ಬಿ.ಜನಾರ್ಧನ ಪೂಜಾರಿಯವರಿಗೆ ಅವಹೇಳನ- ದಕ ಜಿಲ್ಲಾ ಕಾಂಗ್ರೆಸ್ ಖಂಡನೆ

Spread the love

ಬಿ.ಜನಾರ್ಧನ ಪೂಜಾರಿಯವರಿಗೆ ಅವಹೇಳನ- ದಕ ಜಿಲ್ಲಾ ಕಾಂಗ್ರೆಸ್ ಖಂಡನೆ

ಮಂಗಳೂರು: ಮೂಡಬಿದ್ರಿಯ ಜಗದೀಶ ಅಧಿಕಾರಿಯವರು (ಜಿಲ್ಲಾ ಬಜೆಪಿ ಉಪಾಧ್ಯಕ್ಷ) ಬಿ.ಜನಾರ್ಧನ ಪೂಜಾರಿಯವರ ಕುರಿತು ಆಡಿದ ಮಾತುಗಳು ಖಂಡನೀಯ ಎಂದು ದಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿ.ಜನಾರ್ಧನ ಪೂಜಾರಿ ಇವರು ಈ ನಾಡು ಕಂಡ ಓರ್ವ ಶ್ರೇಷ್ಠ ವ್ಯಕ್ತಿ. ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿ. 4 ಬಾರಿ ಮಂಗಳೂರು ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿ 2 ಬಾರಿ ಕೇಂದ್ರ ಸಚಿವರಾಗಿ, ಸಾಲ ಮೇಳದ ರುವಾರಿಯಾಗಿ “ಬಡವರ ಬಂಧು” ಎನಿಸಿಕೊಂಡವರು. ಅಖಿಲ ಭಾರತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ,  ಸದಸ್ಯರಾಗಿ, 2 ಬಾರಿ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದಲ್ಲಿ ಉನ್ನತ ಸ್ಥಾನ ಮಾನ ಹೊಂದಿದ ದ.ಕ. ಜಿಲ್ಲೆಯ ಹೆಮ್ಮೆಯ ಪುತ್ರ. ವೃದ್ಧಾಪ್ಯದಲ್ಲಿದ್ದರೂ ಸಾಮಾಜಿಕ ಕಾಳಜಿ ಹೊಂದಿರುವ ಸಮಾಜದ ಆಸ್ತಿ ಎಂದರು.

ಕೆಲದಿನಗಳ ಹಿಂದೆ ಮೂಡಬಿದ್ರಿಯ ಜಗದೀಶ ಅಧಿಕಾರಿಯವರು (ಜಿಲ್ಲಾ ಬಜೆಪಿ ಉಪಾಧ್ಯಕ್ಷ) ಬಿ.ಜನಾರ್ಧನ ಪೂಜಾರಿಯವರ ಕುರಿತು ಆಡಿದ ಮಾತುಗಳು ಖಂಡನೀಯ. ಹಿಂದೆ ಜನಾರ್ಧನ ಪೂಜಾರಿಯವರ ಕಾಲು ಹಿಡಿದುಕೊಂಡಿದ್ದ ವ್ಯಕ್ತಿ. ಮೂಡಬಿದ್ರಿಯಲ್ಲಿ ಪಕ್ಷದ ಟಿಕೆಟ್ ಸಿಗದೆ ಪಕ್ಷ ತ್ಯಜಿಸಿ ಈಗ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿದ್ದಾರೆ. ಅವರು ಭಾಷಣ ಮಾಡಿದ ಸಂದರ್ಭ ಕೆಲ ವಿಚಾರಗಳನ್ನು ಉಲ್ಲೇಖಿಸಿ, ಜನಾರ್ಧನ ಪೂಜಾರಿಯವರ ಕಾಲು ಹಿಡಿಯಲಾರೆ ಎಂದಿದ್ದಾರೆ. ಆ ಸಂದರ್ಭ ಪೂಜಾರಿಯವರ ಹೆಸರು ಉಲ್ಲೇಖಿಸುವ ಅವಶ್ಯಕತೆ ಏನಿತ್ತು. ಪೂಜಾರಿಯವರನ್ನು ಉದಾಹರಿಸಿದ್ದು ಯಾಕೆ?: ಈ ವಯಸ್ಸಿನಲ್ಲಿ ಅವರಿಗೆ ಅವಮಾನ ಮಾಡಿರುವುದು ಅವರ ಅಭಿಮಾನಿಗಳು ಬಹಳ ನೊಂದಿದ್ದಾರೆ. ನಾನು ಅಧಿಕಾರಿಯವರ ಮಾತುಗಳನ್ನು ಖಂಡಿಸುತ್ತೇನೆ. ಮಾತ್ರವಲ್ಲ ಬೇರೆ ಜಾತಿ, ಜನಾಂಗದ ಹೆಸರೆತ್ತಿ ಜಾತಿ ಮಧ್ಯೆ ಕಂದಕ, ಅಪನಂಬಿಕೆ ಹುಟ್ಟಿಸಿರುವುದು ಕೂಡ ಖಂಡನೀಯ. ಬಿಲ್ಲವ ಜನಾಂಗ ಇವರಿಗೆ ಅಪಥ್ಯವಾದಲ್ಲಿ ಅವರನ್ನು ವೈಯಕ್ತಿಕವಾಗಿ ದೂರ ವಿರಿಸಲಿ. ಅದು ಅವರಿಗೆ ಬಿಟ್ಟ ವಿಚಾರ. ನಮ್ಮನ್ನು ನಂಬಿ ಎಂದು ನಾವು ಯಾರಲ್ಲಿಯೂ ಅಂಗಲಾಚಿಲ್ಲ.

ಬಿಲ್ಲವ ಜನಾಂಗ ಯಾವತ್ತೂ ಯಾವುದೇ ಜಾತಿ, ಧರ್ಮ, ಕೋಮು ಇತ್ಯಾದಿ ಬೇಧ ಭಾವ ಹೊಂದದೆ ಎಲ್ಲರೊಂದಿಗೆ ಅನ್ಯೋನ್ಯವಾಗಿ ಸ್ನೇಹ ಹೊಂದಿರುವ ಜನಾಂಗ. ಈ ಜನಾಂಗದ ವೀರ ಪುರುಷರಾದ ಕೋಟಿ ಚೆನ್ನಯರವರ ಬಗ್ಗೆ ಕೂಡ ಅಧಿಕಾರಿಯವರು ಉಲ್ಲೇಖಿಸಿದ್ದಾರೆ. ಕೋಟಿ ಚೆನ್ನಯರು ಸತ್ಯ, ನ್ಯಾಯಕ್ಕಾಗಿ ಹೋರಾಡಿದ ನಿಷ್ಠಾವಂತರು. ಅವರ ವಿಚಾರದಲ್ಲಿಯೂ ಜಾತಿ ಬಗ್ಗೆ ನಿಂದಿಸಿದ್ದೀರಿ. ಅವರು ಮಾಡಿದ ಅನ್ಯಾಯಕ್ಕೆ ಎಲ್ಲರೂ ಸೇರಿ ಕೊಂದರು ಎಂದು ಹೇಳಿದ್ದೀರಿ. ನಿಮಗೆ ಅವರ ಬಗ್ಗೆ ಗೌರವ ಇಲ್ಲದಿದ್ದರೆ ನಮ್ಮ ಅಭ್ಯಂತರ ಇಲ್ಲ. ಆದರೆ ಕೋಟಿ ಚೆನ್ನಯರ ಗರೋಡಿಗಳು ಬಿಲ್ಲವರಿಂದ ಮಾತ್ರವಲ್ಲ ಬಂಟ, ಜೈನ ಇತರ ಸಮುದಾಯದವರಿಂದಲೂ ಭಕ್ತಿಯಿಂದ ನಡೆಸಲ್ಪಡುತ್ತಿದೆ. ತಿಳಿದಿರಲಿ. ಈ ಎಲ್ಲಾ ವಿಚಾರಗಳನ್ನು ಅತೀವ ಖಂಡಿಸುತ್ತೇನೆ. ಇದು ನಿಮ್ಮ ದುರಾಹಂಕಾರದ ಪರಮಾವಧಿ.

ಇಂದಿನಿಂದ 7 ದಿನಗಳ ಒಳಗಾಗಿ ಅಧಿಕಾರಿ ಬಿಲ್ಲವ ಜನಾಂಗ ಕೋಟಿ ಚೆನ್ನಯರು, ಜನಾರ್ಧನ ಪೂಜಾರಿಯವರ ಕುರಿತು ಆಡಿದ ಮಾತಿಗೆ ಕ್ಷಮೆಯಾಚಿಸಲು ಆಗ್ರಹಿಸುತ್ತೇನೆ. ಇಲ್ಲವೇ ಮುಂದಿನ ದಿನಗಳಲ್ಲಿ ಅಧಿಕಾರಿಯವರ ನಿವಾಸದ ಎದುರು ಪ್ರತಿಭಟನೆ, ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು


Spread the love