Home Mangalorean News Kannada News ಬಿಜೆಪಿ ನಾಯಕರಿಂದ ಅರಾಜಕತೆ ಸೃಷ್ಟಿಗೆ ಹುನ್ನಾರ: ಮಂಜುನಾಥ್ ಭಂಡಾರಿ

ಬಿಜೆಪಿ ನಾಯಕರಿಂದ ಅರಾಜಕತೆ ಸೃಷ್ಟಿಗೆ ಹುನ್ನಾರ: ಮಂಜುನಾಥ್ ಭಂಡಾರಿ

Spread the love

ಬಿಜೆಪಿ ನಾಯಕರಿಂದ ಅರಾಜಕತೆ ಸೃಷ್ಟಿಗೆ ಹುನ್ನಾರ: ಮಂಜುನಾಥ್ ಭಂಡಾರಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರಾಜಕತೆ ಸೃಷ್ಟಿಸಲು ಬಿಜೆಪಿ ರಾಜ್ಯ ನಾಯಕರು ಹುನ್ನಾರ ನಡೆಸುತ್ತಿದ್ದು, ಇದಕ್ಕೆ ಅಧಿಕಾರಿಗಳ ಸಭೆಯಲ್ಲಿ ಬಿಜೆಪಿಯವರು ನಡೆದುಕೊಂಡ ರೀತಿಯೇ ಸಾಕ್ಷಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಡಾರಿ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧಪಕ್ಷದ ನಾಯಕ ಅಶೋಕ್ ನೇತೃತ್ವದ ನಿಯೋಗ ದ.ಕ. ಜಿಲ್ಲೆಗೆ ಆಗಮಿಸಿ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿ ದುಂಡಾವರ್ತನೆ ತೋರಿರುವುದು ಮಾಧ್ಯಮಗಳ ವರದಿಯಿಂದ ತಿಳಿದು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸುವುದು ಬಿಜೆಪಿಯ ರಾಜ್ಯ ನಾಯಕರಿಗೆ ಬೇಕಾಗಿಲ್ಲ. ಕರಾವಳಿ ಮೂಲಕ ತಮ್ಮ ಓಟ್ ಬ್ಯಾಂಕ್ ಭದ್ರಪಡಿಸಲು ಹೊರಟ ಬಿಜೆಪಿ ರಾಜ್ಯ ನಾಯಕರು ಕರಾವಳಿಯನ್ನು ಬಲಿಪಶು ಮಾಡುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಅಶಾಂತಿ ಸೃಷ್ಟಿಸಿ ರಾಜ್ಯದಲ್ಲಿ ಅಧಿಕಾರ ಪಡೆಯಲು ಬಿಜೆಪಿಗರು ಹುನ್ನಾರ ಮಾಡುತ್ತಿದ್ದಾರೆ ಎಂದು ಭಂಡಾರಿ ಆರೋಪಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತು ಜಿಲ್ಲಾ ಎಸ್ಪಿಯಾಗಿರುವ ಡಾ. ಅರುಣ್ ಜಿಲ್ಲೆಯ ಕಾನೂನು ಸುವ್ಯವಸ್ಥೆ ನಿಟ್ಟಿನಲ್ಲಿ ತನ್ನದೇ ಶೈಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಬಿಜೆಪಿ ನಾಯಕರಿಗೆ ಈ ಜಿಲ್ಲೆಯ ಶಾಂತಿ ಬೇಕಾಗಿಲ್ಲ. ಜಿಲ್ಲೆಯ ಬಗ್ಗೆ ನಿಜವಾಗಿಯೂ ಕಾಳಜಿಯಿದ್ದರೆ ಬಿಜೆಪಿ ನಾಯಕರು ಅಧಿಕಾರಿಗಳ ಕಾರ್ಯಶೈಲಿಗೆ ಸಾಥ್ ನೀಡಬೇಕಿತ್ತು. ಅದನ್ನು ಬಿಟ್ಟು ಅಧಿಕಾರಿಗಳಿಗೆ ಪರೋಕ್ಷವಾಗಿ ಧಮ್ಕಿ ಹಾಕುತ್ತಿದ್ದಾರೆ ಎಂದು ಮಂಜುನಾಥ ಭಂಡಾರಿ ಕಟುವಾಗಿ ಟೀಕಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ತನ್ನದೇ ಶೈಲಿಯಲ್ಲಿ ಕೆಲಸ ಮಾಡಿದ್ದರೆ, ಸಂಘಟನೆ ಕಾರ್ಯಕರ್ತರಿಂದ ಜಿಲ್ಲೆಯ ಶಾಂತಿ ಕದಡಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಯಾರೇ ಆದರೂ ಕಾನೂನಿನಡಿ ಶಿಕ್ಷೆಗೆ ಅರ್ಹರು. ಅದರಲ್ಲಿ ದೇಶಭಕ್ತರು-ದೇಶವಿದ್ರೋಹಿಗಳೆಂದು ತೂಗಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಭಂಡಾರಿ ಕಿಡಿಕಾರಿದ್ದಾರೆ.

ಬಿಜೆಪಿ ಈ ಹಿಂದೆ 5 ವರ್ಷ ರಾಜ್ಯದಲ್ಲಿ ಆಡಳಿತ ನಡೆಸಿದ್ದು, ಯಾವ ರೀತಿ ಆಡಳಿತ ನಡೆಸಿದ್ದಾರೆ ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಈಗ ಬಿಜೆಪಿಯವರಿಗೆ ವಿರೋಧ ಪಕ್ಷದ ಸ್ಥಾನದಲ್ಲಿರುವಂತೆ ಮತದಾರರು ತೀರ್ಪು ನೀಡಿದ್ದು, ಅದಕ್ಕೆ ತಕ್ಕಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ. ಬಿಜೆಪಿ ನಾಯಕರ ದುಂಡಾವರ್ತನೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ತೆರಬೇಕಾದೀತು. ದಕ್ಷಿಣ ಕನ್ನಡ ಜಿಲ್ಲೆಯ ಜನ ಬುದ್ಧಿವಂತರು, ವಿನಯಶೀಲರು. ಹಿಂದುತ್ವದ ಟ್ರಂಪ್ ಕಾರ್ಡ್ನಲ್ಲಿ ಇನ್ನು ನಿಮ್ಮ ಯಾವ ಆಟವೂ ನಡೆಯಲ್ಲ ಎಂದು ಭಂಡಾರಿ ಹೇಳಿದರು…


Spread the love

Exit mobile version