ಬಿಜೆಪಿ ಸರಕಾರ ವಿಧಿಸಿರುವುದು ʼಅನ್ಯಾಯದ ಕರ್ಫ್ಯೂʼ – ಡಿಯೋನ್‌ ಡಿʼಸೋಜಾ

Spread the love

ಬಿಜೆಪಿ ಸರಕಾರ ವಿಧಿಸಿರುವುದು ʼಅನ್ಯಾಯದ ಕರ್ಫ್ಯೂʼ – ಡಿಯೋನ್‌ ಡಿʼಸೋಜಾ

ಉಡುಪಿ: ರಾಜ್ಯದಲ್ಲಿನ ಬಿಜೆಪಿ ಸರಕಾರ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ವಾರಾಂತ್ಯದ ಕರ್ಫ್ಯೂ ಹೇರಿಲ್ಲ ಬದಲಾಗಿ ಸಾಮಾನ್ಯ ಜನರನ್ನು ಮುಂದಿಟ್ಟುಕೊಂಡು ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿರುವುದು ಇಂದು ಸಾಬೀತಾಗಿದೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ ಕಾರ್ಯದರ್ಶಿ ಡಿಯೋನ್‌ ಡಿʼಸೋಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರಕಾರ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದ್ದು ಅದರಿಂದ ತನ್ನನ್ನು ಸುರಕ್ಷಿತವಾಗಿರಿಸುವ ನಿಟ್ಟಿನಲ್ಲಿ ಎಲ್ಲಾ ಮಿತಿಗಳನ್ನು ಮೀರಿ ತಮಗೆ ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಉಪಯೋಗಿಸುತ್ತಿರುವುದು ರಾಜ್ಯದ ಜನತೆಗೆ ನಿಧಾನವಾಗಿ ತಿಳಿದು ಬರುತ್ತಿದೆ. ಮೊದಲು ರಾಜ್ಯದಲ್ಲಿ ಕೋಮು ಪ್ರಚೋದಿತ ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟ ಸರಕಾರ ಈಗ ಕಾಂಗ್ರೆಸ್‌ ಪಕ್ಷದ ನೇತೃತ್ವದಲ್ಲಿ ನಡೆಯಲು ಉದ್ದೇಶಿಸಿರುವು ಮೇಕೆದಾಟು ಪಾದಯಾತ್ರೆಯನ್ನು ಶತಾಯ ಗತಾಯ ನಿಲ್ಲಿಸುವ ಮೂಲಕ ತನ್ನ ರಾಜಕೀಯ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಜನ ಸಾಮಾನ್ಯರ ಜೀವನೋಪಾಯಕ್ಕೆ ಧಕ್ಕೆ ತರಲು ಮುಂದಾಗಿದ್ದಾರೆ. ಇವರೇ ಈ ಮೊದಲು ಹೇಳಿದಂತೆ ಮಾಸ್ಕ್‌ ಧರಿಸುವ ಮೂಲಕ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳೂವುದರ ಮೂಲಕ ಕೋವಿಡ್‌ ಹರಡುವುದನ್ನು ತಡೆಯಲು ಸಾಧ್ಯವಿರುವಾಗ ಈ ವಾರಾಂತ್ಯದ ಕರ್ಫ್ಯೂ ಯಾವ ಪುರಷಾರ್ಥಕ್ಕಾಗಿ? ಮತ್ತು ಕರ್ನಾಟಕದ ಜನರ ಹಕ್ಕುಗಳಿಗಾಗಿ ಹೋರಾಡುವುದರಲ್ಲಿ ತಪ್ಪೇನು?

