
ಬಿಜೆಪಿಯ ಭೀಷ್ಮ, ಪುತ್ತೂರಿನ ಮಾಜಿ ಶಾಸಕ ಉರಿಮಜಲು ಕೆ. ರಾಮ ಭಟ್ ನಿಧನ
ಮಂಗಳೂರು: `ಬಿಜೆಪಿಯ ಭೀಷ್ಮ’ ಎಂದೇ ಕರೆಸಿಕೊಳ್ಳುತ್ತಿರುವ ಪುತ್ತೂರಿನ ಮಾಜಿ ಶಾಸಕ ಉರಿಮಜಲು ಕೆ. ರಾಮ ಭಟ್ ಸೋಮವಾರ ನಿಧನ ಹೊಂದಿದರು ಅವರಿಗೆ 92 ವರ್ಷ ವಯಸ್ಸಾಗಿತ್ತು.
ಜನಸಂಘದ ಪ್ರಭಾವಿ ನಾಯಕರಾಗಿ, ವಕೀಲರಾಗಿ, ಪುತ್ತೂರು ಪುರಸಭೆಯ ಅಧ್ಯಕ್ಷರಾಗಿ, ಕ್ಯಾಂಪ್ಕೋದ ಅಧ್ಯಕ್ಷರಾಗಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ, ಪುತ್ತೂರಿನ ಶಾಸಕರಾಗಿ, ಭಾರತೀಯ ಜನತಾ ಪಾರ್ಟಿಯ ಮುಂಚೂಣಿಯ ಮುಖಂಡರಾಗಿ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ರಾಮ ಭಟ್ ಅವರು ತನ್ನ ಇಳಿ ವಯಸ್ಸಿನಲ್ಲಿಯೂ ಯುವಕರಂತೆ ಚಟುವಟಿಕೆಯಿಂದ ಕೂಡಿದ್ದರು.ಬಿಜೆಪಿ ವರಿಷ್ಠರಾಗಿದ್ದ ಲಾಲ್ಕೃಷ್ಣ ಅಡ್ವಾಣಿ ಸಹಿತ ಹಲವರ ಒಡನಾಡಿಯಾಗಿದ್ದ ರಾಮ ಭಟ್ಟರು ತುರ್ತು ಪರಿಸ್ಥಿತಿ ವಿರೋಧಿಸಿ ಹೋರಾಟ ನಡೆಸಿ ಜೈಲು ಸೇರಿದ್ದರು. 90ರ ಹರೆಯದಲ್ಲಿಯೂ ಅಗಾಧ ನೆನಪಿನ ಶಕ್ತಿ ಹೊಂದಿದ್ದ ರಾಮ ಭಟ್, ತಮ್ಮ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಜೀವನದ ಕುರಿತು ಮೆಲುಕು ಹಾಕುತ್ತಿದ್ದರು.
2008ರ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿ ಶಾಸಕಿಯಾಗಿದ್ದ ಶಕುಂತಳಾ ಟಿ. ಶೆಟ್ಟಿ ಅವರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ನಿರಾಕರಿಸಿದಾಗ ಶಕುಂತಳಾ ಶೆಟ್ಟಿಯವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ರಾಮ ಭಟ್ ಪ್ರೇರಣೆಯಾಗಿದ್ದರು. ನಂತರ ಸ್ವಾಭಿಮಾನಿ ವೇದಿಕೆ ಹುಟ್ಟು ಹಾಕಿದ್ದ ಇವರು ಸ್ವಾಭಿಮಾನಿ ಸೌಹಾರ್ದ ಸಹಕಾರಿ ಸಂಘದ ಹುಟ್ಟಿಗೂ ಕಾರಣರಾಗಿದ್ದರು.
ರಾಮ ಭಟ್ರು 2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಬಂಡಾಯ ಘೋಷಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆರ್ಎಸ್ಎಸ್ ಸಹಿತ ಸಂಘ ಪರಿವಾರ, ಬಿಜೆಪಿಯ ಉನ್ನತ ನಾಯಕರ ರಾಜಿ ಸಂಧಾನಕ್ಕೂ ಬಗ್ಗದ ರಾಮ ಭಟ್ರವರು ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದರು.