ಬಿಡುಗಡೆ ಮಾಡಿ ಬದುಕಲು ಅವಕಾಶ ಕೊಡಿ ಎಂದ ಕೈದಿಗಳು

Spread the love

ಬಿಡುಗಡೆ ಮಾಡಿ ಬದುಕಲು ಅವಕಾಶ ಕೊಡಿ ಎಂದ ಕೈದಿಗಳು

ಮೈಸೂರು: ಸನ್ನಢತೆ ಆಧಾರ ಮೇಲೆ ಬಿಡುಗಡೆಗೊಳಿಸಿ. ನಮಗೂ ಬದುಕಲು ಅವಕಾಶ ನೀಡಿ, ಇದು ಮೈಸೂರು ಕೇಂದ್ರ ಕಾರಾಗೃಹದಲ್ಲಿ ಸನ್ನಢತೆ ಆಧಾರದ ಮೇಲೆ ಬಿಡುಗಡೆಯಾಗಲು ಕಾದಿರುವ ಕೈದಿಗಳು ಗೃಹ ಸಚಿವರ ಎದುರು ಮನವಿಯನ್ನಿಟ್ಟಿದ್ದಾರೆ.

ಮೈಸೂರು ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಕಾರಾಗೃಹ ನಿವಾಸಿಗಳ ಅಹವಾಲು ಆಲಿಸಿದರು. ಈ ವೇಳೆ ಹಲವು ಮಂದಿ ಕೈದಿಗಳು, ಸನ್ನಢತೆ ಆಧಾರದ ಮೇಲೆ ಬಿಡುಗಡೆಗೆ ಹಲವು ಬಾರಿ ಶಿಫಾರಸ್ಸು ಆಗಿದ್ದರೂ ಬಿಡುಗಡೆಯಾಗಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಈ ಬಗ್ಗೆ ಕಾರಾಗೃಹ ಮುಖ್ಯ ಅಧೀಕ್ಷಕಿ ಕೆ.ಸಿ.ದಿವ್ಯಾಶ್ರೀ, ಸಮಿತಿಯಿಂದ ಶಿಫಾರಸ್ಸು ಮಾಡಲಾಗಿದ್ದರೂ ಕೆಲ ಕಾರಣಗಳಿಂದ ಸನ್ನಢತೆ ಆಧಾರದ ಮೇಲೆ ಬಿಡುಗೆಯಾಗುವುದು ತಿರಸ್ಕೃತಗೊಂಡಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಈ ಬಗ್ಗೆ ಕಚೇರಿಗೆ ಮಾಹಿತಿ ನೀಡಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ 93 ವರ್ಷದ ವೃದ್ದೆಯ ಅಹವಾಲನ್ನು ಸಚಿವರು ಆಲಿಸಿದರು. ಬಳಿಕ ಕಾರಾಗೃಹದಲ್ಲಿರುವ ಕೈ ಮಗ್ಗ ಘಟಕ, ಅಡುಗೆ ವಿಭಾಗ, ಕೌಶಲ ಅಭಿವೃದ್ದಿ ಕೇಂದ್ರ, ಹೊಲಿಗೆ ತರಬೇತಿ ಘಟಕ, ಮುಕ್ತ ವಿವಿಯ ಕಾರಾಗೃಹ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಾಥನಾ ಮಂದಿರಕ್ಕೆ ಭೇಟಿ ನೀಡುವಾಗ ಅಲ್ಲಿದ್ದ ಕೈದಿಗಳು ಗಾಯನ ಮಾಡುವ ಮೂಲಕ ಸಚಿವರನ್ನು ಸ್ವಾಗತಿಸಿದ್ದು, ವಿಶೇಷವಾಗಿತ್ತು.

ಕಾರಾಗೃಹದಲ್ಲಿ ಮಾದಕ ವಸ್ತು ಮತ್ತು ಮೊಬೈಲ್ ಬಳಕೆಯಾಗದಂತೆ ನಿಗಾವಹಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾರಾಗೃಹದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ. ಮಾದಕ ವಸ್ತುಗಳು ನುಸುಳದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಕಾರಾಗೃಹವನ್ನು ಸುಧಾರಣೆಯ ಹಾಗೂ ಮನ ಪರಿವರ್ತನೆಯ ತಾಣವೆಂದು, ಸ್ವೀಕರಿಸಿ, ಹಾಗೂ ಇಲ್ಲಿನ ಹೊರತಾಗಿಯೂ ಬದುಕು ಇದೆ ಎಂಬ ವಾಸ್ತವವನ್ನು ಅರಿತು ಕೊಳ್ಳಿ ಎಂದು ಕೈದಿಗಳಿಗೆ ಸಲಹೆ ನೀಡಿದರು. ಬಳಿಕ ಕಾರಾಗೃಹದ ಸಿಬ್ಬಂದಿಗಳೇ ನಿರ್ವಹಿಸುವ, ಕಾರಾಗೃಹದ ಎಫ್‌ಎಂ ಬಾನುಲಿ ಕೇಂದ್ರವನ್ನು ವೀಕ್ಷಿಸಿದರು. ಹಾಗೂ ಬಾನುಲಿ ಪ್ರಸಾರ ಕೇಂದ್ರದ ಮೂಲಕ, ಕಾರಾಗೃಹ ವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು.

ಸರಕಾರದಿಂದ ಕೈದಿಗಳ ಪುನರ್ವಸತಿ, ಹೆಚ್ಚಿಸಿರುವ ಕೂಲಿ ದರ, ಹಾಗೂ ಕಾರಾಗೃಹ ಅಭಿವೃದ್ದಿ ಮಂಡಳಿ ಅಸ್ತಿತ್ವಕ್ಕೆ ತಂದಿರುವ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಾರಾಗೃಹ ಮುಖ್ಯ ಅಧೀಕ್ಷಕಿ ಕೆ.ಸಿ.ದಿವ್ಯಾಶ್ರೀ, ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.


Spread the love