ಬಿಜೆಪಿ ಸರ್ಕಾರ ವಚನ ಭ್ರಷ್ಟವಾಗಿದೆ: ಡಿ.ಕೆ.ಶಿವಕುಮಾರ್

Spread the love

ಬಿಜೆಪಿ ಸರ್ಕಾರ ವಚನ ಭ್ರಷ್ಟವಾಗಿದೆ: ಡಿ.ಕೆ.ಶಿವಕುಮಾರ್

ಮೈಸೂರು: ರಾಜ್ಯ ಬಿಜೆಪಿ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ್ದ ಶೇ.90 ಭರವಸೆಗಳನ್ನು ಈಡೇರಿಸದೆ ವಚನ ಭ್ರಷ್ಟವಾಗಿದೆ. 2022ರಲ್ಲಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ಘೋಷಣೆ ಭಾಷಣದ ಆಯವ್ಯಯವಾಗಿ ಉಳಿದಿದ್ದು, ರಾಜ್ಯದ ಬಿಜೆಪಿ ಸರ್ಕಾರ ವಚನ- ವಂಚನೆ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷಡಿ.ಕೆ.ಶಿವಕುಮಾರ್ ಟೀಕಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ಬಜೆಟ್ ಮಂಡನೆಗೂ ಮುನ್ನ ಹಿಂದಿನ ವರ್ಷದ ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮಗಳ ಅನುಷ್ಠಾನಗೊಳಿಸಿದ ರಿರ್ಪೋಟ್ ಕಾರ್ಡ್ ಜನತೆಯ ಮುಂದಿಡಬೇಕು ಎಂದು ಆಗ್ರಹಿಸಿದರು. ಮಾರ್ಚ್ ಮೊದಲ ವಾರ ಚುನಾವಣಾ ನೀತಿ ಸಂಹಿತೆ ಘೋಷಣೆಯಾಗಲಿದೆ. ತದ ನಂತರ ಬಿಜೆಪಿ ಮಂಡಿಸುವ ಬಜೆಟ್ ಕಾಗದದಲ್ಲಿ ಉಳಿಯಲಿದೆ. ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮಗಳಲ್ಲಿ ಏನೇನು ಜಾರಿಗೆ ತಂದಿzನೆ ಎಂದು ಈ ವರ್ಷದ ಬಜೆಟ್ ಮಂಡನೆಗೂ ಮುನ್ನ ತಿಳಿಸಿದರೆ ಅರ್ಥ ಬರುತ್ತದೆ ಎಂದರು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಬೆಳೆ ಸಾಲ ಮನ್ನಾ ಮಾಡಲಿಲ್ಲ. ಕನಿಷ್ಠ ಬೆಂಬಲ ಬೆಲೆ ಯೋಜನೆ, ಆದಾಯ ಒಂದೂವರೆ ಪಟ್ಟು ಹೆಚ್ಚಿಸಲಿಲ್ಲ. 5ಸಾವಿರ ಕೋಟಿ ಆವರ್ತನಿಧಿ ಎಲ್ಲಿಟ್ಟಿದ್ದಾರೆ? ರೈತರ ಪಂಪ್‌ಸೆಟ್‌ಗೆ 10ಗಂಟೆ ತ್ರಿ ಫೇಸ್ ವಿದ್ಯುತ್ ಯಾಕೇ ಪೂರೈಸಲಿಲ್ಲ ಎಂದು ಪ್ರಶ್ನಿಸಿದರು.

2022ರ ಬಜೆಟ್‌ನ 2.5 ಲಕ್ಷ ಕೋಟಿಯಲ್ಲಿ 1.4 ಲಕ್ಷ ಕೋಟಿ ಖರ್ಚು ಮಾಡಿದ್ದಾರೆ. ಗುಡಿಸಲು ಮುಕ್ತ ರಾಜ್ಯ, ಸ್ಲಂ ಮುಕ್ತ ನಗರ ಮಾಡಲಿಲ್ಲ. ಬಡವರು, ಕಾರ್ಮಿಕರು, ದಲಿತರು ಏನೂ ಮಾಡಲಿಲ್ಲ. ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡಲಿಲ್ಲ. ಪಠ್ಯದಲ್ಲಿ ಇತಿಹಾಸ ತಿರುಚಿದ ಭ್ರಷ್ಟ ಸರ್ಕಾರ ಎಂದರು.

ಈವರೆಗೆ 170 ಪ್ರಶ್ನೆಗಳನ್ನು ಕೇಳಿzವೆ. ಒಂದಕ್ಕೂ ಉತ್ತರವಿಲ್ಲ. ಕೊಟ್ಟ ಮಾತು ಉಳಿಸಿಕೊಳ್ಳಲಾಗದಿದ್ದ ಮೇಲೆ ಯಾಕೆ ಅಧಿಕಾರದಲ್ಲಿ ಇರಬೇಕು? ಸಿಎಂ ಬಸವರಾಜ ಬೊಮ್ಮಾಯಿ ನುಡಿದಂತೆ ನಡೆದಿzವೆ ಎಂದು ಧೈರ್ಯದಿಂದ ಜನರ ಮುಂದೆ ಹೇಳಲಿ ಎಂದು ಸವಾಲು ಹಾಕಿದರು. ದಶಪಥ ರಸ್ತೆಯಲ್ಲಿ ಸರ್ವಿಸ್ ರಸ್ತೆ ನಿರ್ಮಿಸಿ ಟೋಲ್ ಸಂಗ್ರಹಿಸಬೇಕು. ಸರ್ವಿಸ್ ರಸ್ತೆ ನಿರ್ಮಾಣವಾಗುವ ತನಕ ಉಚಿತ ಸೇವೆ ನೀಡಬೇಕು. ಬಡವರು, ಕಾರ್ಮಿಕರು, ರೈತರು, ಹಳ್ಳಿಗಳ ಜನರು 250 ರೂ. ಕೊಟ್ಟು ಸಂಚರಿಸಲಾಗುತ್ತದೆಯೇ? ಪೆಟ್ರೋಲ್ ದರ ದುಬಾರಿಯಾಗಿದೆ. 10 ಸಾವಿರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ಬಗ್ಗೆ ಯಾಕೇ ಸಂಸದರಾದ ಪ್ರತಾಪಸಿಂಹ, ಶ್ರೀನಿವಾಸಪ್ರಸಾದ್ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಎಐಸಿಸಿ ಉಸ್ತುವಾರಿ ರೋಸಿ ಜಾನ್, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ರಾಣಿ ಸತೀಶ್, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ದಿನೇಶ್ ಗೂಳಿಗೌಡ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಆರ್.ಧರ್ಮಸೇನ, ಎಐಸಿಸಿ ವಕ್ತಾರೆ ಐಶ್ವರ್ಯ ಮಹದೇವ್, ಕೆಪಿಸಿಸಿ ವಕ್ತಾರರಾದ ಎಂ.ಲಕ್ಷ್ಮಣ್, ಎಚ್.ಎ.ವೆಂಕಟೇಶ್, ಸೂರಜ್ ಹೆಗಡೆ, ಪ್ಯಾರಿ ಜಾನ್ ಭಾಗವಹಿಸಿದ್ದರು.


Spread the love