
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಜನರ ಪಾಲಿಗೆ ಸಾವಿನ ಹೆಮ್ಮಾರಿ
ರಾಮನಗರ: ಶನಿವಾರ ಬೆಳಗಿನಜಾವ ಸುರಿದ ಮಳೆಗೆ ಕೆರೆಯಂತಾಗಿರುವ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಜನರ ಪಾಲಿಗೆ ಸಾವಿನ ಹೆಮ್ಮಾರಿ ಆಗಿದೆ. ಸರ್ವೀಸ್ ರಸ್ತೆ ಸೇರಿದಂತೆ ಎಲ್ಲ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸುವವರೆಗೆ ಟೋಲ್ ಸಂಗ್ರಹ ನಿಲ್ಲಿಸಬೇಕೆಂದು ಶಾಸಕಿ ಅನಿತಾ ಕುಮಾರಸ್ವಾಮಿ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹೆದ್ದಾರಿಯಲ್ಲಿ ಉಂಟಾದ ಸಮಸ್ಯೆಗಳ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಡಬಲ್ ಎಂಜಿನ್ ಬಿಜೆಪಿ ಸರ್ಕಾರಗಳು, ಈ ರಸ್ತೆ ನಮ್ಮ ಹೆಮ್ಮೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಸಂದರ್ಭದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯ ಅಸಲಿ ಮುಖ ಮತ್ತೊಮ್ಮೆ ಕಳಚಿ ಬಿದ್ದಿದೆ. ಬೆಳಗಿನ ಜಾವ ಸುರಿದ ಒಂದು ಮಳೆಗೆ ಚರಂಡಿ ಉಕ್ಕಿ ಹರಿದಿದ್ದು ರಸ್ತೆ ಕೆರೆಯಾಗಿ ಮಾರ್ಪಟ್ಟಿದೆ ಎಂದು ಟೀಕಿಸಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಅಬ್ಬರಿಸಿದ ಮಹಾಮಳೆಗೆ ಇದೇ ಎಕ್ಸ್‌ಪ್ರೆಸ್ ಹೆದ್ದಾರಿ ತತ್ತರಿಸಿತ್ತು. ಕಾಮಗಾರಿಗಳು ಮುಗಿದಿರಲಿಲ್ಲ ಎಂದು ಹೇಳಿ ಗುತ್ತಿಗೆದಾರರು ಆಗ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು. ಆರೇಳು ತಿಂಗಳ ನಂತರ ಸುರಿದ ಒಂದು ಮಳೆಗೆ ಸಾವಿರಾರು ಕೋಟಿ ವೆಚ್ಚದ ಈ ಹೆದ್ದಾರಿ ವಾಹನ ಸವಾರರ ಪಾಲಿಗೆ ನರಕವಾಗಿದೆ.
ಅವೈಜ್ಞಾನಿಕವಾದ ಈ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸದೆ ತರಾತುರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ಮಾಡಿಸಿರುವುದು ಕೇವಲ ಚುನಾವಣಾ ಗಿಮಕ್ ಎಂದು ಜನರು ಹಾದಿಬೀದಿಯಲ್ಲಿ ಮಾತನಾಡುತ್ತಿದ್ದಾರೆ. ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ಇದಕ್ಕೆ ಉತ್ತರದಾಯಿಗಳು ಯಾರು? ಎಂದು ಅನಿತಾ ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.
ಬೆಳಗಿನ ಜಾವ ಸುರಿದ ಮಳೆಯಿಂದ ಹೆದ್ದಾರಿಯಲ್ಲಿ ಭಾರಿ ಪ್ರಮಾಣದ ನೀರು ನಿಂತಿದೆ. ವಾಹನಗಳು ಕಟ್ಟುನಿಂತು ಅಪಘಾತಕ್ಕೀಡಾಗಿ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ. 270 ರೂ. ಟೋಲ್ ಕಟ್ಟಿ ಹೆzರಿಗೆ ಬಂದ ವಾಹನ ಸವಾರರು ಮಳೆ ಚಳಿಯಲ್ಲಿ ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ನರಳಿದ್ದಾರೆ. ಇದು ನಿಜಕ್ಕೂ ನೋವಿನ ಸಂಗತಿ ಎಂದಿದ್ದಾರೆ.
ಶನಿವಾರ ಬೆಳಿಗ್ಗೆ ಸುರಿದ ಮಳೆಗೆ ತಾಲ್ಲೂಕಿನ ಸಂಗನಬಸವನದೊಡ್ಡಿ ಸಮೀಪ ಬೆಂಗಳೂರು-ಮೈಸೂರು ಎಕ್ಸ್‌ಪ್ರಸ್ ವೇ ನಲ್ಲಿ ನೀರು ಹರಿಯದೆ ನಿಂತ ಕಾರಣ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ನೀರಿನಲ್ಲಿ ಸಂಚರಿಸಿದ ಕೆಲವು ವಾಹನಗಳು ಕೆಟ್ಟು ನಿಲ್ಲುವ ಪರಿಸ್ಥಿತಿ ಎದುರಾಯಿತು. ಕೆಟ್ಟು ನಿಂತ ಕಾರೊಂದಕ್ಕೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದು ಕಾರು ಜಖಂ ಆಯಿತು. ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಎಕ್ಸ್‌ಪ್ರಸ್ ಹೆದ್ದಾರಿಯಲ್ಲಿ ಉಂಟಾದ ಸಮಸ್ಯೆ ಹಾಗೂ ಅವಘಡಗಳ ಬಗ್ಗೆ ಗಮನ ಸೆಳೆಯಲು ಹೈವೆ ಪ್ರಾಧಿಕಾರದ ಅಧಿಕಾರಿಗಳಿಗೆ ಕರೆ ಮಾಡಿದರೂ ನೆರವಿಗೆ ಬಾರದ ಕಾರಣ ವಾಹನ ಸವಾರರು ಸರ್ಕಾರ ಮತ್ತು ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಳೆ ನೀರು ಹರಿಯದೆ ರಸ್ತೆಯಲ್ಲಿ ನಿಂತ ಪರಿಣಾಮ ಅವೈಜ್ಞಾನಿಕ ಕಾಮಗಾರಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿ ಹೆದ್ದಾರಿಯಲ್ಲಿನ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿದರು.