
ಬಿಜೆಪಿಗೆ ಅಭಿವೃದ್ಧಿಯೇ ಧ್ಯೇಯ:ಅಣ್ಣಾಮಲೈ
ಮೈಸೂರು: ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ದೇಶಕ್ಕಿಂತ ಪರಿವಾರ ಮೊದಲಾದರೆ ಬಿಜೆಪಿಗೆ ದೇಶ ಮೊದಲು, ಎಲ್ಲರ ಅಭಿವೃದ್ಧಿಯೇ ಧ್ಯೇಯವಾಗಿದೆ ಎಂದು ರಾಜ್ಯ ಬಿಜೆಪಿ ಚುನಾವಣೆ ಸಹ ಉಸ್ತುವಾರಿ ಅಣ್ಣಾಮಲೈ ತಿಳಿಸಿದರು.
ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಸಂಜೆ ನಡೆದ ವಿಜಯಸಂಕಲ್ಪ ಯಾತ್ರೆಯ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಸುಳ್ಳು ಹೇಳಿ ಅಧಿಕಾರಕ್ಕೆ ಬರುತ್ತಿರುವ ಕಾಂಗ್ರೆಸ್ ಅನ್ನು ಮತದಾರರು ತಿರಸ್ಕರಿಸಬೇಕು. ಡಬಲ್ ಇಂಜಿನ್ ಸರ್ಕಾರಕ್ಕೆ ಮತ್ತೊಮ್ಮೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.
2014ಕ್ಕೂ ಮೊದಲು ಎಲ್ಲರ ಅಭಿವೃದ್ಧಿಯ ಬದಲು ಒಂದು ಕುಟುಂಬದ ಕೆಲವೇ ನಾಯಕರ ಅಭಿವೃದ್ಧಿ ಗ್ಯಾರಂಟಿ ಇತ್ತು. ಈಗ 135 ಕೋಟಿ ಜನರ ಅಭಿವೃದ್ಧಿ ತಲುಪಿದೆ. 2014ಕ್ಕೂ ಮೊದಲು ಶೇ. 17ರಷ್ಟಿದ್ದ ಮನೆ ಮನೆಗೆ ಕುಡಿಯುವ ನೀರು ಪೂರೈಕೆಯನ್ನು ಶೇ. 63ಕ್ಕೆ ಹೆಚ್ಚಿಸಿದೆ. ಮುಂದೆ ಅವಕಾಶ ಕಲ್ಪಿಸಿದರೆ ಶೇ. 100 ಮನೆಗಳಿಗೆ ಕುಡಿಯುವ ನೀರು ನೀಡುತ್ತೇವೆ ಎಂದರು.
ಆಯುಸ್ಮಾನ್ ಕಾರ್ಡ್ನಿಂದ ಲಕ್ಷಾಂತರ ಜನರು ಉಚಿತವಾಗಿ ಆರೋಗ್ಯ ಸೇವೆ ಪಡೆಯುತ್ತಿದ್ದಾರೆ. ಉಜ್ವಲ ಯೋಜನೆಯಡಿ 2 ಕೋಟಿ ಎಲ್‌ಇಡಿ ಬಲ್ಬ್ ನೀಡಲಾಗಿದೆ. ರಾಜ್ಯದ 54 ಲಕ್ಷ ರೈತರಿಗೆ ಪಿಎಂ ಕಿಸಾನ್ ಯೋಜನೆಯಿಂದ 10 ಸಾವಿರ ರೂ. ನೀಡಲಾಗುತ್ತಿದೆ. 2014ಕ್ಕೂ ಮೊದಲು ಯಾವ ಯೋಜನೆಯಲ್ಲೂ ಅಂಕಿಅಂಶಗಳು ಇರಲಿಲ್ಲ. ದಶಪಥ ರಸ್ತೆಯಿಂದ ಮೈಸೂರಿನ ಚಿತ್ರಣವೇ ಬದಲಾಗಲಿದೆ. ದಕ್ಷಿಣ ಭಾರತದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮೋದಿ-ಬೊಮ್ಮಾಯಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು ಎಂದು ಕೋರಿದರು.
ಬಿಪಿಎಲ್ ಕಾರ್ಡ್ದಾರ ಗೃಹಿಣಿಗೆ 2 ಸಾವಿರ ಕೊಡುವುದಾಗಿ ಘೋಷಿಸಿದ್ದಾರೆ. ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎAಕೆ ಗೃಹಣಿಗೆ 1 ಸಾವಿರ ಕೊಡುವುದಾಗಿ ಪ್ರಕಟಿಸಿದ್ದರು. ಈವರೆಗೂ 1 ಪೈಸೆ ಯಾಕೇ ಕೊಟ್ಟಿಲ್ಲ. ಪ್ರತಿ ಕುಟುಂಬಕ್ಕೆ ಹಣ ಕೊಡಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮನೆಯಲ್ಲಿ ನೋಟ್ ಪ್ರಿಂಟ್ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.
ಹಿಮಾಚಲ ಪ್ರದೇಶದಲ್ಲಿ ಹಳೆ ಪಿಂಚಣಿ ಜಾರಿ ಮಾಡುವುದಾಗಿ ಘೋಷಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಇದಕ್ಕಾಗಿ ತೈಲಬೆಲೆ ತೆರಿಗೆಯನ್ನು ಶೇ. 3 ರೂ.ಗೆ ಏರಿಕೆ ಮಾಡಿದೆ. ರಾಜ್ಯದಲ್ಲಿಯೂ 10 ರೂ. ತೆರಿಗೆ ಏರಿಸಿ ಒಪಿಎಸ್ ಜಾರಿ ಮಾಡುವುದಾಗಿ ಘೋಷಿಸಬಹುದು. ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆಂದು ಪ್ರಕಟಿಸಿಲ್ಲ ಎಂದರು.
ಸಂಸದ ಪ್ರತಾಪ ಸಿಂಹ ಮಾತನಾಡಿ, ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ 7-8 ಕ್ಷೇತ್ರಗಳಲ್ಲಿ ಗೆಲ್ಲಬೇಕು. ಅದಕ್ಕಾಗಿ ಕಾರ್ಯಕರ್ತರು ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಮನೆ ಮನೆಗೆ ತಲುಪಿಸಬೇಕು ಎಂದು ನುಡಿದರು.
ಬೃಹತ್ ಮೈಸೂರು ಮಹಾನಗರ ಪಾಲಿಕೆ ಪ್ರಯತ್ನ, ವರ್ತುಲ ರಸ್ತೆ ಡಾಂಬರೀಕರಣ, ಹಳೇ ಉಂಡುವಾಡಿ ಯೋಜನೆಗೆ ಅನುದಾನ, ಅಮೃತ ಯೋಜನೆಯಡಿ ಮೈಸೂರಿನ ಕುಡಿಯುವ ನೀರು ಸಮಸ್ಯೆ ನಿವಾರಣೆ ಮಾಡಿದ್ದೇವೆ ಎಂದರು.
9.5 ಸಾವಿರ ಕೋಟಿ ಮೊತ್ತದಲ್ಲಿ ದಶಪಥ ರಸ್ತೆ ನಿರ್ಮಾಣವಾಗಿದೆ. ಮಂಡ್ಯದಲ್ಲಿ ಬಿಜೆಪಿ ಬಾವುಟ ಹಾರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾ.12ರಂದು ಮಂಡ್ಯಕ್ಕೆ ಬರುತ್ತಿದ್ದಾರೆ ಎಂದು ತಿಳಿಸಿದರು.
ಶಾಸಕ ಕೆ.ಎಸ್.ಈಶ್ವರಪ್ಪ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ, ನಿಗಮ ಮಂಡಳಿ ಅಧ್ಯಕ್ಷರಾದ ರಘು ಕೌಟಿಲ್ಯ, ಶಿವಕುಮಾರ್, ಮುಖಂಡರಾದ ರಾಜೇಂದ್ರ, ನಗರಾಧ್ಯಕ್ಷö ಶ್ರೀವತ್ಸ ಮುಂತಾದವರು ಭಾಗವಹಿಸಿದ್ದರು.