ಬಿಜೆಪಿ ಕೋಮು ಭಾವನೆ ಕೆರಳಿಸುವ ಕೆಲಸ

Spread the love

ಬಿಜೆಪಿ ಕೋಮು ಭಾವನೆ ಕೆರಳಿಸುವ ಕೆಲಸ

ಮೈಸೂರು: ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ ಶ್ರಮಿಸಿದೆ. ಆದರೆ ಬಿಜೆಪಿಯವರು ಕೇವಲ ಸುಳ್ಳನ್ನೇ ಅಸ್ತ್ರವಾಗಿಸಿಕೊಂಡು ಅನಗತ್ಯವಾಗಿ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಾಯಕರ ಕುರಿತು ಟೀಕಾ ಪ್ರಹಾರದಲ್ಲಿ ತೊಡಗಿದೆ. ಸುಳ್ಳು ಸುಳ್ಳು ಅಪಪ್ರಚಾರ ಮಾಡುತ್ತಾ, ಜಾತಿ, ಧರ್ಮಗಳ ನಡುವೆ ಕೋಮು ಭಾವನೆ ಕೆರಳಿಸುವ ಕೆಲಸ ಮಾಡುತ್ತಿದೆ ಎಂದು ಎಂಎಲ್‌ಸಿ ಡಾ.ಡಿ. ತಿಮ್ಮಯ್ಯ ಆರೋಪಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಕೊಡುಗೆ ಏನು ಎಂದು ಮೊದಲು ಪ್ರಶ್ನಿಸಿಕೊಳ್ಳಲಿ. ಸ್ವಾತಂತ್ರ್ಯ ತಂದುಕೊಟ್ಟವರನ್ನು ಪ್ರಶ್ನಿಸುವ ಬಿಜೆಪಿಯವರು ಸ್ವಾತಂತ್ರ್ಯಕ್ಕೆ ಯಾವುದೇ ಕೊಡುಗೆ ನೀಡಿಲ್ಲವೆ. ಕಾಂಗ್ರೆಸ್‌ನ ಕೊಡುಗೆ ಬಗ್ಗೆ ಪ್ರಶ್ನಿಸುವ ನೈತಿಕತೆಯೂ ಇಲ್ಲ ಎಂದು ಕಿಡಿ ಕಾರಿದರು.

ದೇಶದಲ್ಲಿ ಶಾಪವಾಗಿದ್ದ ಅಸ್ಪೃಶ್ಯತೆ ನಿವಾರಣೆ ಮಾಡಲು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು, ಸಿದ್ದರಾಮಯ್ಯ ಅವರು ಎಲ್ಲಾ ವರ್ಗದ ಜನರಿಗಾಗಿ ಹಲವಾರು ಜನಪರ ಯೋಜನೆ, ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬಡ ವರ್ಗದವರಿಗಾಗಿ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಆದರೆ, ಬಿಜೆಪಿಯವರು ಬಡವರಿಗಾಗಿ ಮನೆಗಳನ್ನು ಕಟ್ಟಿಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರಿಗೆ ಬಡಜನರ ಕಾಳಜಿ ಇಲ್ಲವೆಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದರು.

ಇದೇ ವೇಳೆ ಬಿಜೆಪಿ ಸರ್ಕಾರದ ಸಾಧನೆ ಮತ್ತು ಕಾಂಗ್ರೆಸ್ ಸರ್ಕಾರದ ಸಾಧನೆಗಳ ಬಗ್ಗೆ ಬನ್ನಿ, ಕುಳಿತು ಚರ್ಚಿಸೋಣ. ಅದು ಬಿಟ್ಟು ಪ್ರತಿಪಕ್ಷದ ನಾಯಕರ ಕಾರಿನ ಮೇಲೆ ಮೊಟ್ಟೆ ಹೊಡೆಯುವುದು, ಅನಗತ್ಯವಾಗಿ ಮಾಂಸದ ವಿಚಾರ, ಜಾತಿ, ಧರ್ಮದ ವಿಚಾರ ಬಳಸಿ, ಜಾತಿ ಸಂಘರ್ಷ ಹುಟ್ಟು ಹಾಕುವುದು ಸರಿಯಲ್ಲ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮಾಧ್ಯಮ ವಕ್ತಾರ ಯಡತಲೆ ಲಿಂಗರಾಜು ಹಾಜರಿದ್ದರು.


Spread the love