
ಬಿಳಿಗಿರಿರಂಗನಬೆಟ್ಟದಲ್ಲಿ ಅದ್ಧೂರಿ ಬ್ರಹ್ಮರಥೋತ್ಸವ
ಯಳಂದೂರು: ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಗುರುವಾರ ಬಿಳಿಗಿರಿರಂಗನಾಥ ಸ್ವಾಮಿಯ ದೊಡ್ಡ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರಗಳಿಂದ ನೆರವೇರಿತು.
ಬ್ರಹ್ಮರಥೋತ್ಸವ (ದೊಡ್ಡತೇರು)ವನ್ನು ಬೆಟ್ಟದ ತೇರಿನ ಬೀದಿಯಲ್ಲಿ ತೇರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ರಥದ ಎರಡೂ ಬದಿಯಲ್ಲಿ ಕಟ್ಟಿದ್ದ ಹಗ್ಗವನ್ನು ಗೋವಿಂದನ ನಾಮಸ್ಮರಣೆಯಲ್ಲಿ ಸಾವಿರಾರು ಭಕ್ತರು ಎಳೆದು ಪುನೀತ ಭಾವನೆಯನ್ನು ಮೆರೆದರು. ಸಾವಿರಾರು ಭಕ್ತರು ತೇರನ್ನು ಎಳೆದು ಭಕ್ತಿ ಸಮರ್ಪಿಸಿದರು. ತೇರನ್ನು ಎಳೆಯುತ್ತಿದ್ದಂತೆ ಉಘೇ…ಉಘೇ… ರಂಗಪ್ಪ ಎಂಬ ಕೂಗು ಭಕ್ತರಿಂದ ಮೊಳಗಿತು. ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ಕಾಡಿನ ಅನೇಕ ಪೋಡುಗಳಿಂದ ಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೋಲಿಗರು ಆಗಮಿಸಿ ತಮ್ಮ ನೆಚ್ಚಿನ ಭಾವ ಬಿಳಿಗಿರಿರಂಗಪ್ಪನಿಗೆ ಭಕ್ತಿ ಸಮರ್ಪಿಸಿದರು.
ವಿವಾಹವಾಗಿರುವ ನೂತನ ದಂಪತಿಗಳೂ ಸೇರಿದಂತೆ ಜಾತ್ರೆಗೆ ಆಗಮಿಸಿದ ಭಕ್ತರು ಇಲ್ಲೇ ಸಿಗುವ ಹಣ್ಣು ಜವನವನ್ನು ತೇರಿಗೆ ಎಸೆಯುವ ಮೂಲಕ ತಮ್ಮ ಹರಕೆಯನ್ನು ತೀರಿಸಿದ್ದು ಕಂಡುಬಂದಿತು. ನವದಂಪತಿಗಳಲ್ಲದೇ ಹರಕೆ ಹೊತ್ತಿದ್ದ ಅನೇಕ ಭಕ್ತರು ಸಹ ಈ ಧಾರ್ಮಿಕ ವಿಧಿಯನ್ನು ತೇರಿಸಿದರು. ಜೊತೆಗೆ ಅಲ್ಲೇ ಧೂಪವನ್ನು ಹಾಕುವ ಮೂಲಕ ಭಕ್ತಿ ಮೆರೆದರು.
ತೇರಿನ ನಂತರ ರಥಧಲ್ಲಿ ಕುಳ್ಳಿರಿಸಿದ್ದ ಉತ್ಸವ ಮೂರ್ತಿಯನ್ನು ವಿವಿಧ ಚಿನ್ನಾಭರಣಗಳಿಂದ ಅಲಂಕಾರಗೊಳಿಸಲಾಗಿತ್ತು. ಹರಕೆ ಹೊತ್ತ ಭಕ್ತರು ತಮ್ಮ ಮಂಟಪಗಳಲ್ಲಿ ಹಸಿರು ಚಪ್ಪರ ತಳಿರು ತೋರಣಗಳಿಂದ ಅಲಂಕರಿಸಿ ದೇವರ ಮೂರ್ತಿಯನ್ನು ಇಲ್ಲಿಟ್ಟು ಪೂಜೆ ಸಲ್ಲಿಸಿದರು.