ಬಿ.ಎ.ಎಸ್‍.ಎಫ್ ಕಂಪೆನಿಯಲ್ಲಿ ರಾಸಾಯನಿಕ ದುರಂತದ ಅಣುಕು ಪ್ರದರ್ಶನ 

Spread the love

ಬಿ.ಎ.ಎಸ್‍.ಎಫ್ ಕಂಪೆನಿಯಲ್ಲಿ ರಾಸಾಯನಿಕ ದುರಂತದ ಅಣುಕು ಪ್ರದರ್ಶನ  

ಮಂಗಳೂರು: ನಗರದ ಹೊರವಲಯದಲ್ಲಿರುವ ಬಿಎಎಸ್‍ಎಫ್ ರಾಸಾಯನಿಕ ಕಾರ್ಖಾನೆಗೆ ಶನಿವಾರ ಎಂದಿನಂತೆ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗಳು, ಕೆಲವೇ ಗಂಟೆಗಳಲ್ಲಿ ಘಟಕದಲ್ಲಿ ತಾಪಮಾನ ಹೆಚ್ಚಾಗಿ ರಾಸಾಯನಿಕ ಸೋರಿಕೆ ಉಂಟಾಗಿರುವುದನ್ನು ಗಮನಿಸಿ , ನೀರು ಸಿಂಪಡಿಸತೊಡಗಿದರು. ಆದರೆ ಎರಡು ರಾಸಾಯನಿಕ ಘಟಕದ ಸ್ಪಿಂಕ್ಲರ್ ಗಳಿಂದ ನೀರು ಚಿಮ್ಮತೊಡಗಿತು.

ಅಪಾಯದ ಸೂಚನೆಗಾಗಿ ಕಂಪೆನಿ ಆವರಣದಲ್ಲಿ ಅಳವಡಿಸಿದ್ದ ಸೈರನ್ ಮೊಳಗಿ, ಕಾರ್ಮಿಕರಿಗೆ ಎಚ್ಚರಿಕೆ ನೀಡಿತು. ತಕ್ಷಣವೇ ಹೊರಬಂದ ಸಿಬ್ಬಂದಿಗಳಲ್ಲಿ ಆತಂಕ ಮನೆ ಮಾಡಿತ್ತು. ಘಟಕದಿಂದ ಕೊನೆಯದಾಗಿ ಹೊರಬಂದ ಕಾರ್ಮಿಕ ತೀವ್ರ ಅಸ್ವಸ್ಥನಾಗಿ ಬಿದ್ದಾಗ ವೈದ್ಯಕೀಯ ತಂಡವು ಅವರಿಗೆ ಆಕ್ಸಿಜನ್ ಮಾಸ್ಕ್ ಹಾಕಿ ತುರ್ತಾಗಿ ಆ್ಯಂಬುಲೆನ್ಸ್ ಮೂಲಕ ಚಿಕಿತ್ಸೆಗೆ ಕರೆದೊಯ್ಯಲಾಯಿತು. ಸಂಸ್ಥೆಯ ಅಧಿಕಾರಿಗಳು ಘಟನೆಯ ಉಲ್ಬಣತೆಯನ್ನು ಜಿಲ್ಲಾಡಳಿತಕ್ಕೆ ಸಂದೇಶ ನೀಡಿದರು. ತಕ್ಷಣವೇ ಜಿಲ್ಲಾಡಳಿತ ಸ್ಥಳೀಯ ಜನರಿಗೆ ಎಚ್ಚರಿಕೆ ನೀಡಿ ಸಂಚರಿಸದಂತೆ ನೋಡಿಕೊಳ್ಳಲಾಯಿತು.

ಜಿಲ್ಲಾಡಳಿತದ ಮನವಿಯಂತೆ ಆಗಮಿಸಿದ ಎನ್‍ಡಿಆರ್‍ಎಫ್ ತಂಡವು , ರಾಸಾಯನಿಕ ಘಟಕದ ಕಂಟ್ರೋಲ್ ರೂಮ್ ನ್ನು ಸಂಪರ್ಕಿಸಿ ಘಟಕದ ತಾಪಮಾನವನ್ನು ಕಾಲಕಾಲಕ್ಕೆ ಆನ್‍ಲೈನ್ ಮೂಲಕ ಪರಿಶೀಲಿಸಿ, ತಾಪಮಾನದ ಆಧಾರದ ಮೇಲೆ ಹಂತ ಹಂತವಾಗಿ ಕಾರ್ಯಾಚರಣೆ ನಡೆಸಲಾಯಿತು.

ಕಂಪೆನಿ ಆವರಣದಿಂದ ತೋಕೂರು ಗ್ರಾಮ ವ್ಯಾಪ್ತಿಯಲ್ಲಿರುವ ಪರಿಸರಕ್ಕೆ ರಾಸಾಯನಿಕ ಹರಡಿದ್ದು, ಅಲ್ಲಿ ತಕ್ಷಣವೇ ಎನ್‍ಡಿಆರ್‍ಎಫ್, ವೈದ್ಯಕೀಯ ಹಾಗೂ ಗೃಹರಕ್ಷಕರ ದಳದ ತಂಡವು ಗಂಭಿರವಾಗಿ ಅಸ್ವಸ್ಥರಾದ 25 ಜನರನ್ನು ಸ್ಟ್ರೆಚ್ಚರ್ ನಲ್ಲಿ ಮಲಗಿಸಿ, ಸಿಲಿಂಡರ್ ಒಳಗೊಂಡ ಉಸಿರಾಟದ ಉಪಕರಣವನ್ನು ಅಳವಡಿಸಿ, ಕೂಡಲೇ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಉಳಿದ ಕೆಲವರನ್ನು ಹತ್ತಿರದ ಮಹಾಲಿಂಗೇಶ್ವರ ಶಾಲೆಗೆ ರವಾನಿಸಲಾಯಿತು.

ಸುತ್ತಮುತ್ತಲಿನ ಮನೆಗಳಿಗೆ ಭೇಟಿ ನೀಡಿ ರಾಸಾಯನಿಕ ಹರಡುವಿಕೆಯಿಂದ ಪರಿಣಾಮಗಳಾಗಿವೆ ಎಂಬ ಬಗ್ಗೆ ಎನ್‍ಡಿಆರ್‍ಎಫ್ ಹಾಗೂ ಪೊಲೀಸ್ ಸಿಬ್ಬಂದಿ ವಿಚಾರಣೆ ನಡೆಸಿ, ಚಿಕಿತ್ಸೆ ಅಗತ್ಯ ಇದ್ದವರನ್ನು ತಕ್ಷಣವೇ ಸ್ಥಳದಲ್ಲಿಯೇ ಎನ್‍ಡಿಆರ್‍ಎಫ್ ತಂಡದಿಂದ ತುರ್ತು ಮೆಡಿಕಲ್ ಶಿಬಿರಕ್ಕೆ ಪ್ರಥಮ ಚಿಕಿತ್ಸೆ ನೀಡಲು ಕರೆದೊಯ್ಯಲಾಯಿತು.

ರಾಸಾಯನಿಕ ಸೋರಿಕೆಯಾದ ತಕ್ಷಣವೇ ತೋಕೂರು ಗ್ರಾಮ ಕಲ್ಪಿಸುವ ರಸ್ತೆಯಲ್ಲಿ ಸಂಚರಿಸುವ ವಾಹನ ಹಾಗೂ ಜನರನ್ನು ಪೊಲೀಸ್ ತಂಡವು ತಡೆಹಿಡಿದು ಆ್ಯಂಬುಲೆನ್ಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಇದು ಶನಿವಾರ ಬಿಎಎಸ್‍ಎಫ್ ರಾಸಾಯನಿಕ ಕಾರ್ಖಾನೆಯಲ್ಲಿ ಆವರಣದಲ್ಲಿ ಜಿಲ್ಲಾಡಳಿತದ ಸಹಕಾರದೊಂದಿಗೆ ಎನ್‍ಡಿಆರ್‍ಎಫ್ ತಂಡದಿಂದ ರಾಸಾಯನಿಕ ದುರಂತದ ಅಣುಕು ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯಗಳು.
ಕೊನೆಯದಾಗಿ ಕಾರ್ಖಾನೆ ಅಧಿಕಾರಿಗಳು ಅಲ್ಲಿನ ಸ್ಥಳೀಯರಿಗಾದ ತೊಂದರೆಯನ್ನು ಘಟನೆಯ ಬಗ್ಗೆ ವಿಚಾರಿಸಿದರು.

ಎನ್‍ಡಿಆರ್‍ಎಫ್, ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್, ಬಿಎಸ್‍ಎಫ್ ಸಿಬ್ಬಂದಿ, ಗೃಹರಕ್ಷಕ ದಳದ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ 250 ಕ್ಕೂ ಸಿಬ್ಬಂದಿಗಳು ಅಣುಕು ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ಕಾರ್ಖಾನೆ ಮತ್ತು ಬಾಯ್ಲರ್‍ನ ಉಪನಿರ್ದೇಶಕರಾದ ರಾಜೇಶ್ ಮಿಶ್ರಿ ಕೋಟಿ ಮಾತನಾಡಿ, ರಾಸಾಯನಿಕ ದುರಂತದ ಸಂಭವಿಸಿದಾಗ ಸುತ್ತಮುತ್ತಲಿನ ಪರಿಸರದಲ್ಲಿ ಆಗುವ ಅಪಾಯವನ್ನು ಸಾರ್ವಜನಿಕರಿಗೆ ರಕ್ಷಣೆಯ ಅರಿವು ಮೂಡಿಸುವುದು ನಮ್ಮ ಕರ್ತವ್ಯ ಎಂದರು.

ಸ್ಟಿರೈನ್ ರಾಸಾಯನಿಕ ಕಾರ್ಖಾನೆಯಲ್ಲಿರುವ ಎರಡು ಘಟಕದಲ್ಲಿ ಅವಘಡ ಸಂಭವಿಸಿದರೆ ಸ್ಥಳೀಯರು ಹಾಗೂ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಹಾಗೂ ಆರೋಗ್ಯ ಸಿಬ್ಬಂದಿಗಳು ಎಚ್ಚೆತ್ತುಕೊಂಡು ತಕ್ಷಣವೇ ಯಾವ ರೀತಿಯಾಗಿ ಪರಿಸ್ಥಿತಿಯನ್ನು ನಿಭಾಯಿಸಬಹುದು ಎಂದು ಈ ಅಣುಕು ಪ್ರದರ್ಶನದ ಮೂಲಕ ತಿಳಿಸಲಾಯಿತು.
ರಾಸಾಯನಿಕ ಸೋರಿಕೆಯ ಸಂದರ್ಭದಲ್ಲಿ ಅದು ಗಾಳಿಯಲ್ಲಿ ಸೇರಿಕೊಂಡು, ಪರಿಸರದಲ್ಲಿ ಹಬ್ಬಿ ಮನುಷ್ಯನ ದೇಹದ ಒಳಗೆ ಪ್ರವೇಶಿಸಿ ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡಬಹುದು. ಅಲ್ಲದೇ ಕಣ್ಣು, ಚರ್ಮದ ಮೇಲೆಯೂ ಪರಿಣಾಮ ಬೀರಬಹುದು. ಗಾಯಾಳುಗಳಿಗೆ ರಾಸಾಯನಿಕ ಘಟಕದಲ್ಲಿ ಅವಗಡಗಳು ಸಂಭವಿಸದಂತೆ ನಿಗಾವಹಿಸಿ ಕಾರ್ಯನಿರ್ವಹಿಸಬೇಕು. ಅವಘಡ ಸಂಭವಿಸಿದರೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಕಾರ್ಯಪ್ರವೃತ್ತರಗಬೇಕು ಎಂದರು.

ಬೆಂಗಳೂರು ಸಹಾಯಕ ಕಮಾಂಡೆಂಟ್ ಸೆಂಥಿಲ್ ಕುಮಾರ್ ಮಾತನಾಡಿ, ಪ್ರದರ್ಶನದಲ್ಲಿ ಪಾಲ್ಗೊಂಡ ಸಿಬ್ಬಂದಿಗಳು ಟೆಲಿಟೆಕ್ಟರ್, ಜಿಎಮ್ ಸರ್ವೇ ಮೀಟರ್, ಹೂಡ್ ಮಾಸ್ಕ್, ಸಿಲಿಂಡರ್ ಒಳಗೊಂಡ ಉಸಿರಾಟದ ಉಪಕರಣ, ಜಾಕೆಟ್‍ಗಳು ಹಾಗೂ ಅಗತ್ಯ ಉಪಕರಣಗಳನ್ನು ಉಪಯೋಗಿಸಲಾಯಿತು ಎಂದರು.

ಸುಮಾರು ಒಂದು ತಾಸಿನ ಅಣುಕು ಪ್ರದರ್ಶನದಲ್ಲಿ ಎನ್‍ಡಿಆರ್‍ಎಫ್ ನ 25 ಸಿಬ್ಬಂದಿಗಳು, 4 ಆ್ಯಂಬುಲೆನ್ಸ್‍ಗಳು, 15 ಗೃಹರಕ್ಷಕದಳ ಸಿಬ್ಬಂದಿಗಳು ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವುದರ ಮೂಲಕ ಈ ಪ್ರದರ್ಶನವು ಯಶಸ್ವಿಯಾಗಿದೆ ಎಂದರು.

ಎನ್.ಐ.ಟಿ.ಕೆ ಪ್ರಾಧ್ಯಾಪಕ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಶ್ರೀನಿಕೇತನ್ ಮಾತನಾಡಿ, ಎನ್‍ಡಿಆರ್‍ಎಫ್ ತಂಡವು ಬೆಂಗಳೂರಿನಲ್ಲಿರುವುದರಿಂದ ಇಲ್ಲಿ ಅನಾಹುತವಾದಾಗ ಅವರು ಇಲ್ಲಿಗೆ ತಲುಪಲು ಕೆಲವು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಇಲ್ಲಿರುವ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಹಾಗೂ ಇತರೆ ಇಲಾಖೆಗಳು ಹೇಗೆ ತಕ್ಷಣವೇ ಸ್ಪಂದಿಸಬೇಕು ಎಂಬುವುದೇ ಈ ಅಣುಕು ಪ್ರದರ್ಶನದ ಉದ್ದೇಶವಾಗಿದೆ ಎಂದರು.

ಅಣುಕು ಪ್ರದರ್ಶನದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ವಿಜಯ್‍ಕುಮಾರ್, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ವಸಂತ್ ಕುಮಾರ್, ಗೃಹರಕ್ಷಕ ದಳದ ಡೆಪ್ಯೂಟಿ ಕಮಾಂಡೆಂಟ್ ರಮೇಶ್, ಬಿಎಎಸ್‍ಎಫ್ ಸಿಬ್ಬಂದಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love