
ಬಿಎಮ್ ಎಸ್ ರಿಂದ 4 ಕೋಟಿ ರೂ. ಹಣ ಪಡೆದಿದ್ದೇನೆ ಎಂದು ಅಪಪ್ರಚಾರ ಮಾಡುವುವರು ಮೂಕಾಂಬಿಕೆ ಹುಂಡಿಗೆ ಹಣ ಹಾಕಲಿ – ಗೋಪಾಲ ಪೂಜಾರಿ
ಕುಂದಾಪುರ: ‘ಚುನಾವಣೆ ಖರ್ಚಿಗೆ ನಾವು 4 ಕೋಟಿ ಹಣವನ್ನು ಬೈಂದೂರು ಮಾಜಿ ಶಾಸಕ ಸುಕುಮಾರ ಶೆಟ್ಟಿಯವರಲ್ಲಿ ತೆಗೆದುಕೊಂಡಿರುವುದಾಗಿ ಅಪಪ್ರಚಾರ ಮಾಡುವ ಬಿಜೆಪಿಗರು ಆ ನಾಲ್ಕು ಕೋಟಿ ರೂ. ಹಣವನ್ನು ಕೊಲ್ಲೂರು ಮೂಕಾಂಬಿಕೆಯ ಹುಂಡಿಗೆ ಹಾಕಲಿ ಎಂದು ಬೈಂದೂರು ಮಾಜಿ ಕಾಂಗ್ರೆಸ್ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದ್ದಾರೆ.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದ ಅವರು ನಾನು ನಂಬಿದ್ದು ಕೊಲ್ಲೂರು ಮೂಕಾಂಬಿಕೆ, ಧರ್ಮಸ್ಥಳ ಮಂಜುನಾಥ ದೇವರ ಸಾಕ್ಷಿಯಾಗಿ ಹೇಳುತ್ತೇನೆ ನಾನು ಹಣ ಪಡೆದಿಲ್ಲ.
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೆಳಮಟ್ಟದ ರಾಜಕಾರಣ ಮಾಡಿದ್ದು ಅದು ಬಿಜೆಪಿಗರ ಹುಟ್ಟುಗುಣ ವಾಗಿದೆ. ನಮ್ಮ ಪಕ್ಷದವರು ಅಂತಹ ರಾಜಕಾರಣ ಮಾಡಿಲ್ಲ. ಇನ್ನೊಬ್ಬರ ತೇಜೋವಧೆ ಮಾಡಿ ಮತ ಪಡೆದು ಅಧಿಕಾರಕ್ಕೆ ಹೋಗುವುದಾದರೆ ಸಾಕಷ್ಟು ದಾಖಲೆಗಳಿತ್ತು. ಆದರೆ ನಾವು ಆ ಕೆಲಸವನ್ನು ಮಾಡಿಲ್ಲ ಎಂದರು.
ಮುಖಂಡರು ಮತ್ತು ಐಟಿಸೆಲ್ ಅವರಿಗೂ ಕೂಡ ಯಾರ ತೇಜೋವಧೆ ಮಾಡದಂತೆ ಸೂಚಿಸಿದ್ದೆ. ಈ ಹಿಂದೆ ಸೋತ 5 ವರ್ಷಗಳ ಅವಧಿಯಲ್ಲಿಯೂ ಜನರ ಕೆಲಸ ಮಾಡಿದ್ದೇನೆ. ಈ ಬಾರಿ ಕೂಡ ನಾನು ಧರ್ಮದಿಂದ ಚುನಾವಣೆ ಎದುರಿಸಿದ್ದೇನೆ. ಬಿಜೆಪಿಗರಂತೆ ಸುಳ್ಳು ಕಥೆಯನ್ನು ಸೃಷ್ಟಿಸಿ, ಅಪಪ್ರಚಾರದ ಕೆಲಸ ಮಾಡಿಲ್ಲ ಎಂದು ಅವರು ದೂರಿದರು.
ರಾಜ್ಯದ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ವಹಿಸಿದ್ದು ಅವರೆಲ್ಲರ ನೇತೃತ್ವದಲ್ಲಿ ಕ್ಷೇತ್ರದ ಸಮಸ್ಯೆಗೆ ಪೂರಕವಾಗಿ ಸ್ಪಂದಿಸುತ್ತೇನೆ ಎಂದು ಗೋಪಾಲ ಪೂಜಾರಿ ಈ ಸಂದರ್ಭದಲ್ಲಿ ಭರವಸೆ ನೀಡಿದರು