ಬಿಜೆಪಿ ಶಾಸಕ ಮಾಡಾಳ್‌ ಪತ್ತೆಗೆ ಮುಂದುವರಿದ ಶೋಧ

Spread the love

ಬಿಜೆಪಿ ಶಾಸಕ ಮಾಡಾಳ್‌ ಪತ್ತೆಗೆ ಮುಂದುವರಿದ ಶೋಧ
 

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್‌) ಟೆಂಡರ್‌ ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣದಲ್ಲಿ ಮೊದಲನೇ ಆರೋ‍ಪಿಯಾಗಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಪತ್ತೆಗೆ ಲೋಕಾಯುಕ್ತ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಕೆಎಸ್‌ಡಿಎಲ್‌ ಅಧ್ಯಕ್ಷರೂ ಆಗಿದ್ದ ವಿರೂಪಾಕ್ಷಪ್ಪ ಪರವಾಗಿ ₹ 40 ಲಕ್ಷ ಲಂಚ ಪಡೆದ ಅವರ ಮಗ, ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್‌ ಮಾಡಾಳ್‌ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದರು. ವಿರೂಪಾಕ್ಷಪ್ಪ ಅವರ ಮನೆಯಲ್ಲಿ ಶುಕ್ರವಾರ ₹ 6.10 ಕೋಟಿ ನಗದು ವಶಪಡಿಸಿಕೊಳ್ಳಲಾಗಿತ್ತು. ಗುರುವಾರ ರಾತ್ರಿಯೇ ಚನ್ನಗಿರಿಯಿಂದ ಬೆಂಗಳೂರಿಗೆ ಬಂದಿದ್ದ ಶಾಸಕರು, ತಲೆಮರೆಸಿಕೊಂಡಿದ್ದಾರೆ.

ವಿರೂಪಾಕ್ಷಪ್ಪ ಅವರ ಪತ್ತೆಗಾಗಿ ಲೋಕಾಯುಕ್ತ ಪೊಲೀಸರು ಶುಕ್ರವಾರ ಹಲವು ಕಡೆಗಳಲ್ಲಿ ಹುಡುಕಾಟ ನಡೆಸಿದ್ದರು. ಶನಿವಾರ ಬೆಳಿಗ್ಗೆಯಿಂದಲೂ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಹಲವು ತಂಡಗಳು ಶಾಸಕರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಿವೆ. ಅವರ ಆಪ್ತರು, ನಿಕಟವರ್ತಿಗಳಿಂದ ಮಾಹಿತಿ ಪಡೆಯಲು ಪ್ರಯತ್ನಿಸಿದ್ದು, ಖಚಿತ ಸುಳಿವು ಲಭಿಸಿಲ್ಲ.

‘ಶಾಸಕರ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿದೆ. ಲೊಕೇಷನ್‌ ಕೂಡ ಪತ್ತೆಯಾಗುತ್ತಿಲ್ಲ. ವಿರೂಪಾಕ್ಷಪ್ಪ ಎಲ್ಲಿದ್ದಾರೆ ಎಂಬುದನ್ನು ಅವರ ನಿಕಟವರ್ತಿಗಳೂ ಬಹಿರಂಗಪಡಿಸಿಲ್ಲ. ಹೆಚ್ಚಿನ ತಂಡಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದ್ದು, ಶೀಘ್ರದಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆಯಲಾಗುವುದು’ ಎಂದು ಲೋಕಾಯುಕ್ತದ ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ದಾಖಲೆಗಳ ಪರಿಶೀಲನೆ: ಬೆಂಗಳೂರಿನ ಸಂಜಯನಗರ ಹಾಗೂ ಚನ್ನಗಿರಿಯ ಚನ್ನೇಶಪುರದಲ್ಲಿ ಶಾಸಕರ ಮನೆಗಳ ಮೇಲೆ ನಡೆಸಿದ ದಾಳಿ ವೇಳೆ ವಶಕ್ಕೆ ಪಡೆದ ದಾಖಲೆಗಳನ್ನು ತನಿಖಾ ತಂಡ ಪರಿಶೀಲನೆ ನಡೆಸುತ್ತಿದೆ. ಈ ದಾಖಲೆಗಳಲ್ಲಿರುವ ಮಾಹಿತಿ ಆಧರಿಸಿ ಮುಂದಿನ ತನಿಖೆ ನಡೆಯಲಿದೆ.

ಮತ್ತೊಂದು ಪ್ರಕರಣ ಸಾಧ್ಯತೆ: ವಿರೂಪಾಕ್ಷಪ್ಪ ಹಾಗೂ ಅವರ ಕುಟುಂಬದ ಸದಸ್ಯರು ಬೃಹತ್‌ ಪ್ರಮಾಣದಲ್ಲಿ ಸ್ಥಿರಾಸ್ತಿ ಹೊಂದಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ. ಇತ್ತೀಚಿನ ವರ್ಷಗಳಲ್ಲಿ ಅಪಾರ ಪ್ರಮಾಣದಲ್ಲಿ ಕೃಷಿ ಜಮೀನು ಖರೀದಿ ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಹೂಡಿಕೆ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ.

‘ಈಗ ಲಂಚ ಪ್ರಕರಣದ ತನಿಖೆ ಮಾತ್ರ ನಡೆಯುತ್ತಿದೆ. ಸ್ಥಿರಾಸ್ತಿ ಹಾಗೂ ಹೂಡಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಪ್ರತ್ಯೇಕ ಎಫ್‌ಐಆರ್‌ ದಾಖಲಿಸುವ ಕುರಿತು ನಿರ್ಧರಿಸಲಾಗುವುದು’  ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.

ಮಾಡಾಳ್ ಮನೆಯಲ್ಲಿ ಸಿಕ್ಕಿದ್ದು 2.8 ಕೆ.ಜಿ ಚಿನ್ನ, 20 ಕೆ.ಜಿ ಬೆಳ್ಳಿ!

ಲಂಚ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಚನ್ನೇಶಪುರದ ನಿವಾಸದಲ್ಲಿ ಲೋಕಾಯುಕ್ತ ಸಿಬ್ಬಂದಿ ಶೋಧ ನಡೆಸಿದ ಸಂದರ್ಭ 2.8 ಕೆ.ಜಿ (2,800 ಗ್ರಾಂ) ಚಿನ್ನ, 20 ಕೆ.ಜಿ ಬೆಳ್ಳಿ ದೊರೆತಿದೆ.

ಇದೇ ವೇಳೆ ದೊರೆತಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಪರಿಶೀಲನೆಗಾಗಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ.

ಶುಕ್ರವಾರ ಮನೆಯ ಮೇಲೆ ದಾಳಿ ನಡೆದಿತ್ತು. ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಕೆಲವು ವಾಹನಗಳನ್ನು ವಶಪಡಿಸಿಕೊಂಡು ಪರಿಶೀಲಿಸಲಾಗುತ್ತಿದೆ ಎಂದು ಲೋಕಾಯುಕ್ತ ಮೂಲಗಳು ಖಚಿತಪಡಿಸಿವೆ.

ತಾಲ್ಲೂಕಿನ ಮಾವಿನಹೊಳೆ ಗ್ರಾಮದಲ್ಲಿರುವ ಶಾಸಕರ ಒಡೆತನದ ಜಲ್ಲಿ ಕ್ರಷರ್‌ ಕಚೇರಿ ಹಾಗೂ ಮಾವಿನಕಟ್ಟೆ ಗ್ರಾಮದಲ್ಲಿನ ತೋಟದ ಮನೆಗಳಲ್ಲೂ ಲೋಕಾಯುಕ್ತ ಸಿಬ್ಬಂದಿ ಶೋಧ ನಡೆಸಿದಾಗ ಮಹತ್ವದ ದಾಖಲೆಗಳು ದೊರೆತಿವೆ.


Spread the love

Leave a Reply

Please enter your comment!
Please enter your name here