ಬೆಂಗಳೂರು | ಬ್ಯಾರಿಸ್ ಸೆಂಟ್ರಲ್ ಕಮಿಟಿಯ ನೂತನ ಅಧ್ಯಕ್ಷರಾಗಿ ಶಬೀರ್ ಬ್ರಿಗೇಡ್ ಮರು ಆಯ್ಕೆ
ಬೆಂಗಳೂರಿನಲ್ಲಿ ಉದ್ಯೋಗ, ವ್ಯಾಪಾರ ಸೇರಿದಂತೆ ತಮ್ಮ ಬದುಕು ಕಟ್ಟಿಕೊಂಡಿರುವ ಕರಾವಳಿ ಭಾಗದ ಬ್ಯಾರಿ ಸಮುದಾಯದ ಯುವಕರೇ ಕಟ್ಟಿಕೊಂಡಿರುವ ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಇದರ ವಾರ್ಷಿಕ ವಿಶೇಷ ಮಹಾಸಭೆಯು ಕ್ವೀನ್ಸ್ ರೋಡ್‌ನ ದಾರುಸ್ಸಲಾಂ ಸಭಾಂಗಣದಲ್ಲಿ ಬುಧವಾರ(ಜುಲೈ 9) ಸಂಜೆ ನಡೆಯಿತು.
ಕಳೆದ ಒಂದು ವರ್ಷ ಅವಧಿಯ ಖರ್ಚು ವೆಚ್ಚ, ವಾರ್ಷಿಕ ಕೆಲಸಕಾರ್ಯಗಳ ವರದಿಯನ್ನು ಪ್ರಧಾನ ಕಾರ್ಯದರ್ಶಿ ನಾಸಿರ್ ಕೆಂಪಿ ವಾಚಿಸಿದರು.
ಹೊಸ ನಾಯಕತ್ವ ಆಯ್ಕೆ ಪ್ರಕ್ರಿಯೆಯನ್ನು ಬಿಸಿಸಿಯ ಮಾರ್ಗದರ್ಶಕರಾದ ಸುಹೈಲ್ ಕಂದಕ್ ಹಾಗೂ ಹನೀಫ್ ಖಾನ್ ಕೊಡಾಜೆ ನೆರವೇರಿಸಿ ಕೊಟ್ಟರು.
ನೂತನವಾಗಿ 55 ಸದಸ್ಯರ ಕಾರ್ಯಕಾರಿಣಿ ಸಮಿತಿಯು ಆಯ್ಕೆಗೊಂಡ ನಂತರ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆ ನಡೆಸಿ ಮುಂಬರುವ 2 ವರ್ಷಗಳ ಅವಧಿಗೆ ಹೊಸ ನಾಯಕತ್ವವನ್ನು ಆರಿಸಲಾಯಿತು.
ನೂತನವಾಗಿ ರಚಿಸಲಾದ ಕಮಿಟಿಗೆ ಅಧ್ಯಕ್ಷರಾಗಿ ಶಬೀರ್ ಬ್ರಿಗೇಡ್ ಅವರನ್ನು ಪುನರಾಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಕೆಂಪಿ, ಉಪಾಧ್ಯಕ್ಷರುಗಳಾಗಿ ಗಫೂರ್ ಕೆಂಟ್, ಸಮದ್ ಕುಂತೂರ್, ಸಂಶುದ್ದೀನ್ ಕುಕ್ಕಾಜೆ, ಸಲೀತ್ ಮಾರ್ಥಳ್ಳಿ, ಸಲೀಂ ಸಿ ಎಂ ಹಾಗೂ ಕಾರ್ಯದರ್ಶಿಗಳಾಗಿ ಝಮೀರ್ ಉಳ್ಳಾಲ್,
ಮಾಝಿನ್ ಕಾವಳಕಟ್ಟೆ, ರಹೀಮ್ ಚಿಕ್ಕಪೇಟೆ, ಸಮದ್ ಮದ್ದಡ್ಕ, ಹಾರಿಸ್ ಜಿ ಎಸ್ ಕೆ ಅವರನ್ನು ಆಯ್ಕೆ ಮಾಡಲಾಯಿತು.
ಕೋಶಾಧಿಕಾರಿಯಾಗಿ ರಿಫಾಯಿ ವಸಂತನಗರ ಮತ್ತು ಮಾಧ್ಯಮ ಕಾರ್ಯದರ್ಶಿಯಾಗಿ ಬಶೀರ್ ಅಡ್ಯನಡ್ಕ, ಕಾನೂನು ಕಾರ್ಯದರ್ಶಿಯಾಗಿ ಅಡ್ವೋಕೇಟ್ ಖಲಂದರ್ ಕೊಯ್ಲ, ಪಿ ಆರ್ ಕಾರ್ಯದರ್ಶಿಯಾಗಿ ಅಯ್ಯುಬ್ ಕೋರಮಂಗಲ, ಆರೋಗ್ಯ ಕಾರ್ಯದರ್ಶಿಯಾಗಿ ರಫೀಕ್ ಪಾನೆಲ, ಕ್ರೀಡಾ ಕಾರ್ಯದರ್ಶಿಯಾಗಿ ಬದ್ರುದ್ದಿನ್ ಕಾಜೂರ್ ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯದರ್ಶಿಯಾಗಿ ಆಫ್ಜಲ್ ಉಚ್ಚಿಲ ಅವರನ್ನು ಆಯ್ಕೆ ಮಾಡಲಾಯಿತು.
