ಬಿ.ಆರ್.ಹಿಲ್ಸ್ ನಲ್ಲಿ  ಕುಬ್ಜ ಹಲ್ಲಿ ಪತ್ತೆ

Spread the love

ಬಿ.ಆರ್.ಹಿಲ್ಸ್ ನಲ್ಲಿ  ಕುಬ್ಜ ಹಲ್ಲಿ ಪತ್ತೆ

ಚಾಮರಾಜನಗರ: ನೋಡಲು ವಿಭಿನ್ನ ಮತ್ತು ವಿಚಿತ್ರವಾಗಿರುವ ಹೊಸ ಪ್ರಭೇದದ ಹಲ್ಲಿಯೊಂದು ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹುಲಿಸಂರಕ್ಷಿತ ಪ್ರದೇಶದಲ್ಲಿ (ಬಿಆರ್‌ಟಿ) ಪತ್ತೆಯಾಗಿದ್ದು, ನೋಡುಗರ ಗಮನಸೆಳೆದಿದೆ.

ದಿನನಿತ್ಯ ನೋಡುವ ಹಲ್ಲಿಗಿಂತ ಭಿನ್ನ ಪ್ರಬೇಧದ ಈ ಹಲ್ಲಿಯನ್ನು ಅಶೋಕ ಟ್ರಸ್ಟ್‌ ಫಾರ್‌ ರಿಸರ್ಚ್‌ ಇನ್‌ ಇಕಾಲಜಿ ಅಂಡ್ ದಿ ಎನ್ವಿರಾನ್‌ಮೆಂಟ್‌ (ಏಟ್ರೀ) ಸಂಶೋಧಕ ಡಾ.ಅರವಿಂದ್‌ ಎನ್‌.ಎ. ಹಾಗೂ ಸಂಶೋಧನಾ ವಿದ್ಯಾರ್ಥಿ ಸೂರ್ಯನಾರಾಯಣನ್‌ ಅವರು ಪತ್ತೆ ಮಾಡಿದ್ದು, ಇದರ ಬಗ್ಗೆ ಅಧ್ಯಯನ ನಡೆಸಿ ಅದನ್ನು ‘ಕುಬ್ಜ ಹಲ್ಲಿ’ ಎಂದು ಕರೆದಿದ್ದು, ಇದು 2.57 ಸೆಂ.ಮೀನಷ್ಟು (25.7 ಮಿ.ಮೀ) ಉದ್ದವಿದೆ. ಇನ್ನು ಗಂಡು ಮತ್ತು ಹೆಣ್ಣು ನಡುವೆ ವ್ಯತ್ಯಾಸಗಳಿದ್ದು, ಗಂಡು ಹಲ್ಲಿಯ ದೇಹ ಕಂದು ಬಣ್ಣ ಹಾಗೂ ಬಾಲ ಕಪ್ಪಾಗಿದ್ದರೆ, ಹೆಣ್ಣು ಹಲ್ಲಿಯ ದೇಹ ಸಂಪೂರ್ಣ ಕಂದು ಬಣ್ಣದಿಂದ ಕೂಡಿದೆ.

2021ರ ಆಗಸ್ಟ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿ ಬಿಳಿಗಿರಿ ರಂಗನಬೆಟ್ಟ, ಕೆ.ಗುಡಿ ವ್ಯಾಪ್ತಿಯಲ್ಲಿ ಡಾ.ಅರವಿಂದ್‌ ಮತ್ತು  ಸಂಶೋಧನಾ ವಿದ್ಯಾರ್ಥಿ ಸೂರ್ಯನಾರಾಯಣನ್‌ ಅವರು ಹಲ್ಲಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಹಲ್ಲಿಯ ದೇಹ ರಚನೆ ಹಾಗೂ ಡಿಎನ್‌ಎ ಪರೀಕ್ಷೆಯ ದತ್ತಾಂಶಗಳನ್ನು ಅಧ್ಯಯನ ಮಾಡಿ, ಇದು ಹಲ್ಲಿಯ ಪ್ರತ್ಯೇಕ ಪ್ರಭೇದ ಎಂಬುದನ್ನು ನಿರೂಪಿಸಿದ್ದಾರೆ.

ಈ ಅಧ್ಯಯನ ವರದಿಯು ಪ್ರಾಣಿ ವಿಜ್ಞಾನಕ್ಕೆ ಸಂಬಂಧಿಸಿದ ಜರ್ಮನಿಯ ನಿಯತಕಾಲಿಕ ವರ್ಟೆಬ್ರೆಟ್‌ ಝೂಲಾಜಿಯಲ್ಲಿ ಪ್ರಕಟಗೊಂಡಿರುವುದು ವಿಶೇಷವಾಗಿದೆ.


Spread the love