ಬಿಜೆಪಿಗರೇ ಟ್ರೋಲ್ ರಾಜಕೀಯ ಬಿಟ್ಟು, ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ ಜನರಿಗೆ ಪರಿಹಾರ ನೀಡಿ – ವೆರೋನಿಕಾ  ಕರ್ನೆಲಿಯೊ

Spread the love

ಬಿಜೆಪಿಗರೇ ಟ್ರೋಲ್ ರಾಜಕೀಯ ಬಿಟ್ಟು, ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ ಜನರಿಗೆ ಪರಿಹಾರ ನೀಡಿ – ವೆರೋನಿಕಾ  ಕರ್ನೆಲಿಯೊ

ಉಡುಪಿ: ಕ್ಷೇತ್ರದ ಸಮಸ್ಯೆಯನ್ನು ಜನರಿಗೆ ಪ್ರತಿಭಟನೆಯ ಮೂಲಕ ಗಮನಕ್ಕೆ ತಂದಾಗ ಅಂತಹ ವ್ಯಕ್ತಿಯ ವಿರುದ್ದ ಟ್ರೋಲ್ ಮಾಡುವುದು ಬಿಜೆಪಿಯ ಕೆಟ್ಟ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಬಿಜೆಪಿಗರು ಮೊದಲು ಜಿಲ್ಲೆಯಲ್ಲಿ ಸಮಸ್ಯೆಗಳನ್ನು ಸಂಸದೆಯ ಗಮನಕ್ಕೆ ತಂದು ಅದಕ್ಕೆ ಸೂಕ್ತ ಪರಿಹಾರ ನೀಡುವ ಕೆಲಸ ಮಾಡಬೇಕು ಬಳಿಕ ನಿಮ್ಮ ಟ್ರೋಲ್ ರಾಜಕೀಯ ಮಾಡಿ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.

ಉಡುಪಿ ಬ್ಲಾಕ್ ಕಾಂಗ್ರೆಸ್ ಜಿಲ್ಲೆಯಲ್ಲಿನ ರಸ್ತೆಯಲ್ಲಿ ತುಂಬಿರುವ ಹೊಂಡಗಳ ವಿರುದ್ದ ಪ್ರತಿಭಟನೆ ಮಾಡಿದ್ದು ಈ ವೇಳೆ ಪಕ್ಷದ ನಾಯಕರಾದ ಮಿಥುನ್ ರೈ ಉಲ್ಲೇಖಿಸಿರುವ ವಿಚಾರಗಳು ಸಂಪೂರ್ಣ ನೈಜತೆಯಿಂದ ಕೂಡಿದ್ದವು. ಒರ್ವ ಜನಪ್ರತಿನಿಧಿ ಅಥವಾ ಸಂಸದೆಯನ್ನು ಉಡುಪಿಯ ಜನರು ಆರಿಸಿ ಲೋಕಸಭೆಗೆ ಕಳಿಸಿದ್ದು ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂಬ ಉದ್ದೇಶದಿಂದ. ರಾಷ್ಟ್ರೀಯ ಹೆದ್ದಾರಿಯಲ್ಲಿನ ಗುಂಡಿಗಳಲ್ಲಿ ಬಿದ್ದು ಈಗಾಗಲೇ ಹಲವು ಮಂದಿ ಪ್ರಾಣ ಕಳೆದುಕೊಂಡರೂ ಬಿಜೆಪಿಗರಿಗೆ ಇದು ದೊಡ್ಡ ವಿಷಯವಾಗದಿರುವುದು ಶೋಚನೀಯ ಸಂಗತಿಯಾಗಿದೆ. ವಾಹನ ಸವಾರರು ಪ್ರತಿನಿತ್ಯ ಹೊಂಡಗುಂಡಿ ರಸ್ತೆಗಳಿಂದ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೂ ಕೂಡ ಅದಕ್ಕೆ ಪರಿಹಾರ ಒದಗಿಸುವುದನ್ನು ಬಿಟ್ಟು ಅನಗತ್ಯ ವಾದ ಟ್ರೋಲ್ ಕೆಲಸದಲ್ಲಿ ಅವರುಗಳು ಮಗ್ನರಾಗಿದ್ದಾರೆ.

ಹಿಂದೊಮ್ಮೆ ಯುವತಿಯೋರ್ವರು ರಸ್ತೆಯ ಸಮಸ್ಯೆಯ ಬಗ್ಗೆ ಶಾಸಕರ ಗಮನಕ್ಕೆ ತಂದಾಗ ಉಡುಪಿ ಶಾಸಕರ ಹಿಂಬಾಲಕರು ಸೇರಿಕೊಂಡು ಆಕೆಯ ಚಾರಿತ್ರ್ಯ ಹರಣ ಮಾಡಿರುವ ಬಿಜೆಪಿಗರ ಕೆಟ್ಟ ಮನಸ್ಥಿತಿಗೆ ಜನ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ನೀಡುತ್ತಾರೆ. ರಾಜಕೀಯ ಜೀವನದಲ್ಲಿ ಟೀಕೆಗಳು ಸಹಜವಾಗಿದ್ದು ಅದನ್ನು ಸಹಿಸುವ ಶಕ್ತಿ ಇದ್ದಾಗ ಮಾತ್ರ ರಾಜಕೀಯದಲ್ಲಿ ಉಳಿಯಬೇಕು

ಕಳೆದ ಹಲವಾರು ತಿಂಗಳುಗಳಿಂದ ನಾಡಿನ ಗಣ್ಯರು ಸೇರಿದಂತೆ ಸಾಮಾಜಿಕ ಕಾರ್ಯಕರ್ತರು ಪರ್ಕಳ, ಇಂದ್ರಾಳಿ ಭಾಗಗಳಲ್ಲಿ ರಸ್ತೆಯ ದುರವಸ್ಥೆಯ ವಿರುದ್ದ ಪ್ರತಿಭಟನೆ ನಡೆಸಿದರೂ ಕೂಡ ಇದ್ಯಾವುದು ಶೋಭಾ ಕರಂದ್ಲಾಜೆ ಅಥವಾ ಬಿಜೆಪಿ ನಾಯಕರುಗಳ ಕಿವಿಗೆ ಬಿದ್ದಂತಿಲ್ಲ. ಅದಕ್ಕೆ ಪರಿಹಾರ ಹುಡುಕುವ ಬದಲು ಬರೀ ಚಿಲ್ಲರೆ ರಾಜಕೀಯ ಮಾಡುವುದರಲ್ಲೇ ಇವರುಗಳು ನಿರತರಾಗಿದ್ದಾರೆ. ಇದು ಆಡಳಿತ ಮಾಡುವ ಪಕ್ಷದ ಜವಾಬ್ದಾರಿಯುತ ಲಕ್ಷಣವಲ್ಲ

ರಾಜ್ಯದ ಯಾವುದೇ ಮೂಲೆಯಲ್ಲಿ ಒಂದು ಕೊಲೆಯಾದರೂ ಅದಕ್ಕೂ ಧಾರ್ಮಿಕ ಲೇಪ ಕೊಟ್ಟು ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಕೆಲಸವನ್ನು ಬಿಜೆಪಿಗರು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಇನ್ನಾದರೂ ಇವುಗಳನ್ನು ಬಿಟ್ಟು ನೈಜ ಅಭಿವೃದ್ಧಿಯತ್ತ ಬಿಜೆಪಿಗರು ಗಮನ ಹರಿಸಲಿ ಎಂದು ಅವರು ಹೇಳಿದ್ದಾರೆ.


Spread the love