ಬಿಜೆಪಿ ಪಾಲಾದ ಮೈಸೂರು ಮೇಯರ್-ಉಪಮೇಯರ್ ಪಟ್ಟ

Spread the love

ಬಿಜೆಪಿ ಪಾಲಾದ ಮೈಸೂರು ಮೇಯರ್-ಉಪಮೇಯರ್ ಪಟ್ಟ

ಮೈಸೂರು: ಮಹಾನಗರ ಪಾಲಿಕೆ ಇತಿಹಾಸದಲ್ಲಿ 2ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿರುವ ಬಿಜೆಪಿ ಮೇಯರ್ ಹಾಗೂ ಉಪ ಮೇಯರ್ ಚುಕ್ಕಾಣಿ ಹಿಡಿದಿದೆ. ಮೇಯರ್  ಆಗಿ ಶಿವಕುಮಾರ್, ಉಪ ಮೇಯರ್ ಆಗಿ ಡಾ.ಜಿ.ರೂಪಾ ಯೋಗೀಶ್ ಆಯ್ಕೆಯಾಗಿದ್ದಾರೆ.

ಬಿಜೆಪಿ-ಡಿಎಸ್ ಹೊಂದಾಣಿಕೆಯಿಂದಾಗಿ ಮೇಯರ್ ಆಗಿ ಬಿಜೆಪಿಯ ವಾರ್ಡ್ ನಂ 47ರ ಸದಸ್ಯ ಶಿವಕುಮಾರ್, ಉಪ ಮೇಯರ್ ಆಗಿ ಬಿಜೆಪಿಯ ವಾರ್ಡ್ ನಂ 53ರ ಸದಸ್ಯೆ ಡಾ.ಜಿ.ರೂಪಾ ಯೋಗೀಶ್ ಗೆಲುವಿನ ನಗೆ ಬೀರಿದರೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿಯೇ ಮುಖಭಂಗ ಅನುಭವಿಸುವಂತಾಗಿದೆ.

ಕೊನೆ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗಿದ್ದರಿಂದ ಬಿಜೆಪಿಗೆ ಉಪಮೇಯರ್ ಸ್ಥಾನವೂ ಕೊಡುಗೆಯಾಗಿ ಬಂದಿದ್ದು ವಿಶೇಷ. ಇದರಿಂದಾಗಿ ಮೈತ್ರಿ ಮಾಡಿಕೊಂಡರೂ ಉಪ ಮೇಯರ್ ಸ್ಥಾನದಿಂದ ವಂಚಿತವಾದ ಜೆಡಿಎಸ್ ಮುಖಭಂಗ ಅನುಭವಿಸಿತು. ಸ್ವತಂತ್ರ ಸ್ಪರ್ಧೆಯಿಂದ ಮೇಯರ್ ಸ್ಥಾನದ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ಗೆ ಆಘಾತವಾಗಿದೆ.

ಮಂಗಳವಾರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಬೆಳಗ್ಗೆ 8ಗಂಟೆಯಿಂದ 10ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಬಿಜೆಪಿಯಿಂದ ಶಿವಕುಮಾರ್, ಜೆಡಿಎಸ್‌ನಿಂದ ಕೆ.ವಿ.ಶ್ರೀಧರ್, ಕಾಂಗ್ರೆಸ್‌ನಿಂದ ಸಯ್ಯದ್ ಹಸ್ರತ್‌ವು, ಜೆ.ಗೋಪಿ ನಾಮಪತ್ರ ಸಲ್ಲಿಸಿದ್ದರು. ಮಧ್ಯಾಹ್ನ 12 ಗಂಟೆಗೆ ಚುಣಾವಣಾಧಿಕಾರಿಗಳೂ ಆದ ಪ್ರಾದೇಶಿಕ ಆಯುಕ್ತ ಡಾ.ಸಿ.ಜಿ.ಪ್ರಕಾಶ್ ಅವರು ಚುನಾವಣೆ ಪ್ರಕ್ರಿಯೆ ಆರಂಭಿಸಿದರು. ಆರಂಭದಲ್ಲಿ ಸಭೆಯಲ್ಲಿ ಹಾಜರಿದ್ದ ಸದಸ್ಯರ ಹಾಜರಾತಿ ಪಡೆಯಲಾಯಿತು. ಬಳಿಕ ಮೇಯರ್ ಆಯ್ಕೆ ಪ್ರಕ್ರಿಯೆ ಆರಂಭವಾಯಿತು. ನಾಮಪತ್ರ ವಾಪಸ್ ಪಡೆಯಲು 5 ನಿಮಿಷ ಕಾಲಾವಕಾಶ ನೀಡಲಾಯಿತು. ಈ ವೇಳೆ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್‌ನ ಕೆ.ವಿ.ಶೀಧರ್, ಕಾಂಗ್ರೆಸ್‌ನ ಜೆ.ಗೋಪಿ ನಾಮಪತ್ರ ವಾಪಸ್ ಪಡೆದರು. ಅಂತಿಮವಾಗಿ ಬಿಜೆಪಿಯ ಶಿವಕುಮಾರ್, ಕಾಂಗ್ರೆಸ್‌ನ ಸಯ್ಯದ್ ಹಸ್ರತ್‌ವು ಕಣದಲ್ಲಿ ಉಳಿದರು. ಬಳಿಕ ಮತದಾನ ಪ್ರಕ್ರಿಯೆ ಆರಂಭವಾಯಿತು.

ಮೊದಲಿಗೆ ಕಾಂಗ್ರೆಸ್‌ನ ಮೇಯರ್ ಅಭ್ಯರ್ಥಿ ಸಯ್ಯದ್ ಹಸ್ರತ್‌ವು ಪರವಾಗಿ ಪರ ಕೈ ಎತ್ತುವಂತೆ ಸೂಚಿಸಲಾಯಿತು. ಕಾಂಗ್ರೆಸ್‌ನ 25 ಸದಸ್ಯರು, ಜೆಡಿಎಸ್ ನಿರ್ಮಲಾ ಹರೀಶ್, ಇಬ್ಬರು ಪಕ್ಷೇತರರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ವಿರೋಧ ಮತ್ತು ತಟಸ್ಥವಾಗಿ ಯಾರೂ ಕೈ ಎತ್ತಲಿಲ್ಲ. ಬಳಿಕ ಶಿವಕುಮಾರ್ ಪರವಾಗಿ ಕೈ ಎತ್ತುವಂತೆ ಸೂಚಿಸಲಾಯಿತು. ಬಿಜೆಪಿಯ 27 ಹಾಗೂ ಜೆಡಿಎಸ್‌ನ 20 ಸದಸ್ಯರು ಕೈ ಎತ್ತುವ ಮೂಲಕ ಮತ ಹಾಕಿದರು. ಜೆಡಿಎಸ್‌ನ ಸವೂದ್ ಖಾನ್ ತಟಸ್ಥವಾಗಿ ಉಳಿದರು. ಕೊನೆಗೆ ಬಿಜೆಪಿಯ ಶಿವಕುಮಾರ್ 47 ಮತಗಳನ್ನು ಪಡೆದು, ಕಾಂಗ್ರೆಸ್ ಅಭ್ಯರ್ಥಿಯನ್ನು 19 ಮತಗಳಿಂದ ಸೋಲಿಸುವ ಮೂಲಕ ನೂತನ ಮೇಯರ್ ಆಗಿ ಆಯ್ಕೆಯಾದರು.


Spread the love

Leave a Reply

Please enter your comment!
Please enter your name here