ಬಿಜೆಪಿ ನಾಯಕರ ಸ್ವಾರ್ಥಕ್ಕಾಗಿ ಕರ್ನಾಟಕವನ್ನು ಬಲಿ ಕೊಡಬೇಡಿ: ಸೋನಿಯಾ ಗಾಂಧಿ

Spread the love

ಬಿಜೆಪಿ ನಾಯಕರ ಸ್ವಾರ್ಥಕ್ಕಾಗಿ ಕರ್ನಾಟಕವನ್ನು ಬಲಿ ಕೊಡಬೇಡಿ: ಸೋನಿಯಾ ಗಾಂಧಿ

ಹುಬ್ಬಳ್ಳಿ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಕಾಂಗ್ರೆಸ್​ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಶನಿವಾರ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಚುನಾವಣೆ ಘೋಷಣೆಯಾದ ಬಳಿಕ ಮೊಟ್ಟಮೊದಲ ಬಾರಿಗೆ ಹುಬ್ಬಳ್ಳಿಗೆ ಸೋನಿಯಾ ಗಾಂಧಿ ಬಂದಿದ್ದಾರೆ. ಬಿಜೆಪಿ ಭದ್ರಕೋಟೆ ಎನಿಸಿಕೊಂಡಿರುವ ಹುಬ್ಬಳ್ಳಿಗೆ ಸೋನಿಯಾ ಗಾಂಧಿ ಎಂಟ್ರಿ ನೀಡಿದ್ದು, ಬಿಜೆಪಿಯಿಂದ ಕಾಂಗ್ರೆಸ್​ಗೆ ಬಂದಿದ್ದ ಜಗದೀಶ್ ಶೆಟ್ಟರ್ ಗೆಲ್ಲಿಸಲು ಪಣತೊಟ್ಟಂತಿದೆ. ಹುಬ್ಬಳ್ಳಿಯ ಸೆಟ್ಲಮೆಂಟ್‌ನ ಹಾಕಿ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಸೋನಿಯಾ ಗಾಂಧಿ ಭಾಗಿ ಆಗಿದ್ದರು.

ಬಿಜೆಪಿಯವರು ದರೋಡೆಯನ್ನೇ ದಂಧೆಯಾಗಿಸಿಕೊಂಡಿದ್ದಾರೆ
ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಬಿಜೆಪಿಯವರು ದರೋಡೆಯನ್ನೇ ದಂಧೆಯಾಗಿ ಮಾಡಿಕೊಂಡಿದ್ದಾರೆ. ಬಿಜೆಪಿ ನಾಯಕರ ಸ್ವಾರ್ಥಕ್ಕಾಗಿ ಕರ್ನಾಟಕವನ್ನು ಬಲಿ ಕೊಡಬೇಡಿ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮಾಡಿದರು. 40 ಪರ್ಸೆಂಟ್ ಸರ್ಕಾರ ಕರ್ನಾಟಕದ ಜನರನ್ನು ಲೂಟಿ ಮಾಡುತ್ತಿದೆ. ಬಿಜೆಪಿ ಸೋತರೆ ಜಗಳವಾಗುತ್ತೆ ಅಂತಾರೆ, ಧಮ್ಕಿ ಹಾಕುತ್ತಾರೆ. ಕರ್ನಾಟಕಕ್ಕೆ ಪ್ರಧಾನಿ ಮೋದಿ ಆಶೀರ್ವಾದ ಸಿಗಲ್ಲ ಅಂತಾರೆ ಎಂದರು.

ಎಲೆಕ್ಷನ್‌ನಲ್ಲಿ ತಕ್ಕ ಪಾಠ ಕಲಿಸುತ್ತಾರೆ
ಕರ್ನಾಟಕದ ಜನರನ್ನು ಇಷ್ಟೊಂದು ಕೇವಲವಾಗಿ ಭಾವಿಸಬೇಡಿ. ಕರ್ನಾಟಕದ ಜನರು ಯಾರದೋ ಆಶೀರ್ವಾದವನ್ನು ಬಯಸಲ್ಲ. ಕರ್ನಾಟಕದ ಜನರಿಗೆ ತಮ್ಮ ಶಕ್ತಿ, ಪರಿಶ್ರಮದ ಮೇಲೆ ವಿಶ್ವಾಸವಿದೆ. ರಾಜ್ಯದ ಜನ ಯಾರಿಗೂ ಹೆದರಲ್ಲ, ಎಲೆಕ್ಷನ್‌ನಲ್ಲಿ ತಕ್ಕ ಪಾಠ ಕಲಿಸುತ್ತಾರೆ. ರಾಜ್ಯದಲ್ಲಿ ಕೆಲವೇ ದಿನಗಳಲ್ಲಿ ಬದಲಾವಣೆ ಗಾಳಿ ಬೀಸಲಿದೆ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿದ್ದಾರೆ. ಕೇಂದ್ರದ ದಮನಕಾರಿ ನೀತಿ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಬಳ್ಳಾರಿಯ ಜನರು ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದ್ದಾರೆ. ಬಿಜೆಪಿಯವರು ದ್ವೇಷ ಹುಟ್ಟುಹಾಕುತ್ತಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಮಾಡಲಾಗಿದೆ. ಈ ಯಾತ್ರೆಯಿಂದ ಬಿಜೆಪಿಯವರಿಗೆ ಭಯ ಶುರುವಾಗಿದೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಈಡೇರಿಕೆ
ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರ ಬಿಜೆಪಿಯವರು ಸಂವಿಧಾನ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ನನ್ನ ಮಗ ರಾಹುಲ್ ಲೋಕಸಭಾ ಸದಸ್ಯತ್ವ ಅನರ್ಹಗೊಳಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ಕರ್ನಾಟಕದಲ್ಲಿ ಅಭಿವೃದ್ಧಿ ಮಾಡಿಲ್ಲ. ಸಾಮಾಜಿಕ ನ್ಯಾಯ ನೀಡುವುದಕ್ಕಾಗಿ ಕಾಂಗ್ರೆಸ್​ನ್ನು ಬೆಂಬಲಿಸಿ. ಈ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಉತ್ತಮ ಆಡಳಿತವನ್ನು ನೀಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿ ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.

ಬಿಜೆಪಿ ಸರ್ಕಾರ ಕರ್ನಾಟಕವನ್ನು ಲೂಟಿ ಮಾಡುತ್ತಿದೆ. ಭ್ರಷ್ಟ ಬಿಜೆಪಿ ಸರ್ಕಾರದಿಂದ ಕರ್ನಾಟಕವನ್ನು ಉಳಿಸಬೇಕಿದೆ. ಮೇ 10ರಂದು ಪ್ರತಿಯೊಬ್ಬರೂ ಕಾಂಗ್ರೆಸ್​ಗೆ ವೋಟ್ ಮಾಡಿ ಎಂದು ಸೋನಿಯಾ ಗಾಂಧಿ ಮನವಿ ಮಾಡಿದರು.

ಕಾಂಗ್ರೆಸ್‌ ಮೇಲೆ ಭರವಸೆಯಿಡಿ ಎಂದ ಸೋನಿಯಾ ಗಾಂಧಿ
ಕರ್ನಾಟಕ ಬಸವೇಶ್ವರರ ಪುಣ್ಯಭೂಮಿ. ಬಸವೇಶ್ವರರು ಇಡೀ ಜಗತ್ತಿಗೆ ಸಮಾನತೆಯ ಸಂದೇಶವನ್ನು ಸಾರಿದ್ದರು. ಬಸವೇಶ್ವರವರ ಭಾವನೆಗಳನ್ನು ಪ್ರತಿನಿತ್ಯ ಬಿಜೆಪಿ ಕದಡುತ್ತಿದೆ. ಲೂಟಿ, ಕಮಿಷನ್ ಮುಕ್ತ ಸರ್ಕಾರಕ್ಕಾಗಿ ಕಾಂಗ್ರೆಸ್‌ ಮೇಲೆ ಭರವಸೆಯಿಡಿ. ರಾಜಸ್ಥಾನ, ಹಿಮಾಚಲ, ಛತ್ತೀಸ್‌ಗಢದಲ್ಲಿ ಎಲ್ಲಾ ಭರವಸೆ ಈಡೇರಿಸಿದ್ದೇವೆ. ರಾಜ್ಯದಲ್ಲೂ ಎಂತಹ ಸನ್ನಿವೇಶದಲ್ಲೂ ನಿಮ್ಮ ವಿಶ್ವಾಸವನ್ನು ಉಳಿಸಿಕೊಳ್ಳುವೆ ಎಂದು ತಿಳಿಸಿದರು.


Spread the love

Leave a Reply

Please enter your comment!
Please enter your name here