ಬಿಜೆಪಿ ಪ್ರಜಾಪ್ರಭುತ್ವ, ಸಂವಿಧಾನದ ವ್ಯವಸ್ಥೆಯಲ್ಲಿ ವಿಶ್ವಾಸ ಇಲ್ಲದಂತೆ ವರ್ತಿಸುತ್ತಿದೆ: ಎ.ಸಿ.ವಿನಯರಾಜ್

Spread the love

ಬಿಜೆಪಿ ಪ್ರಜಾಪ್ರಭುತ್ವ, ಸಂವಿಧಾನದ ವ್ಯವಸ್ಥೆಯಲ್ಲಿ ವಿಶ್ವಾಸ ಇಲ್ಲದಂತೆ ವರ್ತಿಸುತ್ತಿದೆ: ಎ.ಸಿ.ವಿನಯರಾಜ್
 

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣಗೊಂಡಿರುವ ಮಂಗಳಾ ಕ್ರೀಡಾಂಗಣದ ಪೆವಿಲಿಯನ್ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಮತ್ತು ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಅವರಿಗೆ ಆಹ್ವಾನ ನೀಡದೆ ಅವರನ್ನು ಕಡೆಗಣಿಸುವ ಮೂಲಕ ಆಡಳಿತಾರೂಢ ಬಿಜೆಪಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ವ್ಯವಸ್ಥೆಯಲ್ಲಿ ವಿಶ್ವಾಸ ಇಲ್ಲದಂತೆ ವರ್ತಿಸುತ್ತಿದೆ ಎಂದು ಮನಪಾ ಸದಸ್ಯ ಹಾಗೂ ಕೆಪಿಸಿಸಿ ವಕ್ತಾರ ಎ.ಸಿ.ವಿನಯರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸೋಮವಾರ ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳಿಗೆ ಗೌರವ ಕೊಡುವುದು ಆಡಳಿತ ಪಕ್ಷದ ಜವಾಬ್ದಾರಿಯಾಗಿರುತ್ತದೆ. ಆದರೆ ಆಡಳಿತಾರೂಢ ಬಿಜೆಪಿ ಆ ರೀತಿ ನಡೆದುಕೊಳ್ಳುತ್ತಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಶಿಷ್ಟಾಚಾರ ಪ್ರಕಾರ ಇಬ್ಬರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಬೇಕಿತ್ತು. ಆದರೆ ಕೊನೆ ಗಳಿಗೆಯಲ್ಲಿ ಕರಪತ್ರದಲ್ಲಿ ಮಂಜುನಾಥ ಭಂಡಾರಿ ಅವ ಹೆಸರನ್ನು ಕರಪತ್ರದಲ್ಲಿ ಸೇರಿಸಿರುವುದು ಗೊತ್ತಾಗಿದೆ. ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಲಾಗಿಲ್ಲ. ಜಿಲ್ಲಾಡಳಿತ, ಶಾಸಕರು, ಉಸ್ತುವಾರಿ ಸಚಿವರು ಯಾಕೆ ಈ ವಿಚಾರದಲ್ಲಿ ವೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು.

2018ರಲ್ಲಿ ಯು.ಟಿ.ಖಾದರ್ ನಗರಾಭಿವೃದ್ಧಿ ಸಚಿವರಾಗಿದ್ದಾಗ ಸುಮಾರು 67 ಕೋಟಿ ರೂ.ಗಳನ್ನು ಬೇರೆ ಬೇರೆ ಕಾಮಗಾರಿಗಳಿಗೆ ಸ್ಮಾರ್ಟ್ ಯೋಜನೆಯಡಿ ಅನುದಾನ ಮಂಜೂರು ಮಾಡಿದ್ದರು. ಇದರಲ್ಲಿ ಕದ್ರಿ ಪಾರ್ಕ್ ರಸ್ತೆ ಅಭಿವೃದ್ಧಿಗೆ ಸುಮಾರು 12 ಕೋಟಿ ರೂ, ಮಂಗಳಾ ಕ್ರೀಡಾಂಗಣದ ಈಜುಕೊಳದ ಅಭಿವೃದ್ಧಿಗೆ ಸುಮಾರು 24.5 ಕೋಟಿ ರೂ., ಕಬಡ್ಡಿ ಮತ್ತು ಟೆನಿಸ್ ಒಳಾಂಗಣಕ್ಕೆ ಸುಮಾರು 21 ಕೋಟಿ ರೂ., ಮಂಗಳಾ ಪೆವಿಲಿಯನ್‌ಗೆ ಸುಮಾರು 9 ಕೋಟಿ ರೂ., ಮಹಾಕಾಳಿಪಡ್ಡು ಅಂಡರ್‌ಪಾಸ್‌ಗೆ 30 ಕೋಟಿ ರೂ. ಮಂಜೂರು ಮಾಡಿದ್ದರು. ಆದರೆ ಖಾದರ್ ಅವರನ್ನು ಕರೆದರೆ ಸತ್ಯಾಂಶ ಗೊತ್ತಾಗುತ್ತದೆ ಮತ್ತು ಶಾಸಕರು ಮತ್ತು ಸಂಸದರು ಜನರಿಗೆ ಸುಳ್ಳು ಹೇಳುತ್ತಿರುವುದು ಬಹಿರಂಗವಾಗುತ್ತದೆ ಎಂಬ ಭಯದಿಂದ ಅವರನ್ನು ಸಮಾರಂಭಕ್ಕೆ ಕಡೆಗಣಿಸಿದ್ದಾರೆ ಎಂದು ದೂರಿದರು.


Spread the love

Leave a Reply

Please enter your comment!
Please enter your name here