
ಬಿಜೆಪಿಯ ಭಾವನಾತ್ಮಕ ವಿಚಾರಗಳಿಗೆ ಮಣೆ ಹಾಕಬೇಡಿ – ಮಂಜುನಾಥ ಭಂಡಾರಿ
ಉಡುಪಿ: ಬಿಜೆಪಿಗೆ ಅಭಿವೃದ್ಧಿಯ ವಿಷಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಸಾಧ್ಯವಿಲ್ಲ ಆದ್ದರಿಂದ ಅವರು ಜನರ ಮನಸ್ಸಿನಲ್ಲಿ ಭಾವನಾತ್ಮಕತೆಯ, ಕೋಮು ಪ್ರಚೋದನೆಯ ಜಾತಿ ಜಾತಿ ಮಧ್ಯೆ ವೈಷಮ್ಯದ ವಿಷಬೀಜ ಬಿತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಮುಗ್ದ ಜನರ ಬಾಳನ್ನು ಹಾಳುಗಡೆಹುತ್ತಿದ್ದಾರೆ. ಇದನ್ನು ತಡೆಯಲು ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಾಗಿದ್ದು ಒಂದು ವೇಳೆ ಅಧಿಕಾರಕ್ಕೆ ಬಂದರೆ ಪ್ರತಿ ಗ್ರಾಮ ಪಂಚಾಯತ್ ನ ವಾರ್ಡ್ ಮಟ್ಟದಲ್ಲಿ ಸ್ವಾಮೀ ವಿವೇಕಾನಂದ ಕೋಮು ಮತ್ತು ಸಾಮಾಜಿಕ ಸಾಮರಸ್ಯದ ಸಮಿತಿಯನ್ನು ರಚಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.
ಅವರು ಶನಿವಾರ ಸಂಜೆ ಉಡುಪಿ ಮತ್ತು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂತೆಕಟ್ಟೆಯಲ್ಲಿ ನಡೆದ ಕಾಂಗ್ರೆಸ್ ಕರಾವಳಿ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾಂಗ್ರೆಸ್ ಸರಕಾರವು ಮುಂದಿನ ಐದು ವರ್ಷಗಳ ಚುನಾವಣಾ ಪ್ರಣಾಳಿಕೆಗಳನ್ನು ಜನರ ಬಳಿಗೆ ತಲುಪಿಸುವ ಕೆಲಸವು ಕರಾವಳಿ ಪ್ರಜಾ ಧ್ವನಿಯ ಮೂಲಕ ವಾಗಲಿದೆ. ಮೋದಿ ಪ್ರಧಾನಿ ಯಾದ ಬಳಿಕ ಗ್ಯಾಸ್ ಬೆಲೆ ಏರಿಕೆ ಮಾಡಲಾಗಿದ್ದು ಅ ಮೂಲಕ ಬಡಜನರ ರಕ್ತ ಹೀರುತಿದ್ದಾರೆ ಎಂದರು. ನಿತ್ಯ ದಿನಬಳಕೆಯ ವಸ್ತುಗಳ ಅಹಾರದ ಮೇಲೆ ತೆರಿಗೆ ವಿಧಿಸುವ ಮೂಲಕ ಜನರಿಗೆ ಸಂಕಷ್ಟ ವನ್ನು ತಂದೊಡ್ಡುವ ಕೆಲಸ ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದರೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ನಿಗಮವನ್ನಾಗಿ ಮೆಲ್ದರ್ಜೆಗೆ ಏರಿಸುವ ಕರಾವಳಿಗೆ ಅಭಿವೃದ್ಧಿ, ಟೂರಿಸಂಗೆ ಅನುಕೂಲ ವಾಗಲಿದೆ. ಸ್ಥಳೀಯ ಮಟ್ಟದ ಕೃಷಿಕರಿಗೆ, ಕರಾವಳಿಯ ಜನರಿಗೆ ಉದ್ಯೋಗ, ಮೀನುಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಕ್ಕು ಉತ್ತೇಜನ ನೀಡುವುದಾಗಿದೆ ಎಂದರು.
ಬಿಜೆಪಿ ನಾಯಕರೇ ಅಭಿವೃದ್ಧಿ ವಿಚಾರಗಳನ್ನು ಪ್ರಶ್ನೆ ಮಾಡುವ ಬದಲು ಲವ್ ಜಿಹಾದ್, ಹಿಜಾಬ್, ಹಲಾಲ್, ಆಜಾನ್ ಬಗ್ಗೆ ಮಾತನಾಡುವಂತೆ ಭಾವಾತ್ಮಕವಾಗಿ ಕೆರಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಅಭಿವೃದ್ಧಿ ವಿಚಾರಗಳನ್ನು ಮರೆತು ಭಾವನಾತ್ಮಕ ವಿಚಾರಗಳಿಗೆ, ಕೋಮುವಾದಕ್ಕೆ ಮನ್ನಣೆ ನೀಡಿದ ಪರಿಣಾಮ ಕಾಂಗ್ರೆಸ್ ಸೋಲು ಅನುಭವಿಸಬೇಕಾಯಿತು. ಕರಾವಳಿಯಲ್ಲಿ 26 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರು, ಈ ಭಾಗದಿಂದ ನಾಲ್ವರು ಸಚಿವರಾಗಿದ್ದರು. ಆದರೆ, ಬಿಜೆಪಿ ಜನರನ್ನು ಭಾವನಾತ್ಮಕವಾಗಿ ಕೋಮು ಪ್ರಚೋದನೆ ಮಾಡಿದ ಪರಿಣಾಮ 32 ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲು ಅನುಭವಿಸಬೇಕಾಯಿತು. ಈ ಬಾರಿಯ ಚುನಾವಣೆಯಲ್ಲಿ ಕರಾವಳಿಯ ಮತದಾರರು ಬಿಜೆಪಿಯ ಷಡ್ಯಂತ್ರಕ್ಕೆ ಬಲಿಯಾಗಬಾರದು. ಅಭಿವೃದ್ಧಿಯ ಆಧಾರದಲ್ಲಿ ಮತ ಹಾಕಬೇಕು ಎಂದು ಮನವಿ ಮಾಡಿದರು.
ಕೆಪಿಸಿಸಿ ಉಪಾಧ್ಯಕ್ಷ ಬಿಎಲ್ ಶಂಕರ್ ಮಾತನಾಡಿ ಸುಳ್ಳು ಭರವಸೆಗಳ ಮೂಲಕ ಅಧಿಕಾರ ಪಡೆದುಕೊಂಡ ಬಿಜೆಪಿ ಇಂದು ಅಗತ್ಯ ವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳಿದೆ ಜನರು ಬೆಲೆ ಏರಿಕೆಯಿಂದ ತತ್ತರಿಸಿದ್ದು ಸರಕಾರ ಮಾತ್ರ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಅಭಿವೃದ್ಧಿಯ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಬೇಕು ಎಂದರು
ವೇದಿಕೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಕಾರ್ಯದರ್ಶಿ ಎಂ ಎ ಗಫೂರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನಕರ ಹೇರೂರು, ನಾಯಕರಾದ ಸರಳಾ ಕಾಂಚನ್, ರಾಜು ಪೂಜಾರಿ, ಪ್ರಸಾದ್ ರಾಜ್ ಕಾಂಚನ್, ವೆರೋನಿಕಾ ಕರ್ನೆಲಿಯೋ, ಕೃಷ್ಣಮೂರ್ತಿ ಆಚಾರ್ಯ, ದಿವಾಕರ ಕುಂದರ್, ವಿಶ್ವಾಸ್ ಅಮೀನ್, ಹರೀಶ್ ಕಿಣಿ ಹಾಗೂ ಇತರರು ಉಪಸ್ಥಿತರಿದ್ದರು.