ಬಿಜೆಪಿ ಸೇರುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ – ಬಸವರಾಜ್‌ ಹೊರಟ್ಟಿ

Spread the love

ಬಿಜೆಪಿ ಸೇರುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ – ಬಸವರಾಜ್‌ ಹೊರಟ್ಟಿ

ಕುಂದಾಪುರ: ಬಿಜೆಪಿಯಲ್ಲಿ ನನಗೆ ಆತ್ಮೀಯರು ಹೆಚ್ಚಿರುವ ಕಾರಣದಿಂದಾಗಿ ಬಿಜೆಪಿ ಸೇರ್ಪಡೆ ಎಂಬ ಮಾತು ಕೇಳಿ ಬರುತ್ತಿದೆ. ಮೊದಲು ನನಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ, ಬೆಂಬಲ ನೀಡುತ್ತೇವೆ ಎನ್ನುವ ಸಲಹೆಗಳು ಬಿಜೆಪಿ ಕೆಲ ಸ್ನೇಹಿತರಿಂದ ಬಂದಿತ್ತು. ಇನ್ನೂ ಕೆಲವರು ನಮ್ಮದು ರಾಷ್ಟ್ರೀಯ ಪಕ್ಷವಾಗಿರುವುದರಿಂದ ನಮ್ಮ ಪಕ್ಷದಿಂದಲೇ ನಿಲ್ಲಿ ಎಂದು ಹೇಳಿದ್ದರು. ಆಯಿತು ಆ ಸಂದರ್ಭ ಬಂದಾಗ ನೋಡುವಾ ಎಂದು ಹೇಳಿದ್ದೇನೆ. ಇಲ್ಲಿಯ ತನಕ ನಾನು ಯಾವುದೆ ಸಲಹೆಗೂ ಸಮ್ಮತಿ ನೀಡಿಲ್ಲ. ಬಿಜೆಪಿ ಪಕ್ಷ ಸೇರುವುದಕ್ಕೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸ್ಪಷ್ಟಪಡಿಸಿದರು.

ಕುಂದಾಪುರ ಸಮೀಪದ ಗೋಪಾಡಿಯಲ್ಲಿನ ಸ್ನೇಹಿತ ಹೊಟೇಲ್ ಉದ್ಯಮಿ ದಿ.ಅಚ್ಯುತ ಉಪಾಧ್ಯ ಗೋಪಾಡಿ ಅವರ ನಿವಾಸಕ್ಕೆ ಶನಿವಾರ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ವಿಧಾನ ಪರಿಷತ್ ಸಭಾಪತಿಯಾಗಿರುವುದರಿಂದ ಮುಂದಿನ ಚುನಾವಣೆ ಬರುವ ತನಕ ರಾಜಕೀಯ ಮಾತನಾಡುವುದಿಲ್ಲ ಎಂದು ಅವರು ಹೇಳಿದರು.

ಅತಿಥಿ ಉಪನ್ಯಾಸಕರ ಬದಲಿಗೆ ಖಾಯಂ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು. ಅತಿಥಿ ಉಪನ್ಯಾಸಕರ ಸೇವೆಯನ್ನು ಪರಿಗಣಿಸಿ. ಅಂಕಗಳ ರೀತಿಯಲ್ಲಿ ಅವರಿಗೊಂದು ಶಿಪಾರಸ್ಸು ನೀಡಿ ಮಾನ್ಯತೆ ನೀಡುವಂತಾಗಬೇಕು. ಇದರಿಂದ ಉಪನ್ಯಾಸಕರ ಸೇವೆಯ ಗರಿಮೆ ಹೆಚ್ಚಲಿದೆ. ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಅತಿಥಿ ಉಪನ್ಯಾಸಕರ ನೇಮಕ ಮಾಡುವ ಕುರಿತು ಪ್ರಸ್ತಾಪಮಾಡಿದ್ದಾರೆ. ಇದರ ಬದಲಾಗಿ ಅವರನ್ನೇ ಖಾಯಂ ನೇಮಕಾತಿ ಮಾಡುವುದು ಒಳ್ಳೆಯದು. ಪ್ರತಿ ವರ್ಷ ಶಿಕ್ಷಕರನ್ನು ನೇಮಕ ಮಾಡಿದರೆ ಈ ಸಮಸ್ಯೆ ಇರುವುದಿಲ್ಲ ಎಂದರು.

29 ಸಾವಿರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಅವಕಾಶವಿದ್ದರೂ, ಕೇವಲ 15 ಸಾವಿರ ಮಂದಿ ಶಿಕ್ಷಕರನ್ನು ನೇಮಕ ಮಾಡಲು ಸರ್ಕಾರ ಮುಂದಾಗಿದೆ. ದೆಹಲಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಶೇ.25 ಮೀಸಲಿಟ್ಟಿದ್ದಾರೆ. ದೆಹಲಿ ಮಾದರಿಯಲ್ಲಿಯೇ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು. ದೆಹಲಿ ಸರ್ಕಾರದ ಮಾದರಿಯಲ್ಲಿ ನಾವು ಶಿವಲಿಂಗಪ್ಪ ಬಸಪ್ಪ ಹೊರಟ್ಟಿ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಅಭಿವೃದ್ಧಿ ಪಡಿಸಿದ್ದೇವೆ. ಈ ರೀತಿ ಪ್ರತಿ ಶಾಸಕರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಒಂದೊಂದು ಸರ್ಕಾರಿ ಶಾಲೆಯನ್ನು ಅಭಿವೃದ್ದಿ ಪಡಿಸಿದ್ದಲ್ಲಿ ಶಿಕ್ಷಣ ಕ್ಷೇತ್ರ ವೇಗವಾಗಿ ಬೆಳೆಯಲು ಸಾಧ್ಯವಿದೆ ಎಂದರು.

ಈ ಬಾರಿಯ ಬಜೆಟ್ ನಲ್ಲಿ ಶಿಕ್ಷಣಕ್ಕೆ ಒಳ್ಳೆಯ ಕೊಡುಗೆ ನೀಡಿರುವುದು ಸ್ವಾಗತಾರ್ಹ. ಕಾರ್ಯ ಸಾಧನೆಗೆ ಇಚ್ಚಾ ಶಕ್ತಿ ಬೇಕು, ಇಚ್ಚಾ ಶಕ್ತಿ ಇಲ್ಲದೆ ಇದ್ದರೆ ಏನು ಆಗಲಾರದು ಎಂದು ಹೇಳಿದ ಅವರು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಶಿಕ್ಷಣ ಕ್ರಾಂತಿ ಆಗಬೇಕು ಎಂದರು.


Spread the love