
ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಹಲ್ಲೆ ಎಂದು ಈಶ್ವರಪ್ಪರ ಎದುರು ಗೋಳಾಡಿದ್ದ ಆಟೋ ಚಾಲಕ: ಪ್ರಕರಣಕ್ಕೆ ತಿರುವು
ಶಿವಮೊಗ್ಗ: ಬಿಜೆಪಿಗೆ ಮತ ಹಾಕಿದ್ದಕ್ಕೆ ಮುಸ್ಲಿಮ್ ಯುವಕರು ನನ್ನ ಮೇಲೆ ಹಲ್ಲೆ ಮಾಡಿ, ಆಟೋ ಜಖಂಗೊಳಿಸಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಈಶ್ವರಪ್ಪರ ಎದುರು ಗೋಳಾಡಿ, ಸುದ್ದಿಯಾಗಿದ್ದ ಆಟೋ ಚಾಲಕ ಈಗ ಸ್ಪಷ್ಟೀಕರಣ ನೀಡಿದ್ದಾರೆ.
ಹಾನಿಯಾಗಿದ್ದ ಗಾಜು, ಹರಿದ ಟಾಪ್‌ನೊಂದಿಗೆ ಹರೀಶ್ ರಾವ್ ಎಂಬ ಚಾಲಕ ತನ್ನ ಆಟೋವನ್ನು ಸೋಮವಾರ ಬೆಳಗ್ಗೆ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಗೆ ತಂದಿದ್ದ.
ಇದೇ ವೇಳೆ ಎಸ್‌ಪಿ ಕಚೇರಿಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿ ಮುಖಂಡರು ಮತ್ತು ಮಾಧ್ಯಮದವರನ್ನು ನೋಡುತ್ತಿದ್ದಂತೆ ಹರೀಶ್ ರಾವ್ ಸಂಕಟ ಹೇಳಿಕೊಂಡಿದ್ದ. ”ಬಿಜೆಪಿಗೆ ಮತ ನೀಡಿದ್ದಕ್ಕೆ ತನ್ನ ಮೇಲೆ ಮೂವರು ಮುಸ್ಲಿಮ್ ಯುವಕರು ಹಲ್ಲೆ ನಡೆಸಿ, ಆಟೋ ಜಖಂ ಮಾಡಿದ್ದಾರೆ” ಎಂದು ಕಣ್ಣೀರು ಸುರಿಸಿ, ಈಶ್ವರಪ್ಪ ಅವರ ಕಾಲಿಗೆ ಬಿದ್ದು ರಕ್ಷಣೆಗೆ ಮೊರೆ ಇಟ್ಟಿದ್ದ.
ಹರೀಶ್ ರಾವ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಕೆ.ಎಸ್.ಈಶ್ವರಪ್ಪ, ಆಟೋ ರಿಪೇರಿ ಮಾಡಿಸಿಕೊಳ್ಳುವಂತೆ ಜೇಬಿನಿಂದ ಹಣ ತೆಗೆದು ಕೊಟ್ಟಿದ್ದರು. ರಿಪೇರಿ ಮಾಡಿಸಿಕೊಂಡು ಮನೆ ಬಳಿ ಬಾ ಎಂದು ಸೂಚಿಸಿದ್ದರು. ಅಲ್ಲದೆ ಸೂಕ್ತ ತನಿಖೆ ನಡೆಸುವಂತೆ ಪೊಲೀಸರಿಗೆ ತಿಳಿಸಿದ್ದರು.
”ಬಿಜೆಪಿಗೆ ಮತ ನೀಡಿದ್ದಕ್ಕೆ ಮುಸ್ಲಿಮ್ ಯುವಕರಿಂದ ಹಲ್ಲೆ ” ಎಂದು ಮಾಧ್ಯಮಗಳು, ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋಗಳು ಹರಿದಾಡಿದವು. ಅಲ್ಲದೇ ಬಿಜೆಪಿ ಮತ್ತು ಅದರ ಬೆಂಬಲಿಗರ ಸಾಮಾಜಿಕ ಜಾಲತಾಣದಲ್ಲಿ ಘಟನೆ ವಿರುದ್ಧ ಆಕ್ರೋಶ ಹೊರಹಾಕಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಗಳು ಕೇಳಿ ಬಂದವು.
ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ನಿಜ ಸ್ಥಿತಿ ಅರಿಯಲು ಮಹಾನಗರ ಪಾಲಿಕೆಯ ಕಾಂಗ್ರೆಸ್ ಕಾರ್ಪೊರೇಟರ್ ,ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಎಚ್.ಸಿ.ಯೋಗೇಶ್ ಅವರ ನೇತೃತ್ವದ ನಿಯೋಗ ವಿನೋಬನಗರ ಠಾಣೆಗೆ ಭೇಟಿ ನೀಡಿತ್ತು. ಆಗ ಎದುರಾದ ಚಾಲಕ, ನಡೆದ ಘಟನೆ ಬಗ್ಗೆ ವಿವರಿಸಿದ್ದಾನೆ. ”ಬಿಜೆಪಿಗೆ ಮತ ನೀಡಿದ್ದಕ್ಕೆ ದಾಳಿಯಾಯಿತು ಎಂದು ನಾನು ಎಲ್ಲಿಯೂ ಹೇಳಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
”ನಾನು, ಹಾಗೂ ಮೂವರು ಮುಸ್ಲಿಮ್ ಸ್ನೇಹಿತರು ಸ್ನೇಹಿತರು ಒಟ್ಟಿಗೆ ಬಾರ್ ಗೆ ತೆರಳಿದ್ದೆವು. ಅಲ್ಲಿ ಸ್ನೇಹಿತರ ಮಧ್ಯೆ ಜಗಳವಾಗಿ ಆಗ ಆಟೋ ಟಾಪ್, ಗ್ಲಾಸ್ ಒಡೆದು ಹೋಗಿದೆ. ಅದಕ್ಕೆ ದೂರು ಕೊಡಲು ಎಸ್‌ಪಿ ಕಚೇರಿಗೆ ಹೋಗಿದ್ದೆ. ನಾನು ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಹೊಡೆದರು ಎಂದು ಹೇಳಿಲ್ಲ. ನನ್ನ ಬಳಿ ಇದ್ದ ಅಮೀರ್ ಆ ತರಹ ಹೇಳಿದ, ನನ್ನ ತಪ್ಪಿಲ್ಲ. ಈಶ್ವರಪ್ಪ ಅವರು ದುಡ್ಡು ಕೊಟ್ಟರು. ಆದರೆ ಅದು ಎಷ್ಟಿತ್ತು ಎಂದು ಗೊತ್ತಿಲ್ಲ. ಅದನ್ನು ಯಾರೋ ಜೇಬಿನಿಂದ ಎತ್ತಿಕೊಂಡು ಹೋಗಿದ್ದಾರೆ. ಕುಡಿದ ಮತ್ತಿನಲ್ಲಿ ಆದ ಜಗಳಕ್ಕೆ ಆಟೋ ಹಾನಿಯಾಗಿದ್ದು, ಎಲ್ಲರೂ ಬಾಲ್ಯ ಸ್ನೇಹಿತರೇ, ಯಾವುದೇ ರಾಜಕೀಯ ಘಟನೆಗೆ ಕಾರಣವಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.