ಮುಂದಿನ ದಿನಗಳಲ್ಲಿ ಸರ್ಕಾರ ಇದೇ ರೀತಿ ತನ್ನ ಕಳಪೆ ಕಾರ್ಯತಂತ್ರಗಳನ್ನು ಮುಂದುವರೆಸಿದರೆ, ಕೋವಿಡ್‌ ಜನರ ಆರೋಗ್ಯದ ಕಾಳಜಿ ಕಾರಣವಾಗದೆ ಸಾಮಾನ್ಯ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಲಿದೆ. ವಾರಾಂತ್ಯದ ಕರ್ಫ್ಯೂ ವಿಧಿಸಿಯೂ ಕಳೆದ ೨ ವರ್ಷಗಳ ಅನುಭವದ ನಂತರವೂ ಕೂಡ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳ ನಿಭಾಯಿಸುವಲ್ಲಿ ಸಾಮರ್ಥ್ಯದ ಕೊರತೆಯ ಪರಿಸ್ಥಿತಿಯೇ ಹೊರತು ಬೇರೇನೂ ಅಲ್ಲ ಎಂದು ಸರ್ಕಾರವು ಜನರಿಗೆ ಈ ಮೂಲಕ ಸಾಬೀತುಪಡಿಸಿದೆ. ಕರ್ನಾಟಕ ರಾಜ್ಯದಲ್ಲಿ ಉತ್ತಮ ಆಡಳಿತದೊಂದಿಗೆ ಶಾಂತಿಯುತ ಜೀವನವನ್ನು ಹೊಂದಲು ಬಯಸುವ ಬಹುಪಾಲು ಜನರು ಅಸ್ತಿತ್ವದಲ್ಲಿದ್ದಾರೆ ಎಂಬುದನ್ನು ಸರ್ಕಾರ ಮರೆತಿದೆ.

ಕರ್ನಾಟಕ ಸರಕಾರ ಇಂದು ವಿಧಿಸಿರುವುದು ಅನ್ಯಾಯದ ಕರ್ಫ್ಯೂ ಆಗಿದ್ದು, ಸರ್ಕಾರ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಿಜವಾಗಿಯೂ ಆರೋಗ್ಯ ಮತ್ತು ವೈದ್ಯಕೀಯ ತಜ್ಞರ ಸಲಹೆಯನ್ನು ತೆಗೆದುಕೊಳ್ಳುತ್ತದೆಯೇ ಅಥವಾ ಅವರು ತನಗೆ ಬೇಕಾದ ರೀತಿಯಲ್ಲಿ ಏನನ್ನಾದರೂ ಜಾರಿಗೆ ತರುತ್ತದೆಯೇ ಎಂಬ ಅನುಮಾನ ಈಗ ಜನರಿಗೆ ಆರಂಭವಾಗಿದೆ. ಸರ್ಕಾರ ಇಂದು ಜಾರಿಗೆ ತಂದಿರುವ ವಾರಾಂತ್ಯದ ಕರ್ಫ್ಯೂ ಒಂದು ರಾಜಕೀಯ ಗಿಮಿಕ್ ಆಗಿದೆ. ಕೋವಿಡ್ ವೈರಸ್ ಕ್ಯಾಬಿನೆಟ್ ಅನ್ನು ಭೇಟಿ ಮಾಡಿ ಜನವರಿಯ ಮೊದಲ ಎರಡು ವಾರಾಂತ್ಯಗಳಲ್ಲಿ ಕರ್ನಾಟಕದ ಜನರ ಮೇಲೆ ದಾಳಿ ಮಾಡುವುದಾಗಿ ತಿಳಿಸಿರುವ ರೀತಿಯಲ್ಲಿ ವಾರಾಂತ್ಯ ಕರ್ಫ್ಯೂ ಅನುಷ್ಠಾನಗೊಳಿಸಲು ಸರ್ಕಾರ ಪ್ರಾರಂಭಿಸಿದೆ. ಇಂದು ರಾಜ್ಯದಲ್ಲಿ ಜನರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿವೆ, ಅವೆಲ್ಲವನ್ನೂ ಬದಿಗಿಟ್ಟು ಸರ್ಕಾರ ಅಧಿಕಾರದಲ್ಲಿ ಉಳಿಯಲು ತನ್ನ ಹೋರಾಟದಲ್ಲಿ ಮಾತ್ರ ನಿರತವಾಗಿರುವುದು ನೋಡಿದರೆ ಸರ್ಕಾರಕ್ಕೆ ಜನರ ಕಾಳಜಿ ಇಲ್ಲದಿರುವುದು ಸ್ಪಷ್ಟವಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love