
ಬಿಜೆಪಿ ಬಡವರ ಪಕ್ಷವಲ್ಲ, ಬಲ್ಲಿದರ ಪಕ್ಷ:ಪ್ರಿಯಾಂಕ ಗಾಂಧಿ
ತಿ.ನರಸೀಪುರ: ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ಮನಡೆಸುತ್ತಿರುವ ಬಿಜೆಪಿ ಪಕ್ಷ ರೈತ, ಬಡವರ ಪರವಿಲ್ಲದ ಬಲ್ಲಿದರ ಪರವಾಗಿರುವ ಪಕ್ಷವಾಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಪಟ್ಟಣದ ಹೆಳವರಹುಂಡಿ ಗ್ರಾಮದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಪಿಎಸ್ಐ ಹಗರಣದ ತರುವಾಯ ಸರ್ಕಾರ ಲಜ್ಜೆಗೇಡಿತನವನ್ನು ಪ್ರದರ್ಶಿಸಿ ಸರ್ಕಾರಿ ಪ್ರಾಧ್ಯಾಪಕ ಹುದ್ದೆಗೆ 30 ಲಕ್ಷ, ಇಂಜಿನಿಯರ್ ಹುದ್ದೆಗೆ 20 ಲಕ್ಷ ಲಂಚವನ್ನು ಫಿಕ್ಸ್ ಮಾಡಿದ್ದಾರೆ ಎಂದು ದೂರಿದರು. ರಾಜ್ಯ ಮತ್ತು
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಗಳಿಂದ ಜನಪರವಾದ ಯೋಜನೆಗಳು ಜಾರಿಯಾಗಿಲ್ಲ. ಬಿಜೆಪಿ ಸರ್ಕಾರ ದಿನಬಳಕೆ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ದರ ದುಪ್ಪಟ್ಟು ಮಾಡಿದೆ. ಈಗ ಚುನಾವಣೆ ಸಮಯದಲ್ಲಿ ಬಂದು ಬಣ್ಣ ಬಣ್ಣದ ಮಾತನಾಡುತ್ತಾರೆ. ಬಿಜೆಪಿ ಪಕ್ಷ ಜನಪರವಿಲ್ಲ. ಹಾಗಾಗಿ ಜನಪರ ಇರುವ ಕಾಂಗ್ರೆಸ್ ಪಕ್ಷವನ್ನು ಜನರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ದೇಶವನ್ನು ನಿರ್ಮಾಣ ಮಾಡಲು ಬದ್ಧತೆ ಬೇಕು. ದೇಶದ ಜ್ವಲಂತ ಸಮಸ್ಯೆಗಳನ್ನು ಅರಿತು ಅದನ್ನು ಬಗೆಹರಿಸುವುದು ಬಿಟ್ಟು ಜಾತಿ, ಧರ್ಮಾಧಾರಿತ ರಾಜಕಾರಣ ಮಾಡುವುದು ಬಿಜೆಪಿಯ ರಹಸ್ಯ ಸಿದ್ದಾಂತವಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರಕ್ಕೆ ಕರ್ನಾಟಕದ ಜನತೆ ಜನಾದೇಶ ನೀಡಿಲ್ಲ. ವಾಮಮಾರ್ಗದ ಮುಖೇನ ಅಧಿಕಾರ ಹಿಡಿದಿದೆ. ಶಾಸಕರಿಗೆ ಆಮಿಷ ನೀಡಿ ಸರ್ಕಾರ ರಚನೆ ಮಾಡಿದೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿರುವುದರಿಂದ ಸರ್ಕಾರ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ. ರಾಜ್ಯದ ಜಿ.ಎಸ್.ಟಿ ಪಾಲು ರಾಜ್ಯಕ್ಕೆ ಬರುತ್ತಿಲ್ಲ. ಪ್ರತಿಪಕ್ಷಗಳು ಕೇಳುವ ಪ್ರಶ್ನೆಗೆ ಬಿಜೆಪಿ ಸರ್ಕಾರದಲ್ಲಿ ಉತ್ತರವಿಲ್ಲ. ಪ್ರಶ್ನೆ ಕೇಳುವವರನ್ನು ಅಪರಾಧಿಗಳಂತೆ ಬಿಂಬಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಖಾಲಿ ಇರುವ 2.5 ಲಕ್ಷ ಹುದ್ದೆಗಳನ್ನು ತ್ವರಿತ ಭರ್ತಿ ಮಾಡಲಾಗುವುದು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿಯೋಜನೆಯಡಿ ಪ್ರತಿ ತಿಂಗಳು 2000 ರೂ.ಗಳು, ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ,ಉಚಿತ ವಿದ್ಯುತ್, ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಮಹದೇವಪ್ಪ, ಕಾಂಗ್ರೆಸ್ ಉಸ್ತುವಾರಿ ಸುರ್ಜೆ ವಾಲ, ಮಾಜಿ ಸಂಸದ ಕಾಗಲವಾಡಿ ಎಂ ಶಿವಣ್ಣ,ಶಾಸಕರುಗಳಾದ ತನ್ವಿರ್ ಶೇಠ, ಡಾ. ಯತಿಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಡಾ. ತಿಮ್ಮಯ್ಯ, ಮಾಜಿ ಶಾಸಕ ಕೃಷ್ಣಪ್ಪ, ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ,ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ಮಾವನಹಳ್ಳಿ ಸಿದ್ದೇಗೌಡ, ಚಾಮರಾಜ ಕ್ಷೇತ್ರದ ಅಭ್ಯರ್ಥಿ ಹರೀಶಗೌಡ, ಪುರಸಭೆಅಧ್ಯಕ್ಷ ಟಿ.ಎಂ. ನಂಜುಂಡಸ್ವಾಮಿ ಇನ್ನಿತರರು ಇದ್ದರು.