
ಬಿಜೆಪಿಯ ಯಾತ್ರೆಗೆ 40 ಪರ್ಸೆಂಟ್ ಸಂಕಲ್ಪ ಯಾತ್ರೆ ಹೆಸರಿಟ್ಟರೆ ಸಾರ್ಥಕವಾಗುತ್ತದೆ : ಸಿದ್ದರಾಮಯ್ಯ
ಬೆಂಗಳೂರು: ಬಿಜೆಪಿ ಮಾಡುತ್ತಿರುವುದು ಭ್ರಷ್ಟಾಚಾರದ ಸಂಕಲ್ಪದ ಯಾತ್ರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಆ ಪಕ್ಷದ ಮಾತು ನಂಬಬಾರದು ಎಂದು ನಾಡಿನ ಜನತೆಗೆ ಬಹಿರಂಗ ಮನವಿ ಮಾಡಿರುವ ಅವರು, ಗುಜರಾತಿನ ಅಂಬಾನಿ, ಅದಾನಿಗಳಿಗೆ ರಾಜ್ಯವನ್ನು ಅಡವಿಡಲು ನಡೆಸುತ್ತಿರುವ ಸಂಚಿನ ಯಾತ್ರೆ ಎಂದೂ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಜೆ.ಪಿ ನಡ್ಡಾ ಹಾಗೂ ರಾಜ್ಯದ ಬಿಜೆಪಿ ನಾಯಕರು ಸೇರಿಕೊಂಡು ಮಾಡುತ್ತಿರುವ ಯಾತ್ರೆಗೆ 40 ಪರ್ಸೆಂಟ್ ಸಂಕಲ್ಪ ಯಾತ್ರೆ ಎಂದು ಹೆಸರಿಟ್ಟರೆ ಸಾರ್ಥಕವಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.
ಪ್ರಧಾನಿಯಾದಿಯಾಗಿ ಬಹುತೇಕ ಬಿಜೆಪಿಗರು ಕಿಸಾನ್ ಸಮ್ಮಾನ್ ಯೋಜನೆ ಬಗ್ಗೆ ಹೋದ ಕಡೆಯಲ್ಲೆಲ್ಲ ಭಾಷಣ ಮಾಡುತ್ತಾರೆ. ರಾಜ್ಯದಲ್ಲಿ ನಾಲ್ಕು ಸಾವಿರ ಕೋಟಿ ರೂ. ಕೊಡುತ್ತಿರುವುದಾಗಿ ಸುಳ್ಳು ಹೇಳಲಾಗುತ್ತಿದೆ. ವಾಸ್ತವವಾಗಿ ಕೊಡುತ್ತಿರುವುದು ಎರಡು ಸಾವಿರ ಕೋಟಿ ರೂ. ಮಾತ್ರ ಎಂದು ದೂರಿದ್ದಾರೆ.
ಬಿಜೆಪಿಗೆ ಕೆಲವು ಪ್ರಶ್ನೆ ಕೇಳಿ ಉತ್ತರಿಸಲು ಆಗ್ರಹಿಸಿರುವ ಅವರು, ಬಿಜೆಪಿ ಎಂದರೆ ಕುರಿ ಕಾವಲಿಗೆ ನೇಮಿಸಿದ ತೋಳ ಎನ್ನುವ ಸಿಟ್ಟು ಜನರಲ್ಲಿ ಹೆಪ್ಪುಗಟ್ಟಿರುವುದನ್ನು ನಾನು ಹೋದ ಕಡೆಗಳಲ್ಲೆಲ್ಲಾ ಗಮನಿಸಿದ್ದೀನಿ. ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಅದು ಬಿಜೆಪಿಯನ್ನು ಬಿರುಗಾಳಿಯಂತೆ ಗುಡಿಸಿ ಹಾಕಲಿದೆ ಎಂದು ಹೇಳಿದ್ದಾರೆ.
2014 ರಲ್ಲಿ ಅಡುಗೆ ಅನಿಲಕ್ಕಾಗಿ ಜನರು ವರ್ಷಕ್ಕೆ 4800 ರೂ. ಖರ್ಚು ಮಾಡುತ್ತಿದ್ದರು. ಇದೀಗ 13500 ಯಿಂದ 14000 ರೂ. ಖರ್ಚು ಮಾಡುವ ಗ್ರಹಚಾರ ಬಂದೊದಗಿದೆ.
2014 ಕ್ಕೂ ಮೊದಲು ಪ್ರತಿ ಲೀಟರ್ ಡೀಸೆಲ್ ಬೆಲೆ 47 ರೂ.ಗಿಂತ ಕಡಿಮೆ ಇತ್ತು. ಆಗ 8,460 ರೂ. ಡೀಸೆಲ್‌ಗಾಗಿ ಸಣ್ಣ ರೈತನೊಬ್ಬ ಖರ್ಚು ಮಾಡುತ್ತಿದ್ದ. ಈಗ ಅಷ್ಟೇ ಭೂಮಿಗೆ 17,100 ರೂ. ಖರ್ಚು ಮಾಡಬೇಕಾಗಿದೆ.
ಪೇಟೆಗೆ ಹೋಗಿ ಕೂಲಿ ಕೆಲಸ ಮಾಡುವ ಕಾರ್ಮಿಕನೊಬ್ಬ 2014 ರಲ್ಲಿ ಲೀಟರಿಗೆ 70 ರೂ.ನಂತೆ 21,000 ರೂ ಖರ್ಚು ಮಾಡುತ್ತಿದ್ದರೆ ಈಗ 31000 ರೂಪಾಯಿ ಖರ್ಚು ಮಾಡುತ್ತಿದ್ದಾನೆ.
ತಿಂಗಳಿಗೆ ಒಂದು ಲೀಟರ್ ಅಡುಗೆ ಎಣ್ಣೆ, ಒಂದು ಕೆಜಿ ತೊಗರಿಬೇಳೆಗೆ 2014ರಲ್ಲಿ 150 ರೂ ಲೆಕ್ಕದಲ್ಲಿ ವರ್ಷಕ್ಕೆ 1800 ರೂ. ಖರ್ಚಾಗುತ್ತಿತ್ತು. ಈಗಿದು 3,750 ರೂ. ಆಗಿದೆ.
ಹಸು ಎಮ್ಮೆ ಸಾಕುವ ರೈತರು 2017 ರಲ್ಲಿ ಎರಡು ಮೂಟೆ ಬೂಸಾ ಮತ್ತು ಎರಡು ಮೂಟೆ ಹಿಂಡಿ ಖರೀದಿಸಲು ತಿಂಗಳಿಗೆ 1,600 ರೂ.ನಂತೆ ವರ್ಷಕ್ಕೆ 19,200 ರೂ. ಖರ್ಚು ಮಾಡುತ್ತಿದ್ದರು. ಈಗ 68,000 ರೂ. ಆಗಿದೆ. ಜನಸಾಮಾನ್ಯರು ಹೇಗೆ ಜೀವನ ನಡೆಸಬೇಕು ಉತ್ತರಿಸಿ ಎಂದು ಆಗ್ರಹಿಸಿದ್ದಾರೆ.