ಬಿಜೆಪಿಗರ ನೈಜ ಮಹಿಳಾ ಗೌರವ ಲಿಂಬಾವಳಿ ಪ್ರಕರಣದಲ್ಲಿ ಜಗಜ್ಜಾಹೀರಾಗಿದೆ – ವೆರೋನಿಕಾ ಕರ್ನೆಲಿಯೊ

Spread the love

ಬಿಜೆಪಿಗರ ನೈಜ ಮಹಿಳಾ ಗೌರವ ಲಿಂಬಾವಳಿ ಪ್ರಕರಣದಲ್ಲಿ ಜಗಜ್ಜಾಹೀರಾಗಿದೆ – ವೆರೋನಿಕಾ ಕರ್ನೆಲಿಯೊ

ಉಡುಪಿ: ಸದಾ ನಾರಿ ಶಕ್ತಿ ನಮ್ಮ ದೇಶದ ಪ್ರಗತಿ ಎಂದು ಬೊಬ್ಬಿಡುತ್ತಿರುವ ಬಿಜೆಪಿಗರ ನೈಜ ಮಹಿಳಾ ಗೌರವ ಏನು ಎನ್ನುವುದು ಮಳೆ ಹಾನಿ ವೀಕ್ಷಣೆ ಸಂದರ್ಭದಲ್ಲಿ ಮಹಿಳೆಯ ಜೊತೆ ದರ್ಪ ಪ್ರದರ್ಶಿಸಿದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಯ ವರ್ತನೆಯಿಂದ ಮತ್ತೊಮ್ಮೆ ಜಗಜ್ಜಾಹೀರಾಗಿದೆ ಎಂದು ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒರ್ವ ಮಹಿಳೆ ತನ್ನ ಸಮಸ್ಯೆಯನ್ನು ಹಿಡಿದುಕೊಂಡು ತನ್ನ ಕ್ಷೇತ್ರದ ಶಾಸಕರಲ್ಲಿ ಬರುವುದು ತಪ್ಪೇ? ಅವರ ಸಮಸ್ಯೆಯನ್ನು ಆಲಿಸಲು ಕೂಡ ವ್ಯವಧಾನ ಇಲ್ಲದ ಶಾಸಕ ದರ್ಪ ತೋರಿ ಆಕೆಯನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿರುವುದು ನಿಜಕ್ಕೂ ಬಿಜೆಪಿಗರಿಗೆ ನಾಚಿಕೆಯಾಗಬೇಕು. ಮಹಿಳೆಯ ಮೇಲೆ ದಬ್ಬಾಳಿಕೆ ಎಸಗಿದ್ದಲ್ಲದೆ “ನಾನೇನು ರೇಪ್ ಮಾಡಿದ್ನಾ” ಎಂದು ಉದ್ಧಟತನದಲ್ಲಿ ಕೇಳಿದ ಅರವಿಂದ್ ಲಿಂಬಾವಳಿ ಅವರ ಮಾತುಗಳು ಇಡೀ ಬಿಜೆಪಿ ಸಂಸ್ಕೃತಿಗೆ ಹಿಡಿದ ಕನ್ನಡಿ ಎಂದಿದೆ.

ಇಡೀ ದೇಶದಲ್ಲಿ ಮಹಿಳೆಯರ ಮೇಲೆ ಪ್ರತಿನಿತ್ಯ ದೌರ್ಜನ್ಯಗಳು ನಡೆಯುತ್ತಿದ್ದು ಕೇಂದ್ರ ಹಾಗೂ ರಾಜ್ಯದಲ್ಲಿರುವ ಡಬಲ್ ಇಂಜಿನ್ ಬಿಜೆಪಿ ಸರಕಾರದ ಶಾಸಕರು ಮತ್ತು ನಾಯಕರುಗಳೇ ಇದರಲ್ಲಿ ಮೊದಲನೇ ಸ್ಥಾನದಲ್ಲಿರುವುದು ಹಲವು ಬಾರಿ ಸಾಬೀತಾಗಿದೆ. ಬಿಲ್ಕೀಸ್ ಭಾನು ಅತ್ಯಾಚಾರ ಪ್ರಕರಣದಲ್ಲಿ ಕೂಡ ಆರೋಪಿಗಳ ಬಿಡುಗಡೆಗೆ ಪರೋಕ್ಷವಾಗಿ ಅಲ್ಲಿನ ಬಿಜೆಪಿ ಸರಕಾರದ ಕಾಣದ ಕೈಗಳು ಕೆಲಸ ಮಾಡಿರುವುದು ಕೂಡ ಸತ್ಯ.

ಶಾಸಕ ಲಿಂಬಾವಳಿಯ ಈ ಮಾತುಗಳು ಇಡೀ ಸ್ತ್ರೀ ಕುಲಕ್ಕೆ ಮಾಡಿದ ಘೋರ ಅವಮಾನ. ಇಂತಹ ಕೊಳಕು ಮನಸ್ಥಿತಿಯ ಶಾಸಕನ ವಿರುದ್ಧ ಕ್ರಮ ಜರುಗಿಸದೆ ನಾಲಿಗೆ ಉದ್ಧವಾಗಲು ಬಿಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮಹಿಳೆಯರ ಕ್ಷಮೆ ಕೇಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love