ಬುದ್ಧಿಜೀವಿ ವರ್ಗ ಸಮಯೋಚಿತ ತೀರ್ಮಾನ ತೆಗೆದುಕೊಳ್ಳಬೇಕು

Spread the love

ಬುದ್ಧಿಜೀವಿ ವರ್ಗ ಸಮಯೋಚಿತ ತೀರ್ಮಾನ ತೆಗೆದುಕೊಳ್ಳಬೇಕು

ಮಂಡ್ಯ: ಜಿಲ್ಲೆಯಲ್ಲಿ ಎಲ್ಲ ರೀತಿಯ ಸಂಪನ್ಮೂಲಗಳಿದ್ದರೂ ಆರ್ಥಿಕ ಚಟುವಟಿಕೆಯಲ್ಲಿ ಹಿಂದೆ ಬಿದ್ದಿದ್ದು ಜನರು ಸಾಲದ ಸುಳಿಗೆ ಸಿಲುಕಿದ್ದಾರೆ. ಇಂದಿನ ಆಧುನಿಕತೆ ತಂತ್ರಜ್ಞಾನದ ಯುಗದಲ್ಲೂ ಜಿಲ್ಲೆಯು ಅಭಿವೃದ್ಧಿ ಕಾಣುತ್ತಿಲ್ಲ. ಹಲವು ಸಮಸ್ಯೆಗಳು ಜಿಲ್ಲೆಯನ್ನು ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಬುದ್ಧಿಜೀವಿ ವರ್ಗ ಸಮಯೋಚಿತ ತೀರ್ಮಾನ ತೆಗೆದುಕೊಂಡು ಜಿಲ್ಲೆಯ ಅಭಿವೃದ್ಧಿಗೆ ಒತ್ತಡ ಹೇರುವ ಕೆಲಸಕ್ಕೆ ಮುಂದಾಗಬೇಕು ಎಂದು ಚಿಂತಕ, ನಿವೃತ್ತ ಪ್ರಾಂಶುಪಾಲ ಹುಲ್ಲುಕೆರೆ ಮಹದೇವು ಅಭಿಪ್ರಾಯಪಟ್ಟರು.

ನಗರದ ಗಾಂಧಿಭವನದಲ್ಲಿ ನಡೆದ ಜಿಲ್ಲೆಯ ಬರಹಗಾರರ, ಕಲಾವಿದರ ಸಭೆಗೆ ಚಾಲನೆ ನೀಡಿ ಮಾತನಾಡಿ, ಜನರ ಹಿತಾಸಕ್ತಿ ಬಲಿಕೊಡುವ ಕೆಲಸಗಳ ಹಿಂದೆ ಯಾರು ಯಾರದೋ ಹಿತಾಸಕ್ತಿಗಳು ಅಡಗಿವೆ. ಅದು ಯಾರೇ ಆಗಿದ್ದರೂ ಬುದ್ಧಿಜೀವಿ ವರ್ಗ ಸಮಯೋಚಿತ ತೀರ್ಮಾನ, ಸಂದೇಶ, ಕಾರ್ಯತಂತ್ರವನ್ನು ಜಿಲ್ಲಾಡಳಿತಕ್ಕೆ, ಸರಕಾರಕ್ಕೆ ರವಾನೆ ಮಾಡದಿದ್ದರೆ ಬೇಜವಾಬ್ದಾರಿ ಪ್ರದರ್ಶಿಸಿದಂತಾಗುತ್ತದೆ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶಗೌಡ ಮಾತನಾಡಿ ಹಿಂದೆ ವರುಣ, ಗೋಕಾಕ್‌ನಂತಹ ಚಳುವಳಿಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಒಬ್ಬರ ನಾಯಕತ್ವದಲ್ಲಿ ಚಳುವಳಿಗಳು ಯಶಸ್ವಿ ಕಾಣುತ್ತಿದ್ದು ಇಂದು ಹತ್ತಾರು ಜನರ ನಾಯಕತ್ವದಲ್ಲಿ ಮೈಷುಗರ್‌ಗೆ ಗಟ್ಟಿನೆಲೆ ಒದಗಿಸಲು ಸಾಧ್ಯವಿಲ್ಲ. ಏನೇ ಸಾರ್ವತ್ರಿಕ ವಿಚಾರ ಬಂದಾಗ ನಮ್ಮತನ ಪಕ್ಕಕ್ಕಿಟ್ಟು ಸೋಲು-ಗೆಲುವನ್ನು ಲೆಕ್ಕಿಸದೆ ಮುನ್ನಡೆಯುವಂತಾಗಬೇಕು. ಜಿಲ್ಲೆಯಲ್ಲಿ ರೈತ, ಕಾರ್ಮಿಕ, ಮಹಿಳಾ, ದಲಿತ ಮುಂತಾದ ಸಂಘಟನೆಗಳು ಆಯಾ ಕ್ಷೇತ್ರದ ಅಭಿವೃದ್ಧಿಯ ಕಡೆ ಗಮನ ನೀಡುತ್ತಿವೆ. ಅನ್ನದ ಜೊತೆಗೆ ಸಾಂಸ್ಕೃತಿಕ ಎಚ್ಚರವೂ ನಮಗೆ ಅಗತ್ಯವಾಗಬೇಕು. ಜಿಲ್ಲೆಯ ರಂಗಮಂದಿರದ ಸ್ಥಿತಿ, ಶಿವಪುರ ಸತ್ಯಾಗ್ರಹ ಸೌಧ, ಜಿಲ್ಲೆಯಲ್ಲಿ ಒಂದು ಹೊರಾವರಣ ರಂಗಮಂದಿರವಿಲ್ಲ, ಪ್ರವಾಸೋದ್ಯಮ ಸ್ಥಿತಿಗಳು ಏನಾಗಿವೆ? ಭಿನ್ನಾಭಿಪ್ರಾಯ ಮರೆತು ಒಂದಾಗುವ ಮನಸ್ಥಿತಿ ನಮ್ಮಲ್ಲಿ ಇಂದು ಇಲ್ಲ. ಇದನ್ನು ಆತ್ಮಾವಲೋಕನ ಮಾಡಿಕೊಂಡು ಲೇಖಕರು, ಬರಹಗಾರರು, ಚಿಂತಕರು ಒಂದುಗೂಡಿ ಪಕ್ಷಾತೀತ ವೇದಿಕೆಯಲ್ಲಿ ಒಂದು ಸಮರ್ಥ ನಾಯಕತ್ವದಡಿಯಲ್ಲಿ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಗಮನ ಕೊಡಬೇಕಾದ ಅಗತ್ಯವಿದ್ದು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗೋಣ ಎಂಬ ಸಲಹೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಜಿ.ಟಿ.ವೀರಪ್ಪ ಮಾತನಾಡಿ ಸದ್ಯದ ಪರಿಸ್ಥಿತಿಯಲ್ಲಿ ಸಕ್ಕರೆ ಕಾರ್ಖಾನೆಯನ್ನು ಸರ್ಕಾರವೇ ವಹಿಸಿಕೊಂಡು ದಕ್ಷ ಎ.ಂಡಿ.ಯನ್ನು ನೇಮಿಸಿ ಒಂದು ಕಾವಲು ಸಮಿತಿ ರಚಿಸಿ ಪ್ರಾರಂಭಿಸಬೇಕು ಎಂದು ಹೇಳಿದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಚ್.ಎಸ್.ಮುದ್ದೇಗೌಡ ಮಾತನಾಡಿ ಜಿಲ್ಲೆಯ ಸಮಸ್ಯೆಗಳಿಗೆ ಮಾಡು ಇಲ್ಲವೇ ಮಡಿ ಎಂಬ ತೀರ್ಮಾನಕ್ಕೆ ಬಂದು ಹೋರಾಟ ಮಾಡಬೇಕು. ಇಂದಿನ ಯುವ ರಾಜಕೀಯ ಮುಂದಾಳುಗಳು ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ನಮಗೂ ಅದಕ್ಕೂ ಸಂಬಂಧವಿಲ್ಲದ ರೀತಿ ವರ್ತಿಸುತ್ತಿದ್ದಾರೆ. ಎಲ್ಲ ಸಂಘಟನೆಗಳ ನಾಯಕರುಗಳು ದ್ವೀಪದಂತಾಗುತ್ತಿದ್ದಾರೆ. ಎಲ್ಲರನ್ನು ಒಂದುಗೂಡಿಸುವ ಕಲಸವಾಗಬೇಕು. ಸಾರ್ವತ್ರಿಕ ಸಮಸ್ಯೆಗಳ ವಿಷಯ ಬಂದಾಗ ಎಲ್ಲಾ ಭಿನ್ನಾಭಿಪ್ರಾಯ ಬದಿಗೊತ್ತಿ ಸಂಘಟಿತರಾಗಿ ಹೋರಾಡಬೇಕು ಎಂದು ಸಲಹೆ ನೀಡಿದರು.

ಹಿರಿಯ ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಮಾತನಾಡಿ ಮಾತನಾಡ ವ್ಯರ್ಥ ಮಾತು, ಜಡತ್ವ ಬಿಟ್ಟು ಕಾರ್ಯೋನ್ಮುಖರಾಗಬೇಕು. ಎಂದು ತಿಳಿಸಿದರು. ದಿಕ್ಕಾಪಾಲಾಗಿರುವ ಸಂಘಟನೆಗಳನ್ನು ಒಂದುಗೂಡಿಸಿ ಯಾರಾದರೂ ಒಬ್ಬರ ನೇತೃತ್ವದಲ್ಲಿ ಮುನ್ನಡೆಯುವುದಾದರೆ ಯಶಸ್ಸು ಕಾಣಬಹುದು ಎಂದರು. ಹಿರಿಯ ಸಾಹಿತಿ ಪತ್ರಕರ್ತ ಜಗದೀಶ್ ಕೊಪ್ಪ, ಸಾಹಿತಿ ಹೊಸಳ್ಳಿ ಡಿ. ಶಿವು, ಮೀರಾ ಶಿವಲಿಂಗಯ್ಯ, ನಾಗರೇವಕ್ಕ, ಎಂ.ವಿ.ಧರಣೇಂದ್ರಯ್ಯ, ಲಿಂಗಣ್ಣ ಬಂಧುಕಾರ್, ತೂಬಿನಕೆರೆ ಲಿಂಗರಾಜು ಮುಂತಾದವರು ಉಪಸ್ಥಿತರಿದ್ದರು.


Spread the love