ಸಂಘಟನಾ ಕಾರ್ಯದರ್ಶಿಗಳಾಗಿ ಶಿಹಾಬ್ ಕಾಟಿಪಳ್ಳ, ಹಾರಿಸ್ ಬೆಳ್ಮ, ಆಸೀಫ್ ಪಿ ಕೆ, ಸವಾದ್ ಆರ್ ಟಿ ನಗರ
ಖಲಂದರ್ ಅವರನ್ನು ಪದಾಧಿಕಾರಿಗಳಾಗಿ ನೇಮಿಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮಾರ್ಗದರ್ಶಕ ಹನೀಫ್ ಖಾನ್ ಕೊಡಾಜೆ, “ಪ್ರವಾದಿ ಮುಹಮ್ಮದ್ (ಸ) ಅವರು ಈ ಲೋಕಕ್ಕೆ ಬಂದ ಇಸ್ಲಾಮಿನ ಅಂತಿಮ ಪ್ರವಾದಿಗಳು. ಅವರು ತಮ್ಮ ಜನರೊಂದಿಗೆ ಸೌಮ್ಯ ಹಾಗೂ ಪ್ರೀತಿಯ ಸ್ವಭಾವದಿಂದ ವರ್ತಿಸಿ, ಜನಾನುರಾಗಿ ಆಗಿ ಕೆಲಸ ಮಾಡಿದ್ದಾರೆ. ಅದುವೇ ನಮ್ಮ ಎಲ್ಲಾ ಕೆಲಸ ಕಾರ್ಯಗಳಿಗೆ ಮಾರ್ಗವಾಗಬೇಕು. ಅವರ ಜೀವನ ಶೈಲಿಯನ್ನು ನಾವು ಕೂಡ ಅಳವಡಿಸಿ, ಬ್ಯಾರಿ ಸಮುದಾಯದ ಉನ್ನತಿಗೆ ಶ್ರಮಿಸಬೇಕು. ಸಮುದಾಯದ ಎಲ್ಲಾ ಆಗುಹೋಗುಗಳಿಗೆ ಸ್ಪಂದಿಸುವ ಸೂಕ್ಷ್ಮ ಮನಸ್ಸು ಹೊಂದುವವರಾಗಬೇಕು” ಎಂದು ಸಲಹೆ ನೀಡಿದರು.
ಬ್ಯಾರಿ ಸಮುದಾಯದ ರಾಜಕೀಯ ಮುಖಂಡ ಸುಹೈಲ್ ಕಂದಕ್ ಮಾತನಾಡುತ್ತಾ, “ಬೆಂಗಳೂರಿನಲ್ಲಿರುವ ಬ್ಯಾರಿಗಳನ್ನು ಒಂದುಗೂಡಿಸುವ ಮಹತ್ವದ ಉದ್ದೇಶವನ್ನಿಟ್ಟು, ಕಳೆದ ಒಂದೂವರೆ ವರ್ಷಗಳ ಹಿಂದೆ ಆರಂಭಗೊಂಡ ಬ್ಯಾರಿಸ್ ಸೆಂಟ್ರಲ್ ಕಮಿಟಿ ಸಮುದಾಯದ ನಡುವೆ ಒಳ್ಳೆಯ ಹೆಸರು ಗಳಿಸುವಲ್ಲಿ ಯಶಸ್ವಿಯಾಗಿದೆ. ಅದಕ್ಕೆ ಎಲ್ಲರ ಸಹಕಾರ, ನಿಸ್ವಾರ್ಥ ಸೇವೆ ಕೂಡ ಕಾರಣ. ಬ್ಯಾರಿ ಸಮುದಾಯವು ರಾಜಕೀಯ ಸೇರಿದಂತೆ ಎಲ್ಲಾ ರಂಗಗಳಲ್ಲಿ ಯಶಸ್ಸನ್ನು ಕಾಣಬೇಕು” ಎಂದು ಆಶಿಸಿದರು.
ಸಭೆಯಲ್ಲಿ ಸಂಶುದ್ದೀನ್ ಕುಕ್ಕಾಜೆ ಸ್ವಾಗತಿಸಿದರು. ನಾಸಿರ್ ಕೆಂಪಿ ಧನ್ಯವಾದಗೈದರು. ಸಂಪೂರ್ಣ ಕಾರ್ಯಕ್ರಮವನ್ನು ಬಶೀರ್ ಅಡ್ಯನಡ್ಕ ನಿರೂಪಿಸಿದರು.