ಬಿಡದಿ ಸರ್ಕಾರಿ ಆಸ್ಪತ್ರೆ ಇಬ್ಬರು ವೈದ್ಯೆಯರು ಅಮಾನತು

Spread the love

ಬಿಡದಿ ಸರ್ಕಾರಿ ಆಸ್ಪತ್ರೆ ಇಬ್ಬರು ವೈದ್ಯೆಯರು ಅಮಾನತು

ರಾಮನಗರ: ಹರಿಗೆಗಾಗಿ ದಾಖಲಾಗಿದ್ದ ಬಾಣಂತಿಯನ್ನು ಡಿಸ್ಚಾರ್ಜ್ ಮಾಡಲು ಆಕೆಯ ಪತಿಗೆ 6 ಸಾವಿರ ರೂ ಲಂಚದ ಬೇಡಿಕೆ ಇಟ್ಟಿದ್ದ ಬಿಡದಿ ಸರ್ಕಾರಿ ಆಸ್ಪತ್ರೆಯ ಇಬ್ಬರು ವೈದ್ಯೆಯರನ್ನು ಸೇವೆಯಿಂದ ಅಮಾನತು ಪಡಿಸಲಾಗಿದೆ.

ತಾಲ್ಲೂಕಿನ ಬಿಡದಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ತ್ರೀರೋಗ ತಜ್ಞೆಯಾಗಿರುವ ವೈದ್ಯೆ ಡಾ.ಶಶಿಕಲಾ ಮತ್ತು ಡಾ.ಐಶ್ವರ್ಯ ರವರು ಲಂಚಕ್ಕೆ ಡಿಮ್ಯಾಂಡ್ ಮಾಡಿ ಅಮಾನತು ಶಿಕ್ಷೆಗೆ ಒಳಗಾಗಿರುವ ವೈದ್ಯೆಯರು. ಇವರು ಲಂಚಕ್ಕೆ ಪಟ್ಟು ಹಿಡಿಯುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು ಶನಿವಾರ ಬೆಳಗ್ಗಿನಿಂದಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಬಿಡದಿ ಪಟ್ಟಣದ ನಿವಾಸಿ ಮಂಜುನಾಥ್ ಎಂಬುವರು 10 ಸಾವಿರ ರೂ ಲಂಚ ಕೇಳುವ ವೈದ್ಯರ ಸಂಭಾಷಣೆಯನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಮಂಜುನಾಥ್‌ರವರು ತಮ್ಮ ಪತ್ನಿ ರೂಪ ಅವರನ್ನು ಹೆರಿಗೆಗಾಗಿ ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಬಿಡದಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಗರ್ಭಿಣಿಗೆ ಸಿಜರಿನ್ ಮೂಲಕ ಹೆರಿಗೆ ಮಾಡಲಾಗಿತ್ತು. ಬಾಣಂತಿ ಮತ್ತು ಮಗುವನ್ನು ಡಿಸ್‌ಚಾರ್ಜ್ ಮಾಡುವ ವೇಳೆ ಮಂಜುನಾಥ್ ಅವರು ನನ್ನ ಬಳಿ 2 ಸಾವಿರ ರೂ ಮಾತ್ರ ಇದೆ ಎಂದಾಗ ವೈದ್ಯೆ ಡಾ.ಶಶಿಕಲಾ ಅವರು ಒಬ್ಬರಿಗೊಂದು ನಾವು ಮಾಡುವುದಿಲ್ಲ, ಹೆರಿಗೆ ಕೇಸ್‌ಗೆ ತಲಾ ೬ ಸಾವಿರ ರೂ ಫಿಕ್ಸ್ ಮಾಡಿದ್ದೇವೆ. ಅಷ್ಟು ಕೊಡಲೇ ಬೇಕು ಎಂದಿದ್ದಾರೆ.

ಆರು ಸಾವಿರ ರೂ ಕೊಟ್ಟರೆ ಮೂರು ಜನ ತಲಾ ೨ ಸಾವಿರ ಹಂಚಿಕೊಳ್ಳುತ್ತೇವೆ. ನೀವು ಬರೀ 2 ಸಾವಿರ ಕೊಟ್ರೆ ತಲಾ 500 ರೂ ಹಂಚಲು ಆಗುವುದಿಲ್ಲ. ನೀವೇ ಮೂರು ಜನಕ್ಕೂ ತಲಾ 2 ಸಾವಿರ ಕೊಟ್ಬಿಡಿ ಎಂದು ವೈದ್ಯರು ಮತ್ತು ಮಹಿಳಾ ಸಿಬ್ಬಂದಿ ಲಂಚ ಕೇಳಿದ್ದಾರೆ. ನಾನು ಗಾರ್ಮೆಂಟ್ ಕೆಲಸಕ್ಕೆ ಹೋಗೋದು ನನಗೆ ಇನ್ನೂ ಸಂಬಳ ಆಗಿಲ್ಲ ಎಂದು ಮಂಜುನಾಥ್ ಕೋರಿಕೊಂಡರೂ ಸಹ ವೈದ್ಯರು ನೋ ಚಾನ್ಸ್, ನೀವೆ ಎಲ್ಲರಿಗೂ ಕೊಟ್ಟು ಹೋಗಿ ನನಗೆ ತಲೆ ನೋವು ಇರೋದಿಲ್ಲ ಎಂದು ಪಟ್ಟು ಹಿಡಿದಿರುವ ವಿಡಿಯೋ ವೈರಲ್ ಆಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಮತ್ತು ಸೇವೆ ಸಿಗುತ್ತದೆ ಎಂಬ ವಿಶ್ವಾಸದಿಂದ ಬಡವರ್ಗದ ಜನರು ಬರುತ್ತಾರೆ. ಆದರೆ ಅದು ಸುಳ್ಳು ಎಂಬುದು ಸಾಬೀತಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳನ್ನು ಸುಲಿಗೆ ಮಾಡುವ ಪ್ರಕರಣಗಳು ಹಾಗೂ ದೂರುಗಳು ನಿತ್ಯ ನಿರಂತರವಾಗಿವೆ. ಹೀಗಾಗಿ ಜಿಲ್ಲಾ ಆರೋಗ್ಯಾಧಿಕಾರಿ ಕಾಂತರಾಜು ಅವರು ಆರೋಗ್ಯ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದು ಅವರ ಆದೇಶದ ಮೇರೆಗೆ ಇಬ್ಬರು ವೈದ್ಯೆಯರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.


Spread the love