ ನಲ್ಲಿ ಬಹುವರ್ಣೀಯ ಹೊಸ ಕೀಟ ಪತ್ತೆ

ಚಾಮರಾಜನಗರ: ಅಶೋಕ ಟ್ರಸ್ಟ್ ಫಾರ್ ರಿಸರ್ಚ್‌ ಇನ್ ಇಕಾಲಜಿ ಅಂಡ್ ಎನ್ವಿರಾನ್‌ಮೆಂಟ್‌ನ (ಏಟ್ರೀ) ಕೀಟಶಾಸ್ತ್ರಜ್ಞರ ತಂಡವು ಜಿಲ್ಲೆಯ ಬಿಳಿಗಿರಿರಂಗನಬೆಟ್ಟದ ಅರಣ್ಯದಲ್ಲಿ (ಬಿಆರ್‌ಟಿ) ಕಣಜ ಕುಲಕ್ಕೆ (ಜಾತಿ) ಸೇರಿದ, ಬಹುವರ್ಣೀಯ ಹೊಸ ಕೀಟವನ್ನು ಪತ್ತೆ ಮಾಡಿದೆ.

ಅರಣ್ಯ ಸಂರಕ್ಷಣೆ ಮಾಡುತ್ತಾ ಬಂದಿರುವ ಈ ಭಾಗದ ಆದಿವಾಸಿಗಳಾದ ಸೋಲಿಗರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ಹೊಸ ಕಣಜ ಕುಲಕ್ಕೆ ಸೋಲಿಗ ಮತ್ತು ಕೀಟ ಪ್ರಭೇದಕ್ಕೆ ‘ಎಕಾರಿನಾಟ’ ಎಂದು ಹೆಸರಿಡಲಾಗಿದೆ.

ಏಟ್ರೀ ಸಂಶೋಧಕರಾದ ಡಾ.ರಂಜಿತ್‌ ಎ.ಪಿ., ಮತ್ತು ಡಾ.ಪ್ರಿಯದರ್ಶನ್‌ ಧರ್ಮ ರಾಜನ್‌ ಈ ಪರಾವಲಂಬಿ ಕೀಟವನ್ನು ಪತ್ತೆ ಮಾಡಿ ಅದಕ್ಕೆ ಹೊಸ ಹೆಸರು ಇಟ್ಟಿದ್ದಾರೆ. ಏಟ್ರೀಯು ಹಮ್ಮಿಕೊಂಡಿದ್ದ ಪಶ್ಷಿಮ ಘಟ್ಟದಲ್ಲಿ ಕೀಟಗಳ ಪತ್ತೆ ಯೋಜನೆಯ ಭಾಗವಾಗಿ 15 ವರ್ಷದ ಹಿಂದೆಯೇ ಈ ಹೊಸ ಕೀಟದ ಮಾದರಿಯನ್ನು ಸಂಶೋಧಕರು ಸಂಗ್ರಹಿಸಿದ್ದರು. ನಾಗಾಲ್ಯಾಂಡ್‌ನಿಂದಲೂ ಇದೇ ಜಾತಿಗೆ ಸೇರಿದ ಕೀಟಗಳ ಮಾದರಿಗಳನ್ನು ಸಂಗ್ರಹಿಸಲಾಗಿತ್ತು.

‘ಸೋಲಿಗ ಎಕಾರಿನಾಟ’ವು ಡಾರ್ವಿನ್‌ ಪರಾವಲಂಬಿ ಕಣಜಗಳ ಉಪ ಕುಟುಂಬವಾದ ಮೆಟೊಪಿನೆಯ (Metopiinae) ಇಚ್ನ್ಯೂಮೊನಿಡೆಯ (Ichneumonidae) ಕುಟುಂಬಕ್ಕೆ ಸೇರಿದೆ. ಮೆಟೊಪಿನೆಯಲ್ಲಿ 27 ಕಣಜ ಕುಲಗಳಿದ್ದು, 862 ಪ್ರಭೇದಗಳಿವೆ. ಭಾರತದಲ್ಲಿ ಎರಡು ಕುಲಗಳು (ಜೀನಸ್‌) ಮಾತ್ರ ಕಂಡು ಬಂದಿದ್ದು, ದಕ್ಷಿಣ ಭಾರತದಲ್ಲಿ ಪತ್ತೆಯಾದ ಮೊದಲ ಕಣಜ ಕುಲ ಇದಾಗಿದೆ ಎಂದು ಸಂಶೋಧಕರಾದ ರಂಜಿತ್‌, ಪ್ರಿಯದರ್ಶನ್‌ ಧರ್ಮರಾಜನ್‌ ತಿಳಿಸಿದ್ದಾರೆ. ಇವರ ಸಂಶೋಧನಾ ವರದಿಯು ಯುರೋಪಿಯನ್ ಜರ್ನಲ್ ಆಫ್ ಟ್ಯಾಕ್ಸಾನಮಿಯಲ್ಲಿ ಪ್ರಕಟವಾಗಿದೆ.

‘ಬಿಆರ್‌ಟಿಯು ದೇಶದಲ್ಲಿರುವ ಜೈವಿಕ ಜೀವವೈವಿಧ್ಯದ ಶ್ರೀಮಂತ ಪ್ರದೇಶಗಳಲ್ಲಿ ಒಂದಾಗಿದೆ. ಹುಲಿ, ಆನೆ ಸೇರಿದಂತೆ ಇತರ ಪ್ರಾಣಿಗಳನ್ನು ಬಿಟ್ಟು ಇಲ್ಲಿ 120 ಜಾತಿಯ ಇರುವೆ, 120 ಜಾತಿಯ ಚಿಟ್ಟೆಗಳು, 105 ಜಾತಿಯ ಜೀರುಂಡೆಗಳು ಪತ್ತೆಯಾಗಿವೆ. ಏಟ್ರೀ ಕೀಟಶಾಸ್ತ್ರಜ್ಞರು ಒಂದು ವರ್ಷದ ಅವಧಿಯಲ್ಲಿ 40 ಹೊಸ ಜಾತಿಯ ಕೀಟಗಳನ್ನು ವಿವರಿಸಿದ್ದು, ಈ ಪೈಕಿ 10 ಕೀಟಗಳು ಬಿಆರ್‌ಟಿಯಿಂದ ಸಂಗ್ರಹಿಸಿದ್ದಾಗಿವೆ ಎಂದು ರಂಜಿತ್‌ ಮತ್ತು ಪ್ರಿಯದರ್ಶನ್‌ ಧರ್ಮರಾಜನ್‌ ತಿಳಿಸಿದ್ದಾರೆ.


Spread